ಪಡುಬಿದ್ರಿ: ಹೆದ್ದಾರಿಯಲ್ಲಿ ರಸ್ತೆ ವಿಭಾಜಕ ತೆರವಿಗೆ ಪ್ರತಿಭಟನೆ

ಪಡುಬಿದ್ರಿ: ಹೆದ್ದಾರಿಯಲ್ಲಿ ರಸ್ತೆ ವಿಭಾಜಕ ತೆರವಿಗೆ ಪ್ರತಿಭಟನೆ
ಸುರಕ್ಷತೆ ದೃಷ್ಟಿಯಿಂದ ತೆರವು ಅಸಾಧ್ಯವೆಂದ ನವಯುಗ್ ಅಧಿಕಾರಿ ಶಂಕರ್

ಪಡುಬಿದ್ರಿಯಿಂದ ಇಲ್ಲಿನ ಗ್ರಾಮ ದೇವಳ,ಬೀಚ್,ಕಾಡಿಪಟ್ಣ-ನಡಿಪಟ್ಣ,ಶಾಲೆಗಳಿಗೆ ತೆರಳುವ ಅತೀ ಪ್ರಮುಖ ಹಾಗೂ ಜನನಿಬಿಡ ಪ್ರದೇಶಗಳಿಗೆ ತೆರಳುವ ಗಣಪತಿ ದ್ವಾರದ ಬಳಿ ರಸ್ತೆ ವಿಭಾಜಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಸಮಾನಾಸಕ್ತರು ವಿವಿಧ ಸಂಘಟನೆಗಳೊಂದಿಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ,ಜನರಿಗೆ ಅನುಕೂಲವಾಗುವಂತೆ ರಸ್ತೆ ವಿಭಾಜಕ ನಿರ್ಮಿಸಬೇಕಿತ್ತು.ನವಯುಗ್ ಕಂಪನಿಯು ತನ್ನ ಮರ್ಜಿಗೆ ತಕ್ಕಂತೆ ಕಾಮಗಾರಿ ನಡೆಸಿದೆ.ಸಂಸದರು ದೂರವಾಣಿ ಮೂಲಕ ಸಂಪರ್ಕಿಸಿದರೂ ಫೋನ್ ಎತ್ತುವುದಿಲ್ಲ.ನಮ್ಮ ಗ್ರಾಮದಲ್ಲಿ ನಮಗೆ ತಕ್ಕಂತೆ ವಿಭಾಜಕ ನಿರ್ಮಿಸಬೇಕಿತ್ತು.ಜನರ ಅಭಿಪ್ರಾಯ ಮೀರಿ ವಿಭಾಜಕ ನಿರ್ಮಿಸಿದಲ್ಲಿ ಎಲ್ಲರೂ ಒಂದಾಗಿ ಅದನ್ನು ಮುರಿಯುತ್ತೇವೆ ಎಂದು ಗುಡುಗಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ಮಾತನಾಡಿ,ಬಂಡವಾಳಶಾಹಿಗಳು ಮತ್ತು ಬಲಾಡ್ಯರ ಮಾತಿಗೆ ಗುತ್ತಿಗೆದಾರ ಕಂಪನಿ ಮಣೆ ಹಾಕಿದೆ.ಜನಸಾಮಾನ್ಯರ ಬೇಡಿಕೆಯಂತೆ ಇಲ್ಲೇ ರಸ್ತೆ ವಿಭಾಜಕ ತೆರವುಗೊಳಿಸಬೇಕು.ನಮ್ಮ ತಾಳ್ಮೆಗೂ ಮಿತಿಯಿದೆ.ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟಕ್ಕೂ ಸಿದ್ಧ ಎಂದರು.

ಶ್ರೀ ಮಹಾಲಿಂಗೇಶ್ವರ ಮಹಾಗಣಂಪತಿ ದೇವಳದ ಅನುವಂಶಿಕ ಮೊಕ್ತೇಸರ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಮಾತನಾಡಿ,ಹೆದ್ದಾರಿ ಪ್ರಾಧಿಕಾರವು ಕಾನೂನಾತ್ಮಕವಾಗಿ ವರ್ತಿಸುತ್ತಿಲ್ಲ.ಜನರ ಸಮಸ್ಯೆಗಳನ್ನು ಅರ್ಥೈಸಿ ಜನರು ಬಯಸಿದಲ್ಲಿ ರಸ್ತೆ ವಿಭಾಜಕ ನಿರ್ಮಿಸಬೇಕೆಂದರು.

ಈ ಸಂದರ್ಭ ರಸ್ತೆ ವಿಭಾಜಕ ತೆರವಿಗೆ ಕಾಡಿಪಟ್ಣ-ನಡಿಪಟ್ಣ ಮೊಗವೀರ ಸಂಯುಕ್ತ ಮೊಗವೀರ ಸಭಾ,ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಮ್,ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳಗಳ ವತಿಯಿಂದ ಹೆದ್ದಾರಿ ಇಲಾಖೆ,ಸಂಸದರು,ಶಾಸಕರು,ಜಿಲ್ಲಾಡಳಿತ ಹಾಗೂ ಸಂಬಂಧಿತರಿಗೆ ನೀಡಿದ ಮನವಿಯ ಪ್ರತಿಯೊಂದಿಗೆ ಪಡುಬಿದ್ರಿ ನಾಗರಿಕರ ಹೆಸರಲ್ಲಿ ನವಯುಗ್ ಪ್ರಾಜೆಕ್ಟ್ ಮ್ಯಾನೇಜರ್ ಶಂಕರ್ ಮತ್ತು ಹೆದ್ದಾರಿ ಇಂಜಿನಿಯರ್ ಬಾಲಚಂದ್ರ ಹಾಗೂ ಡೆಪ್ಯುಟಿ ತಹಶೀಲ್ದಾರ್‍ರವರಿಗೆ ನಾರಾಯಣ ಗುರು ಮಂದಿರದ ಮುಂಭಾಗ ರಸ್ತೆ ವಿಭಾಜಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಂಕರ್,ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ರಸ್ತೆ ವಿಭಾಜಕ ತೆರವು ಸಾಧ್ಯವಿಲ್ಲ.ಪಡುಬಿದ್ರಿಯಿಂದ ಬಂಟರ ಭವನವರೆಗೆ ಕೇವಲ 45 ಮೀಟರ್ ಭೂಸ್ವಾಧೀನಪಡಿಸಲಾಗಿದ್ದು,ಉದ್ದೇಶಿತ ಯೋಜನೆಯಂತೆ ರಸ್ತೆ ವಿಭಾಜಕ ನಿರ್ಮಾಣ ಸಾಧ್ಯವಾಗಿಲ್ಲ.60 ಮೀಟರ್ ಭೂಸ್ವಾಧೀನಕ್ಕೆ ಒಪ್ಪಿದಲ್ಲಿ ರಸ್ತೆ ವಿಭಾಜಕ ತೆರವು ಸಾಧ್ಯ ಎಂದರು.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜನತೆ ಬಯಸಿದಂತೆ ರಸ್ತೆ ವಿಭಾಜಕ ನಿರ್ಮಿಸಬೇಕಿದ್ದಲ್ಲಿ,ಹೆದ್ದಾರಿ ಇಲಾಖೆಯು ವಿವಿಧ ಇಲಾಖಾಧಿಕಾರಿಗಳು,ಸ್ಥಳೀಯಾಡಳಿತ ಮತ್ತು ಸಾರ್ವಜನಿಕರೊನ್ನೊಳಗೊಂಡಂತೆ ಸಮಾಲೋಚನಾ ಸಭೆ ನಡೆಸಿದಲ್ಲಿ ಅಲ್ಲಿನ ತೀರ್ಮಾನದಂತೆ ವಿಭಾಜಕ ಸಾಧ್ಯವಿದೆ ಎಂದರು.

ಹೆದ್ದಾರಿ ಇಲಾಖಾ ಎಎಚ್‍ಇ ಬಾಲಚಂದ್ರ ಮಾತನಾಡಿ,ಸಂಸದರು,ದೇವಳ ಹಾಗೂ ಟೂರಿಸಮ್ ನೀಡಿದ ಮನವಿಗೆ ಈಗಾಗಲೇ ಪ್ರತ್ಯುತ್ತರ ನೀಡಲಾಗಿದೆ.ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ರಸ್ತೆ ವಿಭಾಜಕ ತೆರವು ಅಸಾಧ್ಯ.ಆದಾಗ್ಯೂ ಜನರ ಅನುಕೂಲಕ್ಕಾಗಿ ಪಡುಬಿದ್ರಿಯಲ್ಲಿ 980 ಮೀಟರ್ ಉದ್ದದ ಸರ್ವಿಸ್ ರಸ್ತೆ ನಿರ್ಮಿಸಲಿದ್ದು,ಅದನ್ನು ಸದುಪಯೋಗಪಡಿಕೊಂಡಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ.ಇಲ್ಲಿ 60 ಮೀಟರ್ ಭೂಸ್ವಾಧೀನಕ್ಕೆ ಒಪ್ಪಿದಲ್ಲಿ ಜನತೆ ಬಯಸಿದಂತೆ ವಿಭಾಜಕ ನಿರ್ಮಿಸಬಹುದು ಎಂದರು.

ಕಾಡಿಪಟ್ಣ-ನಡಿಪಟ್ಣ ಸಂಯುಕ್ತ ಮೊಗವೀರ ಸಭಾದ ಅಧ್ಯಕ್ಷ ಸುಕುಮಾರ್ ಶ್ರೀಯಾನ್,ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯರಾದ ನೀತಾ ಗುರುರಾಜ್ ಮತ್ತು ದಿನೇಶ್ ಕೋಟ್ಯಾನ್,ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ,ಉದ್ಯಮಿ ಮಿಥುನ್ ಆರ್.ಹೆಗ್ಡೆ,ಲೀಲಾಧರ ಸಾಲ್ಯಾನ್ ಕಾಡಿಪಟ್ಣ,ಶೇಖರ್ ಕೆ.ಸಾಲ್ಯಾನ್ ನಡಿಪಟ್ಣ,ಜಯ ಕರ್ನಾಟಕದ ಅನ್ಸಾರ್ ಅಹ್ಮದ್,ಆಸಿಫ್,ನವೀನ್ ಎನ್.ಶೆಟ್ಟಿ,ರಾಜೇಶ್ ಕೋಟ್ಯಾನ್,ಗಣೇಶ್ ಕೋಟ್ಯಾನ್, ಲೋಕೇಶ್ ಕಂಚಿನಡ್ಕ,ಸದಾಶಿವ ಪಡುಬಿದ್ರಿ,ಶ್ರೀನಾಥ್ ಹೆಗ್ಡೆ,ಮುರಳೀನಾಥ್ ಶೆಟ್ಟಿ,ಅಶೋಕ್ ಸಾಲ್ಯಾನ್,ಜಯ ಶೆಟ್ಟಿ,ವಿಶುಕುಮಾರ್ ಶೆಟ್ಟಿಬಾಲ್,ಶರತ್ ಶೆಟ್ಟಿ,ಜುನೈದ್ ಇಮ್ರಾನ್,ಬುಡಾನ್ ಸಾಹೇಬ್,ಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.