ಪಡುಬಿದ್ರಿ ಸಿ.ಎ.ಬ್ಯಾಂಕ್‍ಗೆ ವೈ.ಸುಧೀರ್ ಕುಮಾರ್ ನೇತೃತ್ವದ ಬಣ ಅವಿರೋಧ ಆಯ್ಕೆ

ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನಿರ್ದೇಶಕ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ವೈ.ಸುಧೀರ್ ಕುಮಾರ್ ನೇತೃತ್ವದ 13 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆಬ್ರವರಿ ಒಂದರಂದು ನಿರ್ದೇಶಕ ಮಂಡಳಿಗೆ ಚುನಾವಣೆ ನಿಗದಿಯಾಗಿದ್ದು, ನಾಮಪತ್ರ ಹಿಂತೆಗೆಯುವ ಜ.26ರಂದು 13 ಸದಸ್ಯರ ನಾಮಪತ್ರ ಮಾತ್ರ ಊರ್ಜಿತವಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕಾರ್ಕಳ ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣ್ ಕುಮಾರ್ ಎಸ್.ವಿ. ಅವಿರೋಧ ಆಯ್ಕೆಯನ್ನು ಘೋಷಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ವೈ.ಸುಧೀರ್ ಕುಮಾರ್(5ನೇ ಬಾರಿ ಆಯ್ಕೆ), ಗುರುರಾಜ್ ಪೂಜಾರಿ(4), ರಸೂಲ್ ವೈ.ಜಿ.(3), ಶಿವರಾಮ ಎನ್.ಶೆಟ್ಟಿ(4), ವಾಸುದೇವ ದೇವಾಡಿಗ(4), ಮಾಧವ ಆಚಾರ್ಯ(2), ರಾಜಾರಾಮ ರಾವ್(2), ಮಹಿಳಾ ಮೀಸಲು ಕ್ಷೇತ್ರದಿಂದ ಸುಚರಿತಾ ಎಲ್.ಅಮೀನ್(2), ಕುಸುಮಾ ಎಮ್.ಕರ್ಕೇರ(2), ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಗಿರೀಶ್ ಪಲಿಮಾರು(5), ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಸ್ಟ್ಯಾನಿ ಕ್ವಾಡ್ರಸ್(ಮೊದಲ ಬಾರಿ), ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಯಶವಂತ್(3), ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕಾಂಚನಾ(ಮೊದಲ ಬಾರಿ) ಅವಿರೋಧ ಆಯ್ಕೆಯಾದವರು.

ಸೊಮವಾರ ಪಡುಬಿದ್ರಿ ಸಿ.ಎ.ಬ್ಯಾಂಕ್‍ನ ಸಹಕಾರ ಸಂಗಮ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾತನಾಡಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳದೆ ಸ್ವತಂತ್ರ ನೆಲೆಯಲ್ಲಿ ಆಯ್ಕೆ ಬಯಸಿದ್ದು, ಈ ಹಿಂದಿನ ಅತ್ಯುತ್ತಮ ಆಡಳಿತದಿಂದ ನಮಗೆ ಅವಿರೋಧ ಆಯ್ಕೆ ಲಭಿಸಿದೆ. ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಕನಿಷ್ಠ 4ಲಕ್ಷ ರೂ. ಉಳಿತಾಯವಾಗಿದ್ದು, ಸಂಸ್ಥೆಯ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಬಳಸಲಾಗುವುದು ಎಂದರು.

ಮುಂದಿನ 5 ವರ್ಷಗಳಲ್ಲಿ ಸೊಸೈಟಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಕಳೆದ 8 ವರ್ಷಗಳಲ್ಲಿ ಶೆ.25 ಡಿವಿಡೆಂಟ್ ನೀಡಿದ ಏಕೈಕ ಸೊಸೈಟಿ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಪಡುಬಿದ್ರಿ ಸಿಟಿ ಬ್ರಾಂಚ್ ಆಧುನೀಕರಣಗೊಳಿಸಲಾಗುವುದು. ಹೆಜಮಾಡಿ ಶಾಖೆಯನ್ನು ಮೇಲ್ದರ್ಜಗೇರಿಸಲಾಗುವುದು. ಹೆಜಮಾಡಿ ಶಿವನಗರ ಬಳಿ ಇರುವ ಸೊಸೈಟಿಯ ಸ್ವಂತ ಜಾಗದಲ್ಲಿ ಗೋದಾಮು ರಚನೆ ಮಾಡಲಾಗುವುದು. ಪಲಿಮಾರು ಶಾಖೆಯಲ್ಲಿ ನೂತನ ಕಟ್ಟಡ ರಚನೆಯೊಂದಿಗೆ ಮೇಲ್ದರ್ಜೆಗೇರಿಸಲಾಗುವುದು. ಪಡುಬಿದ್ರಿ ಆರೋಗ್ಯ ಕೇಂದ್ರದ ನೂತನ ಶೀತಲೀಕೃತ ಶವಾಗಾರ ನಿರ್ಮಾಣಕ್ಕೆ ಶಾಸಕ ಲಾಲಾಜಿ ಮೆಂಡನ್ ಕೋರಿಕೆಯ ಮೇರೆಗೆ 5 ಲಕ್ಷ ರೂ. ನೀಡಲಾಗುವುದು ಎಂದ ಅವರು ಕೃಷಿಪತ್ತಿನ ಸಹಕಾರ ಸಂಸ್ಥೆ ನಮ್ಮದಾಗಿದ್ದು, ನಾವು ಯಾವುದೇ ಬಣದಲ್ಲಿ ಗುರುತಿಸಿಕೊಂಡಿಲ್ಲ ಎಂದರು.

15 ದಿನದೊಳಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ: ಚುನಾವಣಾಧಿಕಾರಿ ನಿಗದಿಪಡಿಸಿದ ದಿನದಂದು ಮುಂಬರುವ 15 ದಿನದೊಳಗೆ ನೂತನ ಆಡಳಿತ ಸಮಿತಿಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಫೆಬ್ರವರಿ 4ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯುವ ನಿರೀಕ್ಷೆ ಇದೆ ಎಂದವರು ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಕಳೆದ ಸಾಲಿನ ಎಲ್ಲಾ 11 ಸದಸ್ಯರು ಮರು ಆಯ್ಕೆಯಾಗಿದ್ದು, ಎರಡು ಹೆಚ್ಚುವರಿ ಸ್ಥಾನಗಳಲ್ಲೂ ಅವಿರೋಧ ಆಯ್ಕೆ ನಡೆದಿದೆ. ಗ್ರಾಮವ್ಯಾಪ್ತಿಯ 10 ವಿವಿಧ ಜಾತಿಗಳ 13 ಸದಸ್ಯರ ಆಯ್ಕೆ ನಡೆದಿದೆ ಎಂದು ಸುಧೀರ್ ಕುಮಾರ್ ಹೇಳಿದರು.
ಬಾಕ್ಸ್

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಮುಂದಿನ 5 ವರ್ಷಗಳ ಅವಧಿಗೆ ಎಲ್ಲಾ 13 ಸ್ಥಾನಗಳಿಗೆ ನಿರ್ದೇಶಕರ ಅವಿರೋಧ ಆಯ್ಕೆಯಾಗಿರುವುದರಿಂದ ಫೆಬ್ರವರಿ ಒಂದು ಶನಿವಾರ ಪಡುಬಿದ್ರಿ ಮಾರ್ಕೆಟ್ ರಸ್ತೆಯ ಸುಜಾತಾ ಅಡಿಟೋರಿಯಮ್‍ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಅರುಣ್ ಕುಮಾರ್ ಎಸ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.