ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವಜ್ರಮಹೋತ್ಸವ ಕಟ್ಟಡ ಸಹಕಾರ ಸಂಗಮ ಲೋಕಾರ್ಪಣೆ

ಸಹಕಾರಿ ಬ್ಯಾಂಕ್‍ಗಳು ಎಂದಿಗೂ ಮುಚ್ಚುವುದಿಲ್ಲ:ಮುಚ್ಚಿಸುವ ಪ್ರಯತ್ನ ಯಶಸ್ವಿಯಾಗದು-ಎಮ್.ಎನ್.ರಾಜೇಂದ್ರ ಕುಮಾರ್

ಪಡುಬಿದ್ರಿ: ಪ್ರಜಾಪ್ರಭುತ್ವದ ಅಡಿ ಬೆಳೆಯುತ್ತಿರುವ ನಮ್ಮ ಸಹಕಾರಿ ಸಂಸ್ಥೆಗಳು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಅದನ್ನು ಮುಚ್ಚಿಸಲು ನಡೆಯುತ್ತಿರುವ ಪ್ರಯತ್ನವೂ ಯಶಸ್ವಿಯಾಗದು ಎಂದು ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರಿ ರತ್ನ ಎಮ್.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವಜ್ರ ಮಹೋತ್ಸವ ಅಂಗವಾಗಿ ಪಡುಬಿದ್ರಿ ಅಂಚೆ ಕಛೇರಿ ಮುಂಭಾಗ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ವ್ಯವಸ್ಥೆಯ ವಜ್ರಮಹೋತ್ಸವ ಕಟ್ಟಡ “ಸಹಕಾರ ಸಂಗಮ”ವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಒಂದು ಕಡೆ ಇನ್‍ಕಂ ಟ್ಯಾಕ್ಸ್ ಮತ್ತೊಂದೆಡೆ ಸಹಕಾರಿ ಬ್ಯಾಂಕ್‍ಗಳಲ್ಲಿ ಮತದಾನಕ್ಕೆ ಅವಕಾಶವಿದ್ದವರು ಮಾತ್ರ ಠೇವಣಿ ಮಾಡಬೇಕೆಂದು ಸರಕಾರ ನಿರ್ಧಾರ ಕೈಗೊಳ್ಳಲಿರುವುದು ಸಹಕಾರ ಕ್ಷೇತ್ರಕ್ಕೆ ಮಾರಕವಾಗಲಿದೆ. ಆದರೆ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಜಿಲ್ಲೆಯ ಸಹಕಾರ ಕ್ಷೇತ್ರಕ್ಕಿದೆ. ನಮಗೆ ಸರಕಾರದ ಯಾವುದೇ ಬಂಡವಾಳದ ನಿರೀಕ್ಷೆ ಇಲ್ಲ. ನಮಗೆ ಜನರ ಬಂಡವಾಳವೇ ಶ್ರೀರಕ್ಷೆ. ಸಹಕಾರಿ ಬ್ಯಾಂಕ್‍ಗಳಲ್ಲಿ ಶಾಲೆಗಳ ಖಾತೆಗಳನ್ನು ಮುಚ್ಚಲು ವಿದ್ಯಾಂಗ ಇಲಾಖೆ ಆದೇಶಿಸಿದೆ. ಆದರೆ ಇಂದಿನ ಸಹಕಾರಿ ಸಮಾರಂಭದಲ್ಲಿ ಶಿಕ್ಷಕರಿಗೆ ಸನ್ಮಾನ ನಡೆಸುವ ಮೂಲಕ ನಮ್ಮ ಹೆಚ್ಚುಗಾರಿಕೆಯನ್ನು ಪ್ರಸ್ತುತಪಡಿಸಿದ್ದೇವೆ ಎಂದವರು ಹೇಳಿದರು.

ಅವಿಭಜಿತ ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದರೆ ವಾಣಿಜ್ಯ ಬ್ಯಾಂಕ್‍ಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ ಎಂದ ಅವರು ನಮ್ಮ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದೇ ವೇದಿಕೆಗೆ ತಂದ ಕೀರ್ತಿ ಸಹಕಾರಿ ಸಂಸ್ಥೆಗಳಿಗೆ ಸಲ್ಲುತ್ತದೆ ಎಂದವರು ಅಭಿಪ್ರಾಯಿಸಿದರು.

ಸೊಸೈಟಿಯ ನೂತನ ಸಭಾಂಗಣವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ತತ್ವ ಸಿದ್ದಾಂತಗಳಿಗೆ ಪೂರಕವಾಗಿ ಕೆಲಸ ಮಾಡುವ ಸಹಕಾರಿ ಸಂಸ್ಥೆಗಳು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. 60 ವರ್ಷಗಳ ಹಿಂದೆ ಸೊಸೈಟಿಯನ್ನು ಆರಂಭಿಸಿದ ಮತ್ತು ಸಂಸ್ಥೆಗಾಗಿ ಶ್ರಮಿಸಿದವರ ಶ್ರಮಕ್ಕೆ ಸಂದ ಸಾರ್ಥಕ್ಯದ ಕ್ಷಣವಿದು. ಸಹಕಾರಿ ತತ್ವದಲ್ಲಿ ನಂಬಿಕೆ ಇಟ್ಟವರು ಬದುಕಿನಲ್ಲಿ ಯಶಸ್ವಿಯಾಗಬಲ್ಲರು ಎಂದರು.

ಪ್ರಧಾನ ಕಛೇರಿಯನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನದಿಂದ ಯಾವುದೇ ಆರ್ಥಿಕ ಸುಧಾರಣೆ ಖಂಡಿತ ಸಾಧ್ಯವಿಲ್ಲ. ಇದರಿಂದ ಬ್ಯಾಂಕ್‍ಗಳ ತವರು ಜಿಲ್ಲೆಯಾದ ನಮ್ಮ ಘನತೆಗೆ ಧಕ್ಕೆಯಾಗಿದೆ. ಸಹಕಾರಿ ಬ್ಯಾಂಕ್‍ಗಳೇ ನಮಗೀಗ ಶ್ರೀರಕ್ಷೆ ಎಂದರು.

ಸೇಫ್ ಲಾಕರ್ ಉದ್ಘಾಟಿಸಿದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‍ಚಂದ್ರ ಡಿ.ಸುವರ್ಣ ಮಾತನಾಡಿ, 61 ವರ್ಷಗಳ ಹಿಂದೆ ಲಕ್ಷ್ಮಣ ವೈ. ಮತ್ತು ಹಿರಿಯಣ್ಣ ವೈ. ಮುಂದಾಲೋಚನೆಯಿಂದ ಸ್ಥಾಪಿಸಿದ ಸೊಸೈಟಿಯು ಇಂದು ಹಲವು ಗ್ರಾಮಗಳ ಅಭ್ಯುದಯದ ಕೇಂದ್ರವಾಗಿ ಬೆಳೆದು ನಿಂತಿರುವುದು ಅವರ ಸಾರ್ಥಕ್ಯದ ಕ್ಷಣಗಳಾಗಿವೆ ಎಂದರು.

ಬ್ಯಾಂಕ್‍ನ ಕಂಪ್ಯೂಟರ್ ಘಟಕವನ್ನು ಶಾಸಕ ಲಾಲಾಜಿ ಆರ್.ಮೆಂಡನ್ ಉದ್ಘಾಟಿಸಿ ಪಡುಬಿದ್ರಿ ಸರಕಾರಿ ಆಸ್ಪತ್ರೆಯ ನೂತನ ಶೀತಲೀಕೃತ ಶವಾಗಾರ ನಿರ್ಮಾಣಕ್ಕೆ ಸೊಸೈಟಿ ವತಿಯಿಂದ ಸಹರಿಸುವಂತೆ ವಿನಂತಿಸಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್ ಸೊಸೈಟಿ ವತಿಯಿಂದ ರೂ.5 ಲಕ್ಷ ನೀಡುವ ಭರವಸೆ ನೀಡಿದರು.

ಅಖಿಲ ಭಾರತ ಬಿಲ್ಲವರ ಯೂನಿಯನ್ ಮಹಿಳಾ ವಿಭಾಗದ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ ಬ್ಯಾಂಕ್ ಭದ್ರತಾ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿಯವರು ಠೇವಣಿ ಪತ್ರ ಬಿಡುಗಡೆಗೊಳಿಸಿದರು.

ಸನ್ಮಾನ: ಇದೇ ಸಂದರ್ಭ ಸಹಕಾರಿ ರತ್ನ ಎಮ್.ಎನ್.ರಾಜೇಂದ್ರ ಕುಮಾರ್, ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತಾಪಂ ನೂತನ ಅಧ್ಯಕ್ಷೆ ನೀತಾ ಗುರುರಾಜ್, ಜಯಕರ ಶೆಟ್ಟಿ ಇಂದ್ರಾಳಿ, ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ರಮೀಝ್ ಹುಸೈನ್ ಮತ್ತು ಮುರಳೀಧರ ರಾವ್‍ರವರನ್ನು ಸನ್ಮಾನಿಸಲಾಯಿತು.

ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ಜನಾನುರಾಗಿ ಶಿಕ್ಷಕರುಗಳಾದ ಅನಂತ ಪಟ್ಟಾಭಿ ರಾವ್ ಪಡುಬಿದ್ರಿ, ಸುಧಾಕರ ರಾವ್ ಪಡುಬಿದ್ರಿ, ಸಂಜೀವ ಟಿ. ಹೆಜಮಾಡಿ ಮತ್ತು ರತ್ನಾವತಿ ಪಿ.ರಾವ್ ಪಲಿಮಾರುರವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆ ಮೂಲಕ ಬ್ಯಾಂಕ್ ನಡೆದು ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿದರು.

ವಿಧಾನಸಭಾ ಸದಸ್ಯ ಐವನ್ ಡಿಸೋಜಾ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಭಾರತ್ ಬ್ಯಾಂಕ್ ಮಾಜಿ ಉಪಪ್ರಧಾನ ವ್ಯವಸ್ಥಾಪಕ ಮೋಹನ್‍ದಾಸ್ ಹೆಜ್ಮಾಡಿ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಕುಂದಾಪುರ ವಿಭಾಗ ಸಹಾಯಕ ಉಪ ನಿಬಂಧಕಿ ಚಂದ್ರಪ್ರತಿಮಾ ಎಮ್.ಜೆ., ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಡಾ.ದೇವಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ರಾಜೇಶ್ ರಾವ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಪಲಿಮಾರು ಗ್ರಾಪಂ ಅಧ್ಯಕ್ಷೆ ಜಿತೇಂದ್ರ ಫುರ್ಟಾಡೋ, ತೆಂಕ ಗ್ರಾಪಂ ಅಧ್ಯಕ್ಷೆ ಅರುಣಾ ಕುಮಾರಿ, ತಾಪಂ ಸದಸ್ಯರಾದ ರೇಣುಕಾ ಪುತ್ರನ್, ದಿನೇಶ್ ಕೋಟ್ಯಾನ್ ಮತ್ತು ಕೇಶವ ಮೊಯಿಲಿ, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಂಘದ ನಿರ್ದೇಶಕ ಪಿ.ರವೀಂದ್ರನಾಥ ಜಿ.ಹೆಗ್ಡೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕೆಪಿಸಿಸಿ ಸಂಯೋಜಕ ನವೀನ್‍ಚಂದ್ರ ಜೆ.ಶೆಟ್ಟಿ, ಉರ್ದು ಶಾಲಾ ಸಂಚಾಲಕ ಶಬ್ಬೀರ್ ಹುಸೈನ್, ಉದ್ಯಮಿ ಭಾಸ್ಕರ ಗಡಿಯಾರ್, ಬ್ಯಾಂಕ್ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಮುಖ್ಯ ಅತಿಥಿಗಳಾಗಿದ್ದರು.

ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಗಿರೀಶ್ ಪಲಿಮಾರು ವಂದಿಸಿದರು.