ಪಡುಬಿದ್ರಿ ಸಹಕಾರಿ ವ್ಯವಸಾಯ ಸಂಘದಿಂದ ಶೇ.25 ಡಿವಿಡೆಂಡ್ ಘೋಷಣೆ

ಪಡುಬಿದ್ರಿ ಸಹಕಾರಿ ವ್ಯವಸಾಯ ಸಂಘದಿಂದ ಶೇ.25 ಡಿವಿಡೆಂಡ್ ಘೋಷಣೆ
ವಜ್ರ ಮಹೋತ್ಸವದ ಅಂಗವಾಗಿ ಗ್ರಾ.ಪಂ.ಗಳಿಗೆ ಕಸ ಸಾಗಣೆ ವಾಹನಗಳ ಕೊಡುಗೆಯಿತ್ತ ಸಹಕಾರಿ ಸಂಘ

ಪಡುಬಿದ್ರಿ: ಜಿಲ್ಲೆಯ ಪ್ರಗತಿಪರ ಸಹಕಾರಿ ಸಂಘವೆಂಬ ಖ್ಯಾತಿಗೆ ಪಾತ್ರವಾಗಿ ಕಳೆದ 8 ವರ್ಷಗಳಿಂದ ತನ್ನ ಸಾಧನೆಗಳಿಂದ `ಎ’ ಶ್ರೇಣಿಯನ್ನು ಕಾಯ್ದುಕೊಂಡಿರುವ ಪಡುಬಿದ್ರಿ ಸಹಕಾರಿ ವ್ಯವಸಾಯ ಸೇವಾ ಸಂಘವು 2017-18ನೇ ಸಾಲಿಗೆ ತನ್ನ ಪಾಲು ಬಂಡವಾಳ ಹೊಂದಿರುವ ಸದಸ್ಯರಿಗೆ ಶೇಕಡಾ 25 ರ ಡಿವಿಡೆಂಡ್ ಘೋಷಿಸಿದೆ.ಪಡುಬಿದ್ರಿಯ ಬಿಲ್ಲವ ಸೇವಾ ಸಮಾಜ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಘೋಷಣೆಯನ್ನು ಮಾಡಲಾಯಿತು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ವೈ. ಸುಧೀರ್‍ಕುಮಾರ್ ಮಾತನಾಡುತ್ತಾ ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದ್ದು ಸದ್ಯವೇ ಕಾರ್ಯಾರಂಭಗೊಳ್ಳಲಿದೆ. ಈ ವೇಳೆ ಗ್ರಾಹಕರಿಗೆ ಇ-ಸ್ಟ್ಯಾಂಪ್ ಸೌಲಭ್ಯ ಮತ್ತು ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‍ಫರ್ ಸೌಲಭ್ಯಗಳು ಲಭ್ಯವಾಗಲಿದೆ. ಪಡುಬಿದ್ರಿ ಸಹಕಾರಿ ವ್ಯವಸಾಯ ಸಂಘವು ಈ ಬಾರಿಯ ಅತಿವೃಷ್ಟಿಯಿಂದಾಗಿ ತಮ್ಮ ಮನೆ, ಮಠಗಳನ್ನು ಕಳೆದುಕೊಂಡಿರುವ ಕೊಡಗು ನಿರ್ವಸಿತರಿಗಾಗಿ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಘದ ನಿರ್ದೇಶಕರ 1 ತಿಂಗಳ ಭತ್ತೆ ಮತ್ತು ಸಿಬಂದಿ ವರ್ಗದ 1 ದಿನದ ವೇತನವೂ ಸೇರಿದಂತೆ ಒಟ್ಟು 1ಲಕ್ಷ ರೂ. ಗಳನ್ನು ರವಾನಿಸಲಿದೆ ಎಂದರು.

ಗ್ರಾಪಂಗಳಿಗೆ ಕಸ ವಿಲೇವಾರಿ ಟಿಪ್ಪರ್: ಸಾಮಾಜಿಕ ಬದ್ಧತೆಯ ಕಾರ್ಯಕ್ರಮವಾಗಿ ಸಂಘದ ವಜ್ರ ಮಹೋತ್ಸವದ ಸವಿನೆನಪಲ್ಲಿ ಸಂಘದ ವ್ಯಾಪ್ತಿಯ ಹೆಜಮಾಡಿ, ಪಲಿಮಾರು ಹಾಗೂ ಎರ್ಮಾಳು ಗ್ರಾ.ಪಂ.ಗಳಲ್ಲಿನ ಕಸ ವಿಲೇವಾರಿಗಾಗಿ ನಾಲ್ಕು ಚಕ್ರಗಳ ಟಾಟಾ ಏಸ್ ಟಿಪ್ಪರ್ ಅನ್ನು ನೀಡಲಿದ್ದು ಹೆಜಮಾಡಿ ಗ್ರಾ.ಪಂ.ಗೆ ಅದನ್ನು ಅತೀ ಶೀಘ್ರದಲ್ಲೇ ಹಸ್ತಾಂತರಿಸಲಾಗುವುದೆಂದು ಸುಧೀರ್ ಕುಮಾರ್ ಘೋಷಿಸಿದರು.

ಸಂಘದ ಉಪಾಧ್ಯಕ್ಷ ಗುರುರಾಜ ಪೂಜಾರಿ, ನಿರ್ದೇಶಕರಾದ ವೈ.ಜಿ.ರಸೂಲ್, ಶಿವರಾಮ ಎನ್.ಶೆಟ್ಟಿ, ಗಿರೀಶ್ ಪಲಿಮಾರು, ರಾಜಾರಾಮ ರಾವ್, ಯಶವಂತ ಪಿ.ಬಿ., ಮಾಧವ ಆಚಾರ್ಯ, ವಾಸುದೇವ ದೇವಾಡಿಗ, ಸುಚರಿತಾ ಎಲ್.ಅಮೀನ್, ಕುಸುಮಾ ಎಂ.ಕರ್ಕೇರ, ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷ ವೈ.ಸುಧೀರ್ ಕುಮಾರ್ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್.ವರದಿ ವಾಚಿಸಿದರು. ನಿರ್ದೇಶಕ ಗಿರೀಶ್ ಪಲಿಮಾರು ವಂದಿಸಿದರು.