ಪಡುಬಿದ್ರಿ ಶ್ರೀ ಮಹಾಗಣಪತಿಗೆ ಆಷಾಢಾ ಮಾಸದ ವಿಶೇಷ ಸೇವೆ ಕಟಾಹಾಪೂಪ ಸೇವೆ

ಪಡುಬಿದ್ರಿ ಶ್ರೀ ಮಹಾಗಣಪತಿಗೆ ಆಷಾಢಾ ಮಾಸದ ವಿಶೇಷ ಸೇವೆ ಕಟಾಹಾಪೂಪ ಸೇವೆ
– ಎಚ್ಕೆ ಹೆಜ್ಮಾಡಿ,ಪಡುಬಿದ್ರಿ

ದೇಶ ವಿದೇಶಗಳಲ್ಲಿ ಪಡುಬಿದ್ರಿಯ ಕಟ್ಟದಪ್ಪ ಸೇವೆ(ಕಟಾಹಾಪೂಪ ಸೇವೆ) ವಿಶೇಷ ಪ್ರಾಧಾನ್ಯವಿದೆ.ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕ ಡಕ್ಕೆಬಲಿ ಸೇವೆಯಂತೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಪ್ರತಿ ವರ್ಷ ಆಷಾಢಾ ಮಾಸದಲ್ಲಿ ನಡೆಯುವ ಕಟಾಹಾಪೂಪ ಸೇವೆಯೂ ಜನಜನಿತ.

ಸೀಮೆಗೊಡೆಯನಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತ್ಪ್ರಸಿದ್ಧ ಮಹಾಗಣಪತಿಯ ಪುಣ್ಯ ಕ್ಷೇತ್ರವಾಗಿ ಪಡುಬಿದ್ರಿಯು ಮೆರೆದಿದೆ. ಇಲ್ಲಿ ಮಹಾಲಿಂಗೇಶ್ವರನು ಪ್ರಧಾನ ದೇವರಾಗಿದ್ದು ಉಪಸ್ಥಾನ ಅಧಿಪತಿಯಾಗಿ ವಿನಾಯಕನಿರುವನು. ಪಡುಬಿದ್ರಿ ಗಣಪತಿಯು `ಕಟ್ಟದಪ್ಪ'(ಕಟಾಹಾಪೂಪ) ಪ್ರಿಯನಾಗಿದ್ದು ಅಗಸ್ಟ್ 4 ಶನಿವಾರದಂದು ಇಲ್ಲಿ ಸಾರ್ವಜನಿಕ ಕಟಾಹಾಪೂಪ ಸೇವೆಯು ನಡೆಯಲಿದೆ.

ಕೃಷಿಕರ ಕಟ್ಟ- ಕಟ್ಟದಪ್ಪ : ಆಷಾಢಾ ತಿಂಗಳಲ್ಲಿ ರೈತಾಪಿ ವರ್ಗ ತಮ್ಮ ಕೃಷಿ ಕಾಯಕವನ್ನು ಮುಗಿಸಿ ಧಾರಾಕಾರವಾಗಿ ಸುರಿವ ಮಳೆಗೆ ಮನೆಯೊಳಗಿದ್ದೇ ತಾವು ಬಿತ್ತಿರುವ ಭತ್ತವು ಮುಂದೆ ಉತ್ತಮ ಫಸಲಾಗಲಿ ಎಂದು ಬೇಡಿಕೊಳ್ಳುವ ಕಾಲವಿದು. ಅವರು ಮಳೆಗಾಲದಲ್ಲಿ ನೀರ ತೋಡುಗಳಿಗೆ `ಕಟ್ಟ'(ಒಡ್ಡು)ಗಳನ್ನು ಕಟ್ಟಿಕೊಂಡು ಶ್ರಮವಹಿಸಿ ತಾವು ನೀರೊಡ್ಡುವ ಗದ್ದೆಗಳಿಂದ ಉತ್ತಮ ಫಲ ಬರಲಿ ಎಂದು ಗ್ರಾಮದ ದೈವ, ದೇವರುಗಳನ್ನು ಪ್ರಾರ್ಥಿಸುತ್ತಾರೆ.ಪುರಾತನ ಕಾಲದಲ್ಲಿ ಪಡುಬಿದ್ರಿ ಶ್ರೀ ಮಹಾಗಣಪತಿಗೆ ಕಟ್ಟಿದ ಕಟ್ಟಗಳು ಗಟ್ಟಿಯಾಗಿ ನಿಲ್ಲುವಂತೆ ಪ್ರಾರ್ಥಿಸಿ ಕಟ್ಟದಪ್ಪ ಸೇವೆ ಆರಂಭಿಸಿದರು ಎಂಬುದು ಹಿರಿಯರು ಹೇಳುತ್ತಾರೆ.

ಕೃಷಿ ಕಾಯಕಕ್ಕಾಗಿ ಕಟ್ಟಗಳನ್ನು ಕಟ್ಟಿದ ಬಳಿಕ ಈ ಒಡ್ಡುಗಳ ರಕ್ಷಣೆ ಮತ್ತು ಹೇರಳ ನೀರಾಶ್ರಯಕ್ಕಾಗಿ ಗ್ರಾಮ ದೇವರಿಗೆ ಸಮರ್ಪಿತಗೊಳ್ಳುವ ಅಪ್ಪ ಸೇವೆಗೆ `ಕಟ್ಟದಪ್ಪ’ವೆಂಬ ನಾಮಧೇಯವೂ ಪ್ರಚಲಿತವಿದೆ.


ಕಟಾಹದಲ್ಲಿನ ಅಪ್ಪ-ಕಟಾಹಾಪೂಪ: ಈ ಕಟ್ಟದಪ್ಪ ಸೇವೆಯ ದಿನ ರಾತ್ರಿ ಪೂಜೆಯ ಸಂದರ್ಭ ಊರ ಪ್ರಮುಖರ ಸಹಿತ ಕೃಷಿಕರೆಲ್ಲರೂ ದೇವಳದಲ್ಲಿ ಸೇರುತ್ತಾರೆ. ಸಾಮೂಹಿಕವಾಗಿ ಮಹಾಲಿಂಗೇಶ್ವರ ಹಾಗೂ ಪ್ರಧಾನವಾಗಿ ಮಹಾಗಣಪತಿಗೆ ಧನ ಧಾನ್ಯ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶ್ರೀ ದೇವರ ಸಮರ್ಪಣೆಗಾಗಿ ಬೆಳಿಗ್ಗಿನಿಂದಲೇ ಬಾಣಸಿಗರು ದೊಡ್ಡ, ದೊಡ್ಡ ಬಾಣಲೆಯಲ್ಲಿ ಕಾಯಿಸಿ ತಯಾರಿಸಿ ದೊಡ್ಡ ದೊಡ್ಡ ಕಟಾಹಗಳಲ್ಲಿ ಸಮರ್ಪಣೆಗಾಗಿ ಶ್ರೀ ದೇವರ ಮುಂದಿಡುವ ಅಪ್ಪಗಳನ್ನು `ಕಟಾಹಾಪೂಪ’ವೆಂದೂ ಕರೆಯಲಾಗುತ್ತದೆ.

 

 

ಕಟ್ಟದಪ್ಪ ತಯಾರಿ: ಸಾರ್ವಜನಿಕ ಅಪ್ಪ ಸೇವೆಯಂದು ಈ ಬಾರಿ 80 ಮುಡಿ ಅಕ್ಕಿಯ ಅಪ್ಪವು ಗಣಪತಿಗೆ ಸಮರ್ಪಿತವಾಗಲಿದೆ. ಈ ಅಕ್ಕಿಗೆ 180 ಕೆಜಿ ಅರಳು, ಸುಮಾರು 700 ಕೆಜಿಗಳಷ್ಟು ಬಾಳೆಹಣ್ಣು, ಸುಮಾರು 2000 ತೆಂಗಿನಕಾಯಿ, 10ಕೆಜಿ ಏಲಕ್ಕಿ, 2.5ಟನ್ ಬೆಲ್ಲದೊಂದಿಗೆ ಮಿಶ್ರಣವನ್ನು ತಯಾರಿಸಿಕೊಂಡು ಸುಮಾರು 50 ಡಬ್ಬಿ ಎಣ್ಣೆಯಿಂದ ಕಬ್ಬಿಣದ ಬಾಣಲೆಗಳಲ್ಲಿ ಅಪ್ಪಗಳನ್ನು ಬೆಳಿಗ್ಗಿಂದ ಸಾಯಂಕಾಲದ ಆರೇಳು ಗಂಟೆಯವರೆಗೂ ಕಾಯಿಸಿ ಸುಮಾರು 1.5ಲಕ್ಷಗಳಷ್ಟು ಅಪ್ಪಗಳನ್ನು ತಯಾರಿಸಲಾಗುತ್ತದೆ.
ದೇಶ, ವಿದೇಶಗಳಲ್ಲಿ ಪ್ರಸಿದ್ಧ: ಪಡುಬಿದ್ರಿ ಗಣಪತಿಯನ್ನು ಮನಸಾರೆ ಆರಾಧಿಸುವ ಉದ್ಯಮಪತಿಗಳಿಂದ ತೊಡಗಿ ರಾಜ್ಯ, ದೇಶ ವಿದೇಶಗಳಿಂದಲೂ ಈ ವಿಶೇಷ ಅಪ್ಪ ಸೇವೆಗಾಗಿ ಬೇಡಿಕೆಗಳಿರುತ್ತವೆ. ದಿನನಿತ್ಯದ ಅಪ್ಪ ಸೇವೆಯೂ ಇಲ್ಲಿ ನಡೆಯುತ್ತಲಿದ್ದರೂ ವರ್ಷಕೊಮ್ಮೆ ನಡೆವ ಈ ಕಟ್ಟದಪ್ಪ ಅಥವಾ ಕಟಾಹಾಪೂಪ ಸೇವೆಗೆ ವಿಶೇಷ ಮಹತ್ವವಿದೆ. ಸುಮಾರು 10,000 ಸೇವಾಕರ್ತರು ಈ ಸೇವೆಗಾಗಿ ಪ್ರತೀ ಬಾರಿಯೂ ಕಾದಿರುತ್ತಾರೆ.ಮುಂಬೈ,ಬೆಂಗಳೂರು,ಗುಜರಾತ್,ದೆಹಲಿ ಸಹಿತ ವಿದೇಶಗಳಲ್ಲಿ ನೆಲಸಿರುವ ಭಾರತೀಯರೂ ಕಟ್ಟದಪ್ಪ ಸೇವೆ ಬರೆಸುತ್ತಾರೆ.

ಈ ಸೇವೆಯಲ್ಲದೆ ಪಡುಬಿದ್ರಿ ಗಣಪತಿಗೆ ಪಂಚಕಜ್ಜಾಯ ಸೇವೆ ಅಚ್ಚುಮೆಚ್ಚು. ಬರೀ ತೆಂಗಿನಕಾಯಿ, ಅಕ್ಕಿ, ಉಪ್ಪುಗಳ ಮಿಶ್ರಣದಿಂದ ತಯಾರಿಸುವ `ಪೆÇಟ್ಟಪ್ಪ’ವೂ ಪಡುಬಿದ್ರಿ ಗಣಪನಿಗೆ ಸಂದಾಯವಾಗುವ ವಿಶೇಷ ಸೇವೆಯಾಗಿದೆ.
ಪೊಟ್ಟಪ್ಪ ಸೇವೆ: ಬ್ರಿಟಿಷ್ ಕಾಲದಲ್ಲಿ ಆಂಗ್ಲ ಅಧಿಕಾರಿಯೊಬ್ಬ ದೇವಳದ ಮುಂಭಾಗ ಕುದುರೆಯೇರಿ ಹೊರಟ ಸಂದರ್ಭ ದೇವರಿಗೆ ನಮಸ್ಕರಿಸದೆ ತೆರಳಿದಾಗ ಕುದುರೆಯಿಂದ ಕೆಳಗೆ ಬೀಳುತ್ತಾನೆ.ವಿಚಾರಿಸಿದಾಗ ಪಡುಬಿದ್ರಿ ಗಣಪತಿಗೆ ನಮಸ್ಕರಿಸಿ ಪೊಟ್ಟಪ್ಪ ಸೇವೆ ಸಲ್ಲಿಸುವಂತೆ ತಿಳಿದುಬರುತ್ತದೆ. ಅದರಂತೆ ಆಂಗ್ಲ ಅಧಿಕಾರಿ ಮಹಾಗಣಪತಿಗೆ ಪೊಟ್ಟಪ್ಪ ಸೇವೆ ಸಲ್ಲಿಸಿದ ಬಳಿಕ ಮುಂದೆ ಸಾಗುವಂತಾಯಿತು .ಮುಂದೆ ಇಲ್ಲಿ ಪೊಟ್ಟಪ್ಪ ಸೇವೆ ನಿರಂತರ ನಡೆದುಕೊಂಡು ಬಂದಿದೆ ಎಂಬ ಪ್ರತೀತಿ ಚಾಲ್ತಿಯಲ್ಲಿದೆ.

Leave a Reply

Your email address will not be published. Required fields are marked *