ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆಗೆ 25 ಸಾವಿರಕ್ಕೂ ಅಧಿಕ ತೆಂಗಿನಕಾಯಿ ಸಮರ್ಪಣೆ

ಪಡುಬಿದ್ರಿ: ದ್ವೈವಾರ್ಷಿಕ ಢಕ್ಕೆಬಲಿ ಸೇವೆಯಿಂದ ಪ್ರಸಿದ್ಧಿ ಪಡೆದ ಪಡುಬಿದ್ರಿಯ ಶ್ರೀ ಕ್ಷೇತ್ರ ಬ್ರಹ್ಮಸ್ಥಾನದಲ್ಲಿ ಪ್ರತಿವರ್ಷ ತುಳುವರ ಆಟಿ ತಿಂಗಳ 16ನೇ ದಿನ ನಡೆಯುವ ಅಜಕಾಯಿ ಸೇವೆ ಶುಕ್ರವಾರ ನಡೆದ ಸಂದರ್ಭ ಸಹಸ್ರಾರು ಭಕ್ತಾದಿಗಳು ಭೇಟಿ ನೀಡಿದರು.


ಈ ಬಾರಿ ಅತೀ ಹೆಚ್ಚು: ಈ ಸಂದರ್ಭ ಭಕ್ತರು 25 ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಶ್ರೀ ಖಡ್ಗೇಶ್ವರಿಗೆ ಹರಕೆಯಾಗಿ ಅರ್ಪಿಸಿದ್ದು, ಅಜಕಾಯಿ ಕಲ್ಲಿಗೆ ಸನ್ನಿಧಿಯ ಇಬ್ಬರು ಪಾತ್ರಿಗಳು ಒಡೆದ ಬಳಿಕ ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು. ಈ ಬಾರಿ ಅತೀ ಹೆಚ್ಚು ಭಕ್ತರು ಆಗಮಿಸಿದ್ದು, ಹಿಂದೆಂದಿಗಿಂತ ಹೆಚ್ಚು ತೆಂಗಿನಕಾಯಿ ಸಮರ್ಪಣೆಯಾಗಿದೆ ಎಂದು ಶ್ರೀ ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ತಿಳಿಸಿದ್ದಾರೆ.

ಸಮುದ್ರದಿಂದ ಮರಳು ಪ್ರಸಾದ: ಪ್ರತಿ ವರ್ಷ ಅಜಕಾಯಿ ಸೇವೆಯಂದು ಸಮುದ್ರದಿಂದ ಮರಳನ್ನು ತಂದು ಶ್ರೀ ಬ್ರಹ್ಮಸ್ಥಾನದ ಮೂಲ ಬಿಂಬವಿರುವಲ್ಲಿಗೆ ಹಾಗೂ ನಾಗನ ಸನ್ನಿಧಿ ಸಹಿತ ಪರಿಸರದಲ್ಲಿ ಹರಡಲಾಗುತ್ತದೆ.

ಈ ಪ್ರಕ್ರಿಯೆಯು ಶುಕ್ರವಾರ ಮುಂಜಾನೆ ವಿದ್ಯುಕ್ತವಾಗಿ ನೆರವೇರಿತು. ದೇವಕಾರ್ಯ ನಿರತರು ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮೂಹದ ಯುವಕರ ಜತೆಗೂಡಿ ಶುಕ್ರವಾರ ಮುಂಜಾವ ಬ್ರಹ್ಮಸ್ಥಾನದಲ್ಲಿ ಒಟ್ಟಾಗಿ ದೇವತಾ ಪ್ರಾರ್ಥನೆ ನಡೆಸಿದರು. ಅಲ್ಲಿಂದ ಬಿದಿರಿನ ಬುಟ್ಟಿಯೊಂದಿಗೆ ಬ್ರಹ್ಮಸ್ಥಾನ ನೇರದ ಸಮುದ್ರ ತೀರಕ್ಕೆ ತೆರಳಿ ಪವಿತ್ರ ಸಮುದ್ರ ಸ್ನಾನಗೈದು ದೇವತಾ ಸಂಕೀರ್ತಣೆಯಂದಿಗೆ ಎಲ್ಲಾ ಬುಟ್ಟಿಗಳಿಗೆ ಸಮುದ್ರದ ಮರಳನ್ನು ತುಂಬಿಸಿಕೊಂಡರು. ಬಳಿಕ ತಲೆಮೇಲೆ ಹೇರಿಕೊಂಡು ನಡಿಗೆ ಮೂಲಕ ಮರಳಿ ಬ್ರಹ್ಮಸ್ಥಾನಕ್ಕೆ ಹೊತ್ತು ತಂದರು. ಈ ಸಂದರ್ಭ ಪಾತ್ರಗಳ ಮುತುವರ್ಜಿಯಲ್ಲಿ ಹೊತ್ತು ತಂದ ಮರಳನ್ನು ಮೂಲಬಿಂಬವಿರುವಲ್ಲಿ ಹಾಗೂ ಪರಿಸರದಲ್ಲಿ ಹರಡಲಾಯಿತು. ಮುಂದೆ ಒಂದು ವರ್ಷ ಕಾಲ ಮೂಲಬಿಂಬದೊಳಗಿನ ಮರಳನ್ನೆ ಮೂಲ ಪ್ರಸಾದವಾಗಿ ನೀಡುವುದು ಇಲ್ಲಿನ ಪದ್ಧತಿ.