ಪಡುಬಿದ್ರಿ: ಬ್ರಹ್ಮಸ್ಥಾನದ ಸಮೀಪ 18 ಲಕ್ಷ ರೂ. ಕಾಂಕ್ರೀಟ್ ಕಾಮಗಾರಿಗಳ ಲೋಕಾರ್ಪಣೆ

ಪಡುಬಿದ್ರಿ:  ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಯ ಪ್ರಾಕೃತಿಕ ತಾಣ ಬ್ರಹ್ಮಸ್ಥಾನದ ಬಳಿ ಮಳೆ ನೀರು ಹರಿದು ಹೋಗಲು ಶಾಸಕ ಪ್ರದೇಶಾಭಿವೃದ್ಧಿ ನಿಧಿಯ ಮುಂಗಡ 14 ಲಕ್ಷ ರೂ.ಗಳೂ ಸೇರಿದಂತೆ ಒಟ್ಟು 18 ಲಕ್ಷ ರೂ. ಗಳ ಅನುದಾನದೊಂದಿಗೆ ನಡೆಸಲ್ಪಟ್ಟ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಗಳ ಕಾಮಗಾರಿಯನ್ನು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಲೋಕಾರ್ಪಣೆಗೈದರು. ಸ್ಥಳೀಯ ಆಶಯಗಳಿಗೆ ಅನುಗುಣವಾಗಿ ಸ್ಪಂದಿಸಬೇಕಾದುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಬೇಡಿಕೆ ಬಂದಾಗ ಕಾಮಗಾರಿಯನ್ನೂ ಪೂರೈಸಿದ್ದೇವೆ. ಢಕ್ಕೆ ಬಲಿಯ ಈ ಋತುವಿನಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೂ ಇದರಿಂದ ಅನುಕೂಲವಾಗುವುದಾಗಿ ಶಾಸಕ ಲಾಲಾಜಿ ಮೆಂಡನ್ ಹೇಳಿದರು.

ಖಡ್ಗೇಶ್ವರೀ ಬ್ರಹ್ಮಸ್ಥಾನದ ಢಕ್ಕೆಬಲಿ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಈ ಕಾಮಗಾರಿಯನ್ನು ನಡೆಸಲು ಪಡುಬಿದ್ರಿ ಗ್ರಾ.ಪಂ.ಅಧ್ಯಕ್ಷೆ ದಮಯಂತಿ ಅಮೀನ್ ಅವರ 2ಲಕ್ಷ ರೂ., ಅನುದಾನ, ತಾ.ಪಂ.ಸದಸ್ಯೆ ನೀತಾ ಗುರುರಾಜ್ ನಿಧಿಯಿಂದ 1ಲಕ್ಷ ರೂ.,ಈ ವಾರ್ಡ್‍ನ ಗ್ರಾ.ಪಂ.ಸದಸ್ಯೆ ವಿಜಯಲಕ್ಷ್ಮೀ ಆಚಾರ್ಯರ 2 ಲಕ್ಷ ರೂ. ಗಳ ಅನುದಾನಗಳನ್ನು ಬಳಸಿಕೊಂಡು ಈ ಕಾಮಗಾರಿಯನ್ನು ತುರ್ತಾಗಿ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಪಿ.ಜಿ.ನಾರಾಯಣ ರಾವ್, ಗುರಿಕಾರ ಮನೆತನದ ಕೊರ್ನಾಯ ಪದ್ಮನಾಭ ರಾವ್, ಶ್ರೀ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ತಾ.ಪಂ.ಸದಸ್ಯರಾದ ನೀತಾ ಗುರುರಾಜ್ ಮತ್ತು ದಿನೇಶ್ ಕೋಟ್ಯಾನ್, ಪಡುಬಿದ್ರಿ ಗ್ರಾ.ಪಂ.ಸದಸ್ಯೆ ವಿಜಯಲಕ್ಷ್ಮೀ ಆಚಾರ್ಯ,ಭಾಜಪ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾ.ಪಂ.ಸದಸ್ಯರು, ಉದ್ಯಮಿ ಮಿಥುನ್ ಆರ್.ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.