ಪಡುಬಿದ್ರಿ ಪೋಲೀಸ್ ಠಾಣಾ ವತಿಯಿಂದ ಶಾಂತಿ ಸಭೆ

ನಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸುವ ಜತೆಗೆ ಬೇರೆ ಧರ್ಮದ ಆಚರಣೆಗಳನ್ನು ಗೌರವಿಸೋಣ-ಹಾಲಮೂರ್ತಿ ರಾವ್

ನಮ್ಮ ಧಾರ್ಮಿಕ ಆಚರಣೆಗಳನ್ನು ಸುವ್ಯಸ್ಥಿತವಾಗಿ ಆಚರಿಸುವ ಜತೆಗೆ ಇತರ ಧರ್ಮದ ಆಚರಣೆಗಳನ್ನು ಗೌರವಿಸಿದಾಗ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಾಧ್ಯ ಎಂದು ಕಾಪು ಪೋಲೀಸ್ ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಹೇಳಿದರು.
ಭಾನುವಾರ ಪಡುಬಿದ್ರಿಯ ಸಾಯಿ ಆರ್ಕೇಡ್ ಸಭಾಂಗಣದಲ್ಲಿ ಪಡುಬಿದ್ರಿ ಪೋಲೀಸ್ ಠಾಣಾ ವತಿಯಿಂದ ನಡೆದ ಶಾಂತಿ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.


ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸೇವೆ ಸಲ್ಲಿಸಿದ ಅನುಭವದ ಮೇರೆಗೆ ಈ ಭಾಗದಲ್ಲಿ ಬೇರೆಲ್ಲಾ ಕಡೆಗಿಂತ ಶಾಂತಿ ಸೌಹಾರ್ದತೆ ಅತೀ ಹೆಚ್ಚು.ಹಬ್ಬ ಹರಿದಿನಗಳನ್ನು ಆಚರಿಸುವುದು ನಮ್ಮ ಸಾಂವಿಧಾನಿಕ ಹಕ್ಕು.ಅಂತಹ ಆಚರಣೆಗಳು ಇತರರಿಗೆ ತೊಂದರೆಯುಂಟಾಗಬಾರದು. ಸಮಾಜವನ್ನು ಒಗ್ಗೂಡಿಸುವ ಹಾಗೆ ನಮ್ಮ ಆಚರಣೆಗಳು ನಡೆಯಬೇಕು.ಸಣ್ಣ ಪುಟ್ಟ ಹಾಗೂ ಕ್ಷುಲ್ಲಕ ಘಟನೆಗಳು ಸಂಭವಿಸಿದಾಗ ಹಿರಿಯರು ಹಾಗೂ ಜವಾಬ್ದಾರಿ ಹೊಂದಿದವರು ಸ್ಥಳದಲ್ಲೇ ಪರಿಹರಿಸಬೇಕು.ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ನಡೆಸಬಾರದು ಎಂದವರು ಹೇಳಿದರು.

ಮಾನವೀಯತೆಗೆ ಒತ್ತು ನೀಡಿ ನಮ್ಮ ನಮ್ಮ ಕರ್ತವ್ಯಗಳನ್ನು ಅತ್ಯುತ್ತಮವಾಗಿ ನಿಭಾಯಿಸೋಣ ಎಂದವರು ಹೇಳಿದರು.
ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಪೋಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ವಿರೋಧೀ ದಿನಾಚರಣೆ ಚಾಲ್ತಿಯಲ್ಲಿದ್ದು, ಈ ಬಾರಿ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಮಾದಕ ದ್ರವ್ಯ ಸರಬರಾಜುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಸ್ಥಳೀಯ ಪೋಲೀಸರಿಗೆ ತಕ್ಷಣ ಮಾಹಿತಿ ನೀಡುವಂತೆ ಅವರು ವಿನಂತಿಸಿದರು.

ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಪಿ. ಮಾತನಾಡಿ, ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲಾ ಧರ್ಮಗಳ ಹಬ್ಬಗಳು ನಡೆಯಲಿದ್ದು,ಇತರ ಧರ್ಮದವರಿಗೆ ತೊಂದರೆಯಾಗದಂತೆ ಆಚರಿಸುವಂತೆ ವಿನಂತಿಸಿದರು. ಆಚರಣೆಗಳು ಕೆರಳಿಸುವಂತಾಗಬಾರದು.ಎಲ್ಲರೂ ಒಂದಾಗಿ ಹಬ್ಬಗಳನ್ನು ಆಚರಿಸಿದಾಗ ಆರೋಗ್ಯಕರ ವಾತಾವರಣ ಸಾಧ್ಯ.ನಾವೇ ಶ್ರೇಷ್ಠರು ಎಂಬುದನ್ನು ಕಡೆಗಣಿಸಿ ನಾವೆಲ್ಲರೂ ಶ್ರೇಷ್ಠರು ಎಂಬ ಭಾವನೆ ಬಂದಾಗ ಶಾಂತಿ ನೆಮ್ಮದಿ ಸಾಧ್ಯ ಎಂದರು.

ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ.ಶೆಟ್ಟಿ, ತಾಪಂ ಸದಸ್ಯರಾದ ದಿನೇಶ್ ಕೋಟ್ಯಾನ್ ಪಲಿಮಾರು ಮತ್ತು ಯು.ಸಿ.ಶೇಖಬ್ಬ, ಶಿವಪ್ರಸಾದ್ ಎಲ್ಲದಡಿ, ಗಣೇಶ್ ಕೋಟ್ಯಾನ್, ಶಬ್ಬೀರ್ ಸಾಹೇಬ್, ವಿಷ್ಣುಮೂರ್ತಿ ಆಚಾರ್ಯ ,ಗಣೇರ್ಶ ಆಚಾರ್ಯ, ರಮೀಝ್ ಹುಸೈನ್, ಶರಣ್ ಕುಮಾರ್ ಮಟ್ಟು,ಹರೀಶ್ ಕಂಚಿನಡ್ಕ, ಲೀಲಾಧರ್ ಸಾಲ್ಯಾನ್, ಅಶೋಕ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.