ಪಡುಬಿದ್ರಿ ಗ್ರಾಪಂ ಸೌಕರ್ಯ ಸಮಿತಿ ಸಭೆ: ಕೊಳವೆ ಬಾವಿ ತೋಡಲು ಸಾರ್ವಜನಿಕರಿಂದ ಆಕ್ಷೇಪ

ಪಡುಬಿದ್ರಿ: ಪ್ರವಾಸೋದ್ಯಮ ಇಲಾಖೆ ಮತ್ತು ಪಾದೆಬೆಟ್ಟು ಗ್ರಾಮಕ್ಕಾಗಿ ಪಡುಬಿದ್ರಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಎರಡು ಕೊಳವೆ ಬಾವಿಗಳಿಗೆ ಸಾರ್ವಜನಿಕ ಆಕ್ಷೇಪದ ಹಿನ್ನೆಲೆಯಲ್ಲಿ ತಡೆಹಿಡಿಯಲಾದ ಘಟನೆ ಶನಿವಾರ ಗ್ರಾಪಂ ಸೌಕರ್ಯ ಸಮಿತಿ ಸಭೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿಯಲ್ಲಿ ಶನಿವಾರದಂದು ನಡೆದ ಸೌಕರ್ಯ ಸಮಿತಿ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಗಾಗಿ ಪಡುಬಿದ್ರಿ ಬೀಡು ಬಳಿ ಮತ್ತು ಪಾದೆಬೆಟ್ಟು ಗ್ರಾಮಕ್ಕಾಗಿ ಪಡುಬಿದ್ರಿ ನಡ್ಸಾಲು ಭಾಗದಲ್ಲಿ ತೋಡಲು ಗ್ರಾಪಂ ಒಪ್ಪಿಗೆ ನೀಡಿರುವ ಎರಡು ಕೊಳವೆ ಬಾವಿ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾದವು. ಈ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಈ ಕುರಿತಾಗಿ ಹಿಂಬರಹ ನೀಡಲು ಪಂಚಾಯತ್ ನಿರ್ಧರಿಸಿದೆ ಎಂದು ಗ್ರಾಪಂ ಪಿಡಿಒ ಪಂಚಾಕ್ಷರಿ ಕೆರಿಮಠ ತಿಳಿಸಿದ್ದಾರೆ.

ಪಡುಬಿದ್ರಿ ಬೀಡು ಬಳಿ ಪಡುಹಿತ್ಲು ದೈವಸ್ಥಾನಕ್ಕೆ ಹೋಗುವ ದ್ವಾರದ ಬಳಿ ಮೇ 23 ರಂದು ಕೊಳವೆ ಬಾವಿ ತೋಡಲು ಒಮ್ಮೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಮುಂದಾಗಿತ್ತು. ಅಂದು ಚುನಾವಣಾ ಮತ ಎಣಿಕೆ ದಿನವಾಗಿದ್ದು ಸ್ಥಳೀಯರೇ ಇದನ್ನು ಪ್ರತಿಭಟಿಸಿ ಬೋರ್‍ವೆಲ್ ಯಂತ್ರವನ್ನು ಹಿಂದಕ್ಕೆ ಕಳುಹಿಸಿದ್ದರು.

ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಬೋರ್‍ವೆಲ್ ತೋಡಿ ಬ್ಲೂ ಫ್ಲ್ಯಾಗ್ ಬೀಚ್ ಪ್ರದೇಶಕ್ಕೆ ಕುಡಿಯುವ ನೀರನ್ನು ಪೂರೈಸುವ ಇಚ್ಛೆ ಹೊಂದಿತ್ತು.

ಪಾದೆಬೆಟ್ಟು ಗ್ರಾಮದ ಜನತೆಗಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ನಡ್ಸಾಲು ಗ್ರಾಮದಲ್ಲಿ ಬೋರ್‍ವೆಲ್ ಪಾಯಿಂಟನ್ನು ಗುರುತಿಸಲಾಗಿದ್ದು ಈ ಕುರಿತಾಗಿಯೂ ಸೌಕರ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಪರವಾನಿಗೆ ನೀಡಲು ಪಂಚಾಯಿತಿ ನಿರ್ಧರಿಸಿತ್ತು.
ಆದರೆ ಶನಿವಾರ ಗ್ರಾಪಂ ಸಭಾಂಗಣದಲ್ಲಿ ಗ್ರಾಪಂ ಸೌಕರ್ಯ ಸಮಿತಿಯ ಸಭೆಯಲ್ಲಿ ಪರ ಹಾಗೂ ವಿರುದ್ಧವಾಗಿ ಮಾತಿನ ಚಕಮಕಿಯೇ ನಡೆದು ಬಳಿಕ ಅನುಮತಿ ನಿರಾಕರಿಸಲಾಯಿತು.