ಪಡುಬಿದ್ರಿ ಗ್ರಾಪಂ ಘನ,ದ್ರವ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಚಾಲನೆ

ಪಡುಬಿದ್ರಿ: ಜಿಲ್ಲೆಯೆ ಅತೀ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಯ ಪಡುಬಿದ್ರಿ ಗ್ರಾಪಂನಲ್ಲಿ ವ್ಯವಸ್ಥಿತವಾಗಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಲಾಯಿತು.

ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮತ್ತು ಉಪಾಧ್ಯಕ್ಷ ವೈ.ಸುಕುಮಾರ್‍ರವರು ಗ್ರಾಪಂ ಸದಸ್ಯರ ಉಪಸ್ಥಿತಿಯಲ್ಲಿ ಎಸ್‍ಎಲ್‍ಆರ್‍ಎಮ್ ಸದಸ್ಯರಿಗೆ ಕಸ ವಿಲೇವಾರಿಯ ಬಕೆಟ್‍ಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾಡಳಿತ ಮತ್ತು ಸರಕಾರದ ಸೂಚನೆಯಂತೆ ಶೀಘ್ರವಾಗಿ ಕಸ ವಿಲೇವಾರಿಗೆ ಚಾಲನೆ ನೀಡುವ ಉದ್ದೇಶದಿಂದ ಗ್ರಾಪಂ ಕಛೇರಿ ಸಮೀಪ ಗ್ರಾಮ ವಿಕಾಸ ಯೋಜನೆಯಡಿ ರೂ.10 ಲಕ್ಷ ವೆಚ್ಚ ಮಾಡಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದ್ದು,ಬುಧವಾರದಿಂದಲೇ ಕಸ ವಿಂಗಡಿಸಿ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ.

ಆರಂಭಿಕವಾಗಿ ಇರುವ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಂಡು ಪಡುಬಿದ್ರಿ ಪೇಟೆ,ಹೆದ್ದಾರಿ ಬದಿ,ಬೇಂಗ್ರೆ,ಮಾರ್ಕೆಟ್,ಕೆಳಗಿನಪೇಟೆ,ಕಾರ್ಕಳ ರಸ್ತೆಗಳ ಸುಮಾರು 750 ಮನೆ ಹಾಗೂ ವಾಣಿಜ್ಯ ಕೇಂದ್ರಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುವುದು.ಅದಕ್ಕಾಗಿ 9 ಮಂದಿ ನಿಟ್ಟೆ ಗ್ರಾಮದಲ್ಲಿ ತರಬೇತಿ ಪಡೆದು ಬಂದಿದ್ದು,ರೋಟರಿ ಕ್ಲಬ್ ಪೂರ್ವಾಧ್ಯಕ್ಷ ರಮೀಝ್ ಹುಸೈನ್ ಉಸ್ತುವಾರಿಯಲ್ಲಿ ಕಸ ವಿಂಗಡನೆ ಮಾಡಿ ವಿಲೇವಾರಿ ಮಾಡಲಿರುವರು.

ಸಂಗ್ರಹವಾದ ಹಸಿ ಕಸಗಳ ಪೈಕಿ ತರಕಾರಿ ತ್ಯಾಜ್ಯಗಳನ್ನು ಹೆಜಮಾಡಿಯ ಹಿರಿಯ ಕೃಷಿಕ ಭಾಸ್ಕರ ಶೆಟ್ಟಿ ಗೊಬ್ಬರವಾಗಿ ಬಳಸಲು ಒಪ್ಪಿಕೊಂಡಿದ್ದು,ಅವೆಲ್ಲವನ್ನೂ ಹೆಜಮಾಡಿಗೆ ಸಾಗಿಸಲಾಗುವುದು.ಉಳಿದ ಎಲ್ಲಾ ತ್ಯಾಜ್ಯಗಳನ್ನು ಎಸ್‍ಎಲ್‍ಆರ್‍ಎಮ್ ಸದಸ್ಯರೇ ವಿಂಗಡಿಸಿ ವಿಲೇವಾರಿ ಮಾಡಲಿದ್ದಾರೆ.
ದೊಡ್ಡ ಗ್ರಾಮವಾಗಿರುವ ಪಡುಬಿದ್ರಿಯ ಎಲ್ಲಾ ಕಸಗಳನ್ನು ಸಮಗ್ರವಾಗಿ ವಿಲೇವಾರಿ ಮಾಡಲು ಕನಿಷ್ಠ 12 ಈ ರೀತಿಯ ಘಟಕಗಳ ಅವಶ್ಯಕತೆ ಇದೆ ಎಂದು ಮೇಲ್ವಿಚಾರಕ ರಮೀಝ್ ಹುಸೈನ್ ತಿಳಿಸಿದ್ದು,ಸರಕಾರ ಸೂಕ್ತವಾಗಿ ಸ್ಪಂದಿಸಿ ಕನಿಷ್ಠ ಒಂದೆಕರೆ ಜಮೀನು ನೀಡಿದಲ್ಲಿ ಎಲ್ಲಾ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಹುದಾಗಿದೆ ಎಂದಿದ್ದಾರೆ.

ಕಸ ಸಂಗ್ರಹಕ್ಕಾಗಿ ಪ್ರತಿ ಮನೆ ಹಾಗೂ ವಾಣಿಜ್ಯ ಕೇಂದ್ರಗಳಿಗೆ ಪ್ರತ್ಯೇಕ ದರ ನಿಗದಿಪಡಿಸಿದ್ದು,ಪ್ರತಿ ತಿಂಗಳ ಮೊದಲ ವಾರ ಪಾವತಿ ಮಾಡಬೇಕೆಂದು ಮಾಹಿತಿ ನೀಡಲಾಗಿದೆ.ಎಲ್ಲಾ ತ್ಯಾಜ್ಯಗಳನ್ನು ಪ್ರತ್ಯಪ್ರತ್ಯೇಕವಾಗಿ ಸಂಗ್ರಹಿಸಲು ಅನುಕೂಲವಾಗುವಂತೆ ಪ್ರತ್ಯೇಕ ಬಕೆಟ್‍ಗಳನ್ನೂ ನೀಡಲಾಗುವುದು.ಸಂಗ್ರಹಿತ ತ್ಯಾಜ್ಯಗಳನ್ನು ವಿಂಗಡಿಸಿದ ಬಳಿಕ ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುತ್ತದೆ.

ಬುಧವಾರ ಎಸ್‍ಎಲ್‍ಆರ್‍ಎಮ್ ಘಟಕದ ಮುಂಭಾಗ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅಧ್ಯಕ್ಷೆ ದಮಯಂತಿ ವಿ.ಅಮೀನ್,ಗ್ರಾಮಕ್ಕೆ ಕಪ್ಪುಚುಕ್ಕೆಯಾಗಿದ್ದ ತ್ಯಾಜ್ಯ ವಿಲೇವಾರಿಗೆ ಗ್ರಾಪಂ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ ಕಾರಣ ಶೀಘ್ರ ಘಟಕ ಸ್ಥಾಪನೆಗೆ ಕಾರಣವಾಗಿದೆ.ಗ್ರಾಮದ ಎಲ್ಲಾ ತ್ಯಾಜ್ಯಗಳನ್ನು ವ್ಯವಸ್ಥತವಾಗಿ ನಿರ್ವಹಿಸಲು ಕನಿಷ್ಠ ಒಂದೆಕರೆ ಜಾಗದ ಅವಶ್ಯಕತೆಯಿದ್ದು,ಜಿಲ್ಲಾಡಳಿತ ಶೀಘ್ರ ಸ್ಪಂದಿಸಬೇಕು.ಮಾರ್ಕೆಟ್ ಬಳಿ ಸಾರ್ವಜನಿಕರು ತಂದು ಸುರಿಯುತ್ತಿದ್ದ ತ್ಯಾಜ್ಯಗಳಿಗೆ ಈಗಾಗಲೇ ಕಡಿವಾಣ ಹಾಕಲಾಗಿದ್ದು,ಅಲ್ಲಿನ ಇತರ ತ್ಯಾಜ್ಯಗಳನ್ನು ಅದೇ ದಿನ ವಿಲೇವಾರಿ ಮಾಡಲಾಗುವುದು ಎಂದರು.

ಉಪಾಧ್ಯಕ್ಷ ವೈ.ಸುಕುಮಾರ್ ಮಾತನಾಡಿ,ವ್ಯವಸ್ಥಿತ ರೀತಿ ನಿರ್ವಹಣೆಗೆ ಗ್ರಾಪಂ ಪರಿಣಾಮಕಾರಿ ಕಾರ್ಯಸೂಚಿ ಹಮ್ಮಿಕೊಂಡಿದೆ.ಸಮಸ್ಯೆಗಳನ್ನೆಲ್ಲಾ ದಿಟ್ಟವಾಗಿ ನಿಭಾಯಿಸಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು,ಸಾರ್ವಜನಿಕರ ಸಹಕಾರದ ಅವಶ್ಯಕತೆಯಿದೆ ಎಂದರು.

ಗ್ರಾಪಂ ಪಿಡಿಒ ಪಂಚಾಕ್ಷರಿ ಕೆರಿಮಠ ಸ್ವಾಗತಿಸಿ ಪ್ರಸ್ತಾವಿಸಿದರು.ಸದಸ್ಯರಾದ ಅಶೋಕ್ ಸಾಲ್ಯಾನ್,ಹಸನ್,ಸೇವಂತಿ ಸದಾಶಿವ್,ಸಾಧನಾ,ಜಾನಕಿ,ಸುಮಿತ್ರಾ,ಶಿವಮ್ಮ,ಸಂಜೀವಿ ಪೂಜಾರ್ತಿ ಮೇಲ್ವಿಚಾರಕ ರಮೀಝ್ ಹುಸೈನ್ ಉಪಸ್ಥಿತರಿದ್ದರು.