ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿಗೆ ಚಾಲನೆ

ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿಗೆ ಚಾಲನೆ
ಬೀಚ್ ಅಭಿವೃದ್ಧಿಯೊಂದಿಗೆ ಸಮುದಾಯ ಅಭಿವೃದ್ಧಿಗೂ ಅವಕಾಶ
—- ಎಚ್ಕೆ ಹೆಜ್ಮಾಡಿ,ಪಡುಬಿದ್ರಿ

ಪಡುಬಿದ್ರಿಯ ಎಂಡ್ ಪಾಯಿಂಟ್‍ನಲ್ಲಿರುವ ಮುಟ್ಟಳಿವೆ ಪ್ರದೇಶವನ್ನು ಕೇಂದ್ರ ಸರಕಾರದ ಪರಿಸರ ಮಂತ್ರಾಲಯ ವತಿಯಿಂದ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು,ಬೀಚ್ ಪ್ರದೇಶದ ಗಿಡಗಂಟಿಗಳನ್ನು ಕಡಿದು ಸಮತಟ್ಟು ಮಾಡಿವ ಕಾರ್ಯ ಭರದಿಂದ ನಡೆದಿದೆ.

ಎಂಡ್ ಪಾಯಿಂಟ್‍ನ ಸರಕಾರಿ ಜಾಗದಲ್ಲಿ ಅನುಷ್ಠಾನಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಯನ್ನು ಸರಕಾರ ನೀಡಿದ 8 ಕೋಟಿ ರೂ ವೆಚ್ಚದಲ್ಲಿ ಮೂಲಭೂತ ರ್ಸವಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.
5.88 ಎಕ್ರೆ ಸರಕಾರಿ ಜಾಗ: ಎಂಡ್ ಪಾಯಿಂಟ್‍ನಲ್ಲಿ ಸರಕಾರ ಅಧೀನದ 5.88 ಎಕ್ರೆ ಜಾಗವಿದ್ದು,ಇಲ್ಲಿನ ಗಿಡಗಂಟಿಗಳನ್ನು ಕಡಿದು,ಕಾಮಿನಿ ಹೊಳೆಯಿಂದ ಮರಳು ತುಂಬಿಸಿ ಸಮತಟ್ಟು ಮಾಡು ಕಾರ್ಯ ಭರದಿಂದ ನಡೆದಿದೆ.
ಪರಿಸರ ಸಹ್ಯ ಯೋಜನೆ: ಪರಿಸರ ಸಹ್ಯವಾಗಿ ಕಾರ್ಯಗತವಾಗಲಿರುವ ಈ ಯೋಜನೆಯಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿ ಜೈವಿಕ ಶೌಚಾಲಯಗಳು, ವಾಕಿಂಗ್ ಟ್ರ್ಯಾಕ್,ಬಟ್ಟೆ ಬದಲಾವಣೆ ಹಾಗೂ ಸ್ನಾನದ ಕೊಠಡಿಗಳು,ಜಾಗಿಂಗ್ ಟ್ರ್ಯಾಕ್ ಮತ್ತು ಹೊರಾಂಗಣ ಜಿಮ್, ಮಕ್ಕಳ ಮನೋರಂಜನಾ ಚಟುವಟಿಕೆಗಳು, ಪ್ಲಾಸ್ಟಿಕ್ ಬಾಟಲ್ ಬಳಕೆ ನಿಯಂತ್ರಿಸಲು ಶುದ್ಧ ಕುಡಿಯುವ ನೀರಿನ ಘಟಕ, ಘನತ್ಯಾಜ್ಯ ಸಂಯೋಜನೆ ಮತ್ತು ಮರುಬಳಕೆ, ಕಸ ಸಂಗ್ರಹ ಬುಟ್ಟಿ, ಆಸನಗಳ ಅಳವಡಿಕೆ,ವಿಶೇóಚೇತನರಿಗೆ ಗಾಲಿಕುರ್ಚಿ, ಸೌರಶಕ್ತಿ ಬಳಕೆ ಹಾಗೂ ರಾತ್ರಿ ಬಳಕೆಗಾಗಿ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸುವುದು. ಛತ್ರಿಗಳೊಂದಿಗೆ ಲ್ಯಾಂಜರ್ ಕುರ್ಚಿಗಳ ಅಳವಡಿಕೆ, ಇಟಿಪಿ ಮೂಲಕ ನೀರಿನ ಮರುಬಳಕೆ, 24×7 ಸಿಸಿಟಿವಿ ಕಣ್ಗಾವಲು, ಸುರಕ್ಷತಾ ಧ್ವಜಗಳು, ವೀಕ್ಷಣೆಯ ಗೋಪುರ ನಿರ್ಮಾಣ ಹಾಗೂ ಒಂದು ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಒಳಗೊಂಡಿವೆ.


ಗಾಳಿಮರ ಬೀಚ್‍ಗೆ ಕಳೆ: ಸಮತಟ್ಟು ಮಾಡಿದ ಪ್ರದೇಶದಲ್ಲಿ ವಿಪರೀತ ಗಿಡಗಂಟಿಗಳಿದ್ದು ಅವುಗಳ ನಡುವೆ ಗಾಳಿಮರಗಳ ಸಾಲು ಸಾಲು ಇತ್ತು.ಈ ಪೈಕಿ ಎಲ್ಲಾ ಗಾಳಿ ಮರಗಳನ್ನು ಉಳಿಸಿ ಬೀಚ್‍ಗೆ ಆಗಮಿಸುವವರಿಗೆ ನೆರಳಿನಾಶ್ರಯ ಒದಗಿಸಲು ನಿರ್ಧರಿಸಲಾಗಿದೆ.ಇವುಗಳ ಮಧ್ಯೆ ಏಕೈಕ ಶ್ರೀ ಗಂಧದ ಗಿಡವೊಂದಿದ್ದು ಅದನ್ನು ಹಾಗೆಯೇ ಉಳಿಸಲಾಗಿದೆ.
ಮುಟ್ಟಳಿವೆ ಮನಮೋಹಕ: ಹೆಜಮಾಡಿ ಮತ್ತು ಪಡುಬಿದ್ರಿಯನ್ನು ಸಂಪರ್ಕಿಸುವ ಪ್ರದೇಶವೇ ಮುಟ್ಟಳಿವೆ.ಮಳೆಗಾಲದಲ್ಲಿ ಮಾತ್ರ ಇಲ್ಲಿ ಕಾಮಿನಿ ಹೊಳೆ ನೀರು ಸಮುದ್ರ ಸಂಗಮಿಸುತ್ತದೆ.ಈ ಪ್ರದೇಶವು ಅತ್ಯಂತ ಮನಮೋಹಕವಾಗಿದ್ದು,ಬೀಚ್ ಅಭಿವೃದ್ಧಿಗೆ ಬಳಸಿಕೊಂಡಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ.

ಎರಡು ಬದಿಯಿಂದ ರಸ್ತೆ ಸಂಪರ್ಕ: ಎಂಡ್ ಪಾಯಿಂಟ್‍ಗೆ ಪಡುಬಿದ್ರಿ ಬಸ್ಸು ನಿಲ್ದಾಣ ಕಡೆಯಿಂದಲೂ ಬರಬಹುದಾಗಿದೆ.ಮುಟ್ಟಳಿವೆಯ ಸೇತುವೆ ಮತ್ತು ರಸ್ತೆ ಕಾಮಗಾರಿಯನ್ನು ನವೀಕರಣಗೊಳೀಸಿದರೆ ಹೆಜಮಾಡಿಯಿಂದಲೂ ಆಗಮಿಸಲು ಅವಕಾಸವಿದೆ.ಬಂದರು ಮತ್ತು ಮೀನುಗಾರಿಕಾ ಇಲಾಖೆ ನಿರ್ಮಿಸಿದ ಸೇತೆವೆ ತಾಂತ್ರಕ ಕಾರಣದಿಂದ ಸ್ಥಗಿತಗೊಂಡಿದ್ದು,ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಿಸಿದಲ್ಲು ಪ್ರವಾಸಿಗರಿಗೆ ಪ್ರಯೋಜನವಾಗಲಿದೆ.
ಜಲ ಕ್ರೀಡೆಗೆ ವಿಪುಲ ಅವಕಾಶ: ಸರ್ಫಿಂಗ್,ಕಾಯಕಿಂಗ್,ಬೋಟಿಂಗ್‍ಗಳಿಗೆ ಇಲ್ಲಿ ವಿಪುಲ ಅವಕಾಶಗಳು ತೆರದಿಟ್ಟಿವೆ.ಒಂದೆಡೆ ತಳುಕು ಬಳುಕಿನ ಕಾಮಿನಿ ಹಳೆ.ಮತ್ತೊಂದೆಡೆ ವಿಶಾಲ ಸಾಗರ.ಇವೆರಡನ್ನೂ ಬಳಸಿ ಸರ್ಫಿಂಗ್,ಕಾಯಕಿಂಗ್,ಬೋಟಿಂಗ್‍ಗಳಿಗೆ ಹೇರಳ ಅವಕಾಶಗಳು ಇಲ್ಲಿವೆ.

ಬೀಚ್ ಅಭಿವೃದ್ದಿಯಾದೊಡನೆ ಇಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಜಲಕ್ರೀಡೆಗಳಿಗೆ ಅವಕಾಶ ಮಾಡಲಾಗುವುದು ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದ್ದಾರೆ.
ಪಡುಬಿದ್ರಿ ಬೀಚ್ ಅನ್ನು ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಎಂದು ಪರಿಗಣಿಸಲು ಕೇಂದ್ರ ಪರಿಸರ ಮಂತ್ರಾಲಯ ಈಗಾಗಲೇ ಅನುಮೋದನೆ ನೀಡಿದ್ದು, ಗುರ್‍ಗಾಂವ್‍ನ ಎ ಟು ಝಡ್ ಇನ್‍ಫ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆಗೆ ಯೋಜನೆಯ ಟೆಂಡರ್ ಅನ್ನು ಅಂತಿಮಗೊಳಿಸಲಾಗಿದೆ.
ಸಮುದಾಯ ಅಭಿವೃದ್ಧಿಗೆ ವಿಪುಲ ಅವಕಾಶ; ದೇಶದ ಕಡಲ ತಡಿಯ ಎಲ್ಲ 13 ರಾಜ್ಯಗಳಿಗೆ ತಲಾ ಒಂದರಂತೆ ಬ್ಲೂ ಫ್ಲ್ಯಾಗ್ ಮಾನ್ಯತೆಯ ಸರ್ಟಿಫಿಕೇಶನ್ ನೀಡಲಾಗಿದ್ದು,ಒಂದೇ ಬಾರಿಗೆ ಅಭಿವೃದ್ಧಿಯಾಗಲಿದೆ.ಬೀಚ್ ಅಭಿವೃದ್ಧಿಯೊಂದಿಗೆ ಸಮುದಾಯ ಅಭಿವೃದ್ಧಿಗೂ ವಿಪುಲ ಅವಕಾಶಗಳು ತೆರೆದಿಟ್ಟಿವೆ.ಅಕ್ಕಪಕ್ಕದ ಜಮೀನುಗಳಿಗೂ ವಿಪರೀತ ಬೇಡಿಕೆ ಬರಲಿದೆ.
ಅನಿಸಿಕೆ

ಇಲ್ಲಿ ಸರಕಾರಿ ಜಮೀನಿನಲ್ಲಿ ಮಾತ್ರ ಅಭಿವೃದ್ಧಿ ಪಡಿಸಲಾಗುವುದು. ಯಾವುದೇ ಖಾಸಗಿ ಜಾಗ, ಮನೆಗಳು, ಮರ, ಗಿಡಗಳನ್ನು ತೆರವುಗೊಳಿಸಲಾಗುವುದಿಲ್ಲ. ಮೂಲಭೂತ ಸೌಕರ್ಯಗಳು ಅನುಷ್ಠಾನಗೊಂಡ ಬಳಿಕ ಜಿಲ್ಲಾಡಳಿತದ ಸಹಯೋಗದೊಂದಿಗೆ ಜಲಕ್ರೀಡೆಗೂ ಅವಕಾಶ ಕಲ್ಪಿಸಲಾಗುವುದು.ಯೋಜನೆ ಕುರಿತಂತೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆಯ ಮೇಲುಸ್ತುವಾರಿಗಾಗಿ ಹದಿನೈದು ಜನ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ.ಡಿಸೆಂಬರ್ ಒಳಗೆ ಅಭಿವೃದ್ಧಿ ಕಾರ್ಯ ಮುಗಿಯಲಿದೆ.
-ಅನಿತಾ ಭಾಸ್ಕರ್,ಸಹಾಯಕ ನಿರ್ದೇಶಕಿ,ಪ್ರವಾಸೋದ್ಯಮ ಇಲಾಖೆ,ಉಡುಪಿ.

ಕಾಪು ಕ್ಷೇತ್ರದ ಬೀಚ್ ಅಭಿವೃದ್ಧಿಗಾಗಿ ಪಡುಬಿದ್ರ ಬೀಚ್ ಆಯ್ಕೆಯಾಗಿದ್ದು,ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ.ಸ್ಥಳೀಯರ ಬೇಡಿಕೆಯಂತೆ ಜನ ಸಾಮಾನ್ಯರ ನಿತ್ಯ ಬದುಕಿಗೆ ತೊಂದರೆಯಾಗದಂತೆ ಯೋಜನೆ ಅನುಷ್ಠಾನಕ್ಕೆ ಸೂಚಿಸಲಾಗಿದ್ದು ಈ ಬಗ್ಗೆ ಮಾತುಕತೆ ನಡೆಸಲಾಗುವುದು.
-ಲಾಲಾಜಿ ಆರ್.ಮೆಂಡನ್,ಶಾಸಕರು,ಕಾಪು