ಪಡುಬಿದ್ರಿ: ಇಬ್ಬರಿಗೆ ಕೊರೊನಾ ಸೋಂಕು ದೃಢ ಮೂವರ ವರದಿ ನೆಗೆಟಿವ್

ಪಡುಬಿದ್ರಿ: ಕೊರೊನಾ ಸೋಂಕು ದೃಢಪಟ್ಟ 10ನೇ ತರಗತಿ ವಿದ್ಯಾರ್ಥಿನಿಯ ತಾಯಿ ಮತ್ತು ಸಹೋದರಿಗೆ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರಿಬ್ಬರನ್ನೂ ಕಾರ್ಕಳ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಜಮಾಡಿಕೋಡಿಯ ಪ್ರಥಮ ಸೋಂಕಿತ ವ್ಯಕ್ತಿಯ ಸಂಪರ್ಕ ಇದ್ದ ಕಾರಣಕ್ಕೆ ಪಡುಬಿದ್ರಿ-ನಡ್ಸಾಲು ಎನ್‍ಎಸ್ ರಸ್ತೆ ಬಳಿಯ ವ್ಯಕ್ತಿ ಸ್ವಯಂಪ್ರೇರಣೆಯಿಂದ ಕೋವಿಟ್ ಟೆಸ್ಟ್ ಮಾಡಿಸಿಕೊಂಡಾಗ ಪಾಸಿಟಿವ್ ಬಂದಿತ್ತು. ತಕ್ಷಣ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಮಗಳ ಗಂಟಲು ದ್ರವವನ್ನೂ ಮನೆಯವರ ಮನವಿಯಂತೆ ಪರೀಕ್ಷೆಗೆ ಕಳುಹಿಸಿದಾಗ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಇತರ ಇಬ್ಬರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಿದ್ದು, ಮಂಗಳವಾರ ಪಾಸಿಟಿವ್ ಬಂದಿದೆ.

ಮೂವರ ವರದಿ ನೆಗೆಟಿವ್: ಹೆಜಮಾಡಿ ಕೋಡಿಯ ಸೋಂಕಿತ ವ್ಯಕ್ತಿಯ ಮನೆ ಕೆಲಸದ ಮಹಿಳೆಗೆ ಸೋಂಕು ದೃಢಪಟ್ಟ ಬಳಿಕ ಆಕೆಯ ಪುತ್ರನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿ ಕ್ವಾರಂಟೈನ್‍ಗೊಳಪಡಿಸಲಾಗಿತ್ತು. ಮಂಗಳವಾರ ವರದಿ ಬಂದಾಗ ನೆಗೆಟಿವ್ ಬಂದಿದೆ.

ಇದೇ ಸಂದರ್ಭ ಹೆಜಮಾಡಿಯ ಸೋಂಕಿತರ ಸಂಪರ್ಕ ಸಾಧಿಸಿದ್ದ ಹಿನ್ನೆಲೆಯಲ್ಲಿ ಹೆಜಮಾಡಿಯ ಇಬ್ಬರು ಸ್ವಯಂಪ್ರೇರಣೆಯಿಂದ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದರು. ಮಂಗಳವಾರ ಇಬ್ಬರ ವರದಿಯೂ ನೆಗೆಟಿವ್ ಬಂದಿದೆ.
ಹೆಜಮಾಡಿ ಕೋಡಿ ಪ್ರಥಮ ಸೋಂಕಿತನ ಆರೋಗ್ಯದಲ್ಲಿ ಸುಧಾರಣೆ: ಕೊರೊನಾ ಸೋಂಕು ಪೀಡಿತರಾಗಿ ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಹೆಜಮಾಡಿ ಕೋಡಿಯ ಪ್ರಥಮ ಸೋಂಕಿತ ವ್ಯಕ್ತಿ ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದು, ವೆಂಟಿಲೇಟರ್‍ನಲ್ಲಿರುವ ಅವರ ಆರೋಗ್ಯ ಸ್ಥಿತಿ ಮಂಗಳವಾರ ಸ್ವಲ್ಪ ಸುಧಾರಣೆ ಕಂಡಿದೆ.