ಪಡುಬಿದ್ರಿ: ಅಡುಗೆ ಅನಿಲ ಪೂರೈಕೆ ತಾತ್ಕಾಲಿಕ ವಿಳಂಬ

ಪಡುಬಿದ್ರಿ: ಭಾರತ ಸರಕಾರ ಸ್ವಾಮ್ಯದ ಪಡುಬಿದ್ರಿಯ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಅಡುಗೆ ಅನಿಲ ವಿತರಣೆಯಲ್ಲಿ ವಿಳಂಬ ಖಂಡಿಸಿ ಗ್ರಾಹಕರು ಒಂದೇ ಬಾರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ.

ಕಳೆದ 20 ದಿನಗಳಿಂದ ಮುಂಗಡ ಕಾದಿರಿಸಿದ್ದರೂ ಅಡುಗೆ ಅನಿಲ ಪೂರೈಕೆಯಾಗದ ಹಿನ್ನೆಲೆಯಲ್ಲಿ ನೂರಾರು ಗ್ರಾಹಕರು ಅಡುಗೆ ಅನಿಲಕ್ಕೆ ಆಗ್ರಹಿಸಿದರು. ತಾತ್ಕಾಲಿಕ ನೆಲೆಯಲ್ಲಿ ಬೆಳ್ಮಣ್‍ನ ಭಾರತ್ ಗ್ಯಾಸ್ ಏಜೆನ್ಸಿ ಮೂಲಕವಾಗಿ ಕಳೆದ ಮೂರು ನಾಲ್ಕು ದಿನಗಳಿಂದಲೂ ಪ್ರತಿದಿನವೂ ಸುಮಾರು 150 ರಷ್ಟು ಸಿಲಿಂಡರ್‍ಗಳ ಪೂರೈಕೆಯಾಗುತ್ತಿದ್ದು, ಸೋಮವಾರವೂ ಸುಮಾರು 50ರಷ್ಟು ಗ್ರಾಹಕರಿಗೆ ಅಡುಗೆ ಅನಿಲ ವಿತರಿಸಲಾಯಿತು.

ಈ ಕುರಿತು ಭಾರತ್ ಗ್ಯಾಸ್‍ನ ಮಾರುಕಟ್ಟೆ ಅಧಿಕಾರಿ ಅರುಣ್ ಮೋಹನ್‍ರನ್ನು ಸಂಪರ್ಕಿಸಿದಾಗ ಸದ್ಯ ಪಡುಬಿದ್ರಿ ಏಜೆನ್ಸಿಗೆ ಗ್ಯಾಸ್ ಸಿಲಿಂಡರ್‍ಗಳ ಪೂರೈಕೆಯನ್ನು ತಡೆಹಿಡಿಯಲಾಗಿದೆ. ಏಜೆನ್ಸಿಗೆ ವಿಧಿಸಲಾಗಿರುವ ದಂಡನಾ ಮೊತ್ತವು ಪಾವತಿಯಾದ ಬಳಿಕ ಸಿಲಿಂಡರ್‍ಗಳ ಪೂರೈಕೆ ಯಥಾಸ್ಥಿತಿಗೆ ಬರಲಿದೆ. ಗ್ರಾಹಕರಿಗೆ ತೊಂದರೆಯಾಗದು. ಯಾವ ಕಾರಣಕ್ಕಾಗಿ ಎಷ್ಟು ದಂಡನಾ ಮೊತ್ತವನ್ನು ವಿಧಿಸಲಾಗಿದೆ ಎನ್ನುವ ಕುರಿತಾಗಿ ಪ್ರಶ್ನಿಸಿದಾಗ ಅಧಿಕಾರಿ ಅದನ್ನು ತಾನು ತಿಳಿಸುವಂತಿಲ್ಲ ಎಂದಿದ್ದಾರೆ. ಪಡುಬಿದ್ರಿಯ ಏಜೆನ್ಸಿಯ ಪ್ರತಿನಿಧಿ ಲಕ್ಷ್ಮೀನಾರಾಯಣ್ ಅವರನ್ನು ಕೇಳಿದಾಗ ಸದ್ಯ ಬೆಳ್ಮಣ್‍ನಿಂದ ಸಿಲಿಂಡರ್‍ಗಳನ್ನು ತರಿಸಿ ಗ್ರಾಹಕರಿಗೆ ಪೂರೈಸಲಾಗುತ್ತಿದೆ. ತಮಗೆ ವಿಧಿಸಲಾದ ದಂಡನಾ ಮೊತ್ತದ ಪಾವತಿಯ ಬಳಿಕ ಪರಿಸ್ಥಿತಿ ತಿಳಿಯಾಗಲಿದೆ ಎಂದಿದ್ದಾರೆ.