ಪಡುಬಿದ್ರಿ ಅಂತಾರಾಜ್ಯ ವಾಲಿಬಾಲ್ ಪಂದ್ಯಾಟದ ಟ್ರೋಫಿ ಅನಾವರಣ

ಪಡುಬಿದ್ರಿ: ಇಲ್ಲಿನ ಕಂಚಿನಡ್ಕ ಫ್ರೆಂಡ್ಸ್ ಸರ್ಕಲ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಡಿಸೆಂಬರ್ 15 ಶನಿವಾರ ಕಂಚಿನಡ್ಕ ಕೆಎಫ್‍ಸಿ ಮೈದಾನದಲ್ಲಿ ನಡೆಯುವ ಹೊನಲು ಬೆಳಕಿನ ಅಂತಾರಾಜ್ಯ ವಾಲಿಬಾಲ್ ಪಂದ್ಯಾಟದ ಟ್ರೋಫಿಯನ್ನು ಮುಂಬೈ ಓಶಿಯನ್ ಹೋಟೆಲ್ ಮಾಲೀಕ ಜಿತೇಂದ್ರ ಜೆ.ಶೆಟ್ಟಿ ಭಾನುವಾರ ರಾತ್ರಿ ಹೋಟೆಲ್ ಅಮರ್ ಕಂಪಟ್ರ್ಸ್‍ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿದರು.

ಈ ಸಂದರ್ಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪಡುಬಿದ್ರಿ ಫ್ರೆಂಡ್ಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಪಡುಬಿದ್ರಿಯ ಕ್ರೀಡಾರಂಗದಲ್ಲೂ ಅವಿಷ್ಕಾರಗಳಾಗುತ್ತಿದ್ದು,ನೂತನ ಪ್ರಯೋಗಳಿಗೆ ವೇದಿಕೆಯಾಗುತ್ತಿದೆ.ಕ್ರಿಕೆಟ್‍ಗೆ ಪ್ರಸಿದ್ಧಿ ಪಡೆದ ಇಲ್ಲಿ ಈ ಬಾರಿ ವಾಲಿಬಾಲ್,ಬ್ಯಾಡ್ಮಿಂಟನ್ ಕ್ರೀಡೆಗಳಿಗೂ ಅವಕಾಶ ದೊರೆಯುತ್ತಿದೆ ಎಂದರು.

ಮುಖ್ಯ ಅತಿಥಿ ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ,ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿ ಪಡುಬಿದ್ರಿ ಕ್ರೀಡಾ ಚಟುವಟಿಕೆಗಳ ಕೇಂದ್ರವಾಗುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಾಲಿಬಾಲ್ ಆಟಗಾರ ಹಾಗೂ ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ಇಲ್ಲಿ ವಾಲಿಬಾಲ್‍ನ ಯುವ ಪ್ರತಿಭೆಗಳು ಅನೇಕರಿದ್ದು,ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಂತಾರಾಜ್ಯ ವಾಲಿಬಾಲ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ.ಮುಂದಿನ ವರ್ಷ ಪಡುಬಿದ್ರಿಯ ಕರಾವಳಿ ಫ್ರೆಂಡ್ಸ್ ವತಿಯಿಂದ ಪಾರಣ್ಣ ಸ್ಮಾರಕ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.

ಅಮರ್ ಕಂಫಟ್ರ್ಸ್ ಮಾಲೀಕ ಮಿಥುನ್ ಆರ್.ಹೆಗ್ಡೆ,ಪಡುಬಿದ್ರಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕೃಷ್ಣ ಬಂಗೇರ.ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷ ಪ್ರಸನ್ನ ಕುಮಾರ್,ಉದ್ಯಮಿ ಹಾಗೂ ಅರಾಫಾ ಕ್ರಿಕೆಟರ್ಸ್‍ನ ಫಯಾಝ್ ಎಸ್‍ಪಿ, ಕೆಎಫ್‍ಸಿ ಅಧ್ಯಕ್ಷ ದಿನೇಶ್,ಮುಂಬೈ ಉದ್ಯಮಿ ಕರ್ನಿರೆ ಸಂಪತ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಕೆಎಫ್‍ಸಿ ಕಾರ್ಯದರ್ಶಿ ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಈ ಸಂದರ್ಭ ಪಂದ್ಯಾಟದಲ್ಲಿ ಭಾಗವಹಿಸುವ ಆಹ್ವಾನಿತ ತಂಡಗಳ ಪಟ್ಟಿ ಬಿಡುಗಡೆಗೊಳಿಸಲಾಯಿತು.ದಿವಾಕರ್ ಕೋಟ್ಯಾನ್‍ರವರ ಮನ್ವಿತ್ ಗಯನ್ ಫ್ರೆಂಡ್ಸ್(ತಮಿಳುನಾಡು,ಕೇರಳ,ಮುಂಬೈ ಆಟಗಾರರು),ಜಾಕ್ಸನ್ ಮಚ್ಚೂರುರವರ ಪ್ರಗತಿ ಮಚ್ಚೂರು(ತಮಿಳುನಾಡು ಮತ್ತು ಕೇರಳ ಆಟಗಾರರು),ಅರಾಫಾ ಮತ್ತು ಆಸಿಫ್‍ರವರ ಅರಾಫಾ ಆಪತ್ಭಾಂಧವ ಫ್ರೆಂಡ್ಸ್(ಮಂಗಳೂರು ಆಟಗಾರರು),ಸುರೇಂದ್ರ ಕರ್ಕೇರರವರ ರಕ್ತೇಶ್ವರೀ ಕುಂಟಾಡಿ(ಆಂಧ್ರಪ್ರದೇಶ,ತಮಿಳುನಾಡು,ಕೇರಳ ಆಟಗಾರರು),ಆಸಿಫ್ ಸೌದಿ ಅರೇಬಿಯಾರವರ ಮೊಮ್ಮಡನ್ ಪಡುಬಿದ್ರಿ(ಮಂಗಳೂರು ಮತ್ತು ಬೆಂಗಳೂರು ಆಟಗಾರರು),ಟ್ರೀ ಹೌಸ್ ಮಾಲೀಕತ್ವದ ಟ್ರೀ ಹೌಸ್ ಎರ್ಮಾಳು(ಕರ್ನಾಟಕದ ಆಟಗಾರರು) ಮತ್ತು ಮಂಗಳ ಫ್ರೆಂಡ್ಸ್ ಮಂಗಳೂರು(ಕರ್ನಾಟಕ,ಕೇರಳ,ತಮಿಳುನಾಡು ಆಟಗಾರು) ಒಟ್ಟು 7 ತಂಡಗಳು ಭಾಗವಹಿಸಲಿದ್ದು,ವಿಜೇತರಿಗೆ ಪ್ರಥಮ ಕೆಎಫ್‍ಸಿ ಟ್ರೋಫಿ-2018 ಸಹಿತ ರೂ.50 ಸಾವಿರ ನಗದು,ದ್ವಿತೀಯ ಟ್ರೋಫಿ ಸಹಿತ ನಗದು ರೂ.30 ಸಾವಿರ,ತೃತೀಯ ಟ್ರೋಫಿ ಸಹಿತ ನಗದು ರೂ.20 ಸಾವಿರ,ಮತ್ತು ಚತುರ್ಥ ಟ್ರೋಫಿ ಸಹಿತ ನಗದು ರೂ.10 ಸಾವಿರ ಬಹುಮಾನಗಳಿವೆ.

ಡಿ.15 ಶನಿವಾರ ಸಂಜೆ 7 ಗಂಟೆಗೆ ನಡೆಯುವ ಸಮಾರಂಭದಲ್ಲಿ ಉಡುಪಿ ಮತ್ತು ದಕ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಡಾ.ಜಯಮಾಲಾ ಮತ್ತು ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.ಸಮಾರಂಭದಲ್ಲಿ ಭಂಡಾರಿ ಮಹಾಮಂಡಲ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ,ತುಳು ಚಲನಚಿತ್ರ ನಟರಾದ ಅರವಿಂದ್ ಬೋಳಾರ್ ಮತ್ತು ಅರ್ಜುನ್ ಕಾಪಿಕಾಡ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಈ ಸಂದರ್ಭ ಶಶಿಕಾಂತ್ ಪಡುಬಿದ್ರಿ,ಬಶೀರ್ ಕಂಚಿನಡ್ಕ,ಪ್ರಕಾಶ್ ಶೆಟ್ಟಿ ಹೆಜಮಾಡಿ,ಸುಗುಣ ಕಂಚಿನಡ್ಕ ಮತ್ತು ಕರುಣಾಕರ ಪೂಜಾರಿಯವರನ್ನು ಸನ್ಮಾನಿಸಲಾಗುವುದು.