ಪಡುಬಿದ್ರಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ನಡೆದ ಬೃಹತ್ ಮಿಲಾದುನ್ನಬಿ ಮೆರವಣಿಗೆ

ಪಡುಬಿದ್ರಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ನಡೆದ ಬೃಹತ್ ಮಿಲಾದುನ್ನಬಿ ಮೆರವಣಿಗೆಯು ಕಂಚಿನಡ್ಕ ಮಸೀದಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪಡುಬಿದ್ರಿ ಪೇಟೆ ಮೂಲಕ ಕೇಂದ್ರ ಮಸೀದಿಯಲ್ಲಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ಮದರಸ ವಿದ್ಯಾರ್ಥಿಗಳ ಸ್ಕೌಟ್ ತಂಡ ಆಕರ್ಷಕ ಪಥ ಸಂಚಲನ ಗಮನಸೆಳೆಯಿತು. ಎರ್ಮಾಳು, ಫಲಿಮಾರು-ಇನ್ನಾ, ಹೆಜಮಾಡಿಯಲ್ಲೂ ಮಿಲಾದುನ್ನಬಿ ಜಾಥಾ ನಡೆಯಿತು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮೀಲಾದುನ್ನಬಿ ಜಾಥಾದಲ್ಲಿ ಪಾಲ್ಗೊಂಡು ಮುಸ್ಲಿಮ್ ಬಾಂಧವರಿಗೆ ಶುಭಕೋರಿದರು.

ಮೆರವಣಿಗೆಯಲ್ಲಿ ಸ್ವಚ್ಛತೆಯ ಪಾಠ: ಪಡುಬಿದ್ರಿಯಲ್ಲಿ ನಡೆದ ಮೆರವಣಿಗೆಯಲ್ಲಿ ನೀಡಲಾಗುವ ತಂಪು ಪಾನೀಯಗಳಿಂದ ಅಲ್ಲಲ್ಲಿ ಕಸ ಉಂಟಾಗುವುದನ್ನು ತಪ್ಪಿಸಲು ಪಡುಬಿದ್ರಿ ಶಾಖೆಯ ಎಸ್‍ವೈಎಸ್ ವತಿಯಿಂದ ವಾಹನವೊಂದರಲ್ಲಿ ಸ್ವಚ್ಛತೆಯ ಬಗ್ಗೆ ವಿವರಣೆ ನೀಡಲಾಯಿತು. ಅಲ್ಲದೆ ಮೆರವಣಿಗೆ ಸಾಗಿ ಬಂದ ಮಾರ್ಗದಲ್ಲಿ ಉಂಟಾದ ಕಸಗಳನ್ನು ಸಂಗ್ರಹಿಸಿ ಸ್ವಚ್ಚತೆ ಮಾಡುವ ಮೂಲಕ ಗಮನಸೆಳೆದರು.