ಪಡುಬಿದ್ರಿಯ ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಗೆ ವಿದ್ಯುಕ್ತ ಚಾಲನೆ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ದ್ವೈವಾರ್ಷಿಕ ನಡಾವಳಿ `ಢಕ್ಕೆಬಲಿ’ ಸೇವೆಗಳಿಗೆ ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣರ ಢಕ್ಕೆಬಲಿ ಸೇವೆಯು ನಡೆದಿದ್ದು ಸುಮಾರು ಮಾರ್ಚ್ 12ರವರೆಗೆ ನಿರ್ದಿಷ್ಟ ದಿನಗಳಲ್ಲಿ ನಡೆಯಲಿರುವ ಈ ಬಾರಿಯ ಒಂದು ನಾಗಮಂಡಲದ ಸಹಿತ ಒಟ್ಟು 35 ಢಕ್ಕೆಬಲಿ ಸೇವೆಗಳಿಗೆ ಇಂದು ಸಂಜೆ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಹೊರಟ ಹೊರೆ ಕಾಣಿಕೆ ಮೆರವಣಿಗೆಯೊಂದಿಗೆ ಮುನ್ನುಡಿ ದೊರೆತಿದೆ.

ಪಡುಬಿದ್ರಿ ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳರು,ಬ್ರಹ್ಮಸ್ಥಾನದ ಪಾತ್ರಿಗಳಾದ ಪಿ.ಜಿ.ನಾರಾಯಣ ರಾವ್ ಮತ್ತು ಸುರೇಶ್ ರಾವ್,ಶ್ರೀ ವನದುರ್ಗಾ ಟ್ರಸ್ಟ್‍ನ ಟ್ರಸ್ಟಿಗಳಾದ ಅಧ್ಯಕ್ಷ ಗುರಿಕಾರ ಕೊರ್ನಾಯ ಶ್ರೀಪತಿ ರಾವ್,ಕೊರ್ನಾಯ ಪದ್ಮನಾಭ ರಾವ್,ಗುರಿಕಾರ ಬಾಲಪ್ಪ ಪಿ.ಎನ್.ಶ್ರೀನಿವಾಸ ರಾವ್,ಗುರಿಕಾರ ಮುರುಡಿ ಮೋಹನ ರಾವ್, ಟ್ರಸ್ಟ್‍ನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್,ಕೋಶಾಧಿಕಾರಿ ವೈ.ಸುರೇಶ್ ರಾವ್,ಟ್ರಸ್ಟಿಗಳಾದ ಪಟ್ರಾಮ ಕೃಷ್ಣಾನಂದ,ಪಿ.ಶ್ರೀನಿವಾಸ ರಾವ್,ಗುಡ್ಡೆ ವಿಠಲ ರಾವ್ ಸಹಿತ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸ್ಥಾನಿಗಳಾದ ಅರ್ಚಕರಾದ ಪಿ.ಎಲ್.ರಾಮಕೃಷ್ಣ ಆಚಾರ್ಯ,ಕೇಶವ ಆಚಾರ್ಯ,ಗುರುರಾಜ ಆಚಾರ್ಯ,ರಘುಪತಿ ಆಚಾರ್ಯ ಜತೆಗೂಡಿ ಢಕ್ಕೆಬಲಿ ಸೇವಾ ಕೈಂಕರ್ಯದ ಪೂರ್ಣ ಸಫಲತೆ,ಗ್ರಾಮ ಸುಭಿಕ್ಷೆಗಳಿಗಾಗಿ ಶ್ರೀ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಗುರುರಾಜ ಭಟ್ ಅವರು ಶ್ರೀ ಮಹಾಗಣಪತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನಗಳಲ್ಲಿ ಸಲ್ಲಿಸಿದ ಪ್ರಾರ್ಥನೆ ಬಳಿಕ ಸಮಾಜ ಬಾಂಧವರು,ಸುವಾಸಿನಿಯರು ಜತೆಗೂಡಿ ಫಲಪುಷ್ಪಗಳ ಸಹಿತವಾದ ಹೊರೆ ಕಾಣಿಕೆ ಮೆರವಣಿಗೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕಾಗಮಿಸಿದರು.
ಬಳಿಕ ಬ್ರಹ್ಮಸ್ಥಾನದ ವನಸಿರಿಯ ಅಲಂಕಾರವು ನಡೆದು ರಾತ್ರಿ ತಂಬಿಲ ಸೇವೆ, ಢಕ್ಕೆಬಲಿ ಸೇವೆಗಳು ಸಾಂಗವಾಗಿ ನಡೆಯಿತು.