ಪಡುಬಿದ್ರಿಯಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ: ಜೈ ಭೀಮ್ ಟ್ರೋಫಿ-2018

ಪಡುಬಿದ್ರಿ: ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ಇಂದು ಮತ್ತು ನಾಳೆ(ಡಿ1-2) ಅನಾರೋಗ್ಯ ಪೀಡಿತರ ನೆರವಿನ ಉದ್ದೇಶದೊಂದಿಗೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಜೈ ಭೀಮ್ ಟ್ರೋಫಿ-2018” ನಡೆಯಲಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಪಡುಬಿದ್ರಿ ಘಟಕದ ವತಿಯಿಂದ ನಡೆಯುವ ಪಂದ್ಯಾಕೂಟವನ್ನು ಶನಿವಾರ ಬೆಳಿಗ್ಗೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಲಿದ್ದು,ಕಾಪು ಶಾಸಕ ಲಾಲಾಜಿ ಆರ್.ಮೆಂಡನ್,ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.
ಭಾನುವಾರ ಸಂಜೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಅಧ್ಯಕ್ಷತೆ ವಹಿಸಲಿದ್ದು ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ,ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಈ ಸಂದರ್ಭ ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಂಕರ್ ನಂಬಿಯಾರ್‍ರವರನ್ನು ಸನ್ಮಾನಿಸಲಾಗುವುದು.

ಎಸ್‍ಸಿ ಎಸ್‍ಟಿ ಗಳಿಗೆ ಮಾತ್ರ ಅವಕಾಶ: ಪಂದ್ಯಾಟದಲ್ಲಿ ಎಸ್‍ಸಿ ಮತ್ತು ಎಸ್‍ಟಿ ಸದಸ್ಯರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.ಪಂದ್ಯಾಟದಲ್ಲಿ ರಾಜ್ಯದಾದ್ಯಂತ 30 ತಂಡಗಳು ಭಾಗವಹಿಸಲಿವೆ.ಮುಖ್ಯವಾಗಿ ಎಸ್‍ಟಿ ಕ್ರೀಡಾಳುಗಳು ಇತರ ಯಾರೊಂದಿಗೂ ಆಟವಾಡಲು ಬರಲಾರರು.ಅವರಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಳುಗಳಿದ್ದು,ಅವರನ್ನು ಮುಖ್ಯವಾಹಿನಿಗೆ ತರುವ ಮಹತ್ತರ ಉದ್ದೇಶದೊಂದಿಗೆ ಈ ಪಂದ್ಯಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಪಡುಬಿದ್ರಿ ದಸಂಸ ಸಂಚಾಲಕ ಲೋಕೇಶ್ ಕಂಚಿನಡ್ಕ ತಿಳಿಸಿದ್ದು,ಪಂದ್ಯಾಟದಲ್ಲಿ ಉಳಿಕೆಯ ಹಣವನ್ನು ಅನಾರೋಗ್ಯ ಪೀಡಿತರ ನೆರವಿಗಾಗಿ ಬಳಸಲಾಗುವುದು ಎಂದು ಹೇಳಿದ್ದಾರೆ.

ಪಂದ್ಯಾಟದಲ್ಲಿ ಪ್ರಥಮ ಟ್ರೋಫಿಯೊಂದಿಗೆ ನಗದು ರೂ.44,444 ಮತ್ತು ದ್ವಿತೀಯ ಟ್ರೋಫಿಯೊಂದಿಗೆ ನಗದು ರೂ.22,22 ಬಹುಮಾನಗಳಿವೆ.

ಶುಕ್ರವಾರ ರಾತ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಜೈ ಭೀಮ್ ಟ್ರೋಫಿಯನ್ನು ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ ಅನಾವರಣಗೊಳಿಸಿದರು.ಈ ಸಂದರ್ಭ ಲೋಕೇಶ್ ಕಂಚಿನಡ್ಕ,ರವೀಂದ್ರ ಸಾಲ್ಯಾನ್,ಸುನಿಲ್ ಶೆಟ್ಟಿ,ಅರವಿಂದ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.