ಪಡುಬಿದ್ರಿಯಲ್ಲಿ ಮುಸ್ಲಿಮ್ ಬಾಂಧವರಿಂದ ಸಂತಾಪ ಸೂಚನಾ ಸಭೆ

ಪಡುಬಿದ್ರಿ: ನಾವು ಯೋಧರು.ಯಾವುದಕ್ಕೂ ಭಯಪಡುವವರು ಅಲ್ಲ.ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ.ದೇಶದ ಜನರ ಸುರಕ್ಷತೆಗಾಗಿ ನಾವು ಯಾವುದನ್ನೂ ಲೆಕ್ಕಿಸದೆ ದೇಶಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಬಿಎಸ್‍ಎಫ್‍ನ ಸಹಾಯಕ ಕಮಾಂಡಂಟ್ ಪಡುಬಿದ್ರಿ ಮೊಯ್ದೀನ್ ಹೇಳಿದ್ದಾರೆ.

ಪಡುಬಿದ್ರಿ ಸರ್ವ ಮುಸ್ಲಿಮ್ ಬಾಂಧವರು ಪಡುಬಿದ್ರಿಯಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರಿಂದ ದಾರುಣವಾಗಿ ಹತ್ಯೆಗೀಡಾದ ದೇಶದ ವೀರ ಯೋಧರರಿಗೆ ಹಮ್ಮಿಕೊಂಡ ಸಂತಾಪ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ತವ್ಯಕ್ಕೆ ಹಾಜರಾಗುತಿದ್ದ ಯೋಧರ ಮೇಲೆ ಪಾಕಿಸ್ಥಾನಿ ಪ್ರಾಯೋಜಿತ ಉಗ್ರರು ನಡೆಸಿದ ದಾಳಿಯು ಖಂಡನೀಯ.ಯುದ್ಧಕ್ಕೆ ಕರೆಕೊಟ್ಟರೂ ಈಗಲೂ ನಮ್ಮ ಸೈನ್ಯವು ಸದಾ ಸಿದ್ಧವಾಗಿದೆ ಎಂದ ಅವರು, ಭಯೋತ್ಪಾಧನೆಗೆ ಧರ್ಮ ಎಂಬುವುದಿಲ್ಲ.ಅವರನ್ನು ಧರ್ಮದ ಆಧಾರದಲ್ಲಿ ನೋಡಬೇಡಿ.ಧರ್ಮದ ಬಗ್ಗೆ ತಿಳುವಳಿಕೆ ಇದ್ದವರು ಇಂತಹ ಕಾರ್ಯಕ್ಕೆ ಇಳಿವುದಿಲ್ಲ.ಇದೊಂದು ಹೇಡಿಗಳ ಕೃತ್ಯ ಎಂದರು.

ಈ ಸಂದರ್ಭ ಪಡುಬಿದ್ರಿಯ ಉರ್ದು ಶಾಲಾ ವಠಾರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪಡುಬಿದ್ರಿ ಪೇಟೆಯ ಮೂಲಕ ಮೌನ ಮೆರವಣಿಗೆ ನಡೆಸಲಾಯಿತು.ಬಳಿಕ ಬಸ್ಸು ನಿಲ್ದಾಣದಲ್ಲಿ ಸಂತಾಪ ಸೂಚನಾ ಸಭೆ ನಡೆಯಿತು. ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ರಾಷ್ಟ್ರೀಯ ಧ್ವಜ ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪಡುಬಿದ್ರಿ ಜಮಾಅತ್ ಕಮಿಟಿಯ ಅಧ್ಯಕ್ಷ ಪಿ.ಎ.ಅಬ್ದುಲ್ ರಹಮಾನ್ ಹಾಜಿ,ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್,ಎಂ.ಪಿ.ಮೊಯಿದಿನಬ್ಬ,ಗ್ರಾಮ ಪಂಚಾಯಿತಿ ಸದಸ್ಯ ಹಸನ್ ಭಾವ, ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್ ಅಧ್ಯಕ್ಷ ಕೆ. ಇಸ್ಮಾಯಿಲ್,ಎಸ್‍ವೈಎಸ್ ಜಿಲ್ಲಾಧ್ಯಕ್ಷ ಹಾಜಿ ಹಮ್ಮಬ್ಬ ಮೊಯಿದಿನ್,ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್,ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಸೈಯ್ಯದ್ ನಿಝಾಮುದ್ದೀನ್,ಹಾಜಿ ಅಬ್ದುಲ್ ರಹ್ಮಾನ್,ಎಸ್‍ಎಸ್‍ಎಫ್ ಅಧ್ಯಕ್ಷ ತೌಸೀಫ್,ಎಂ.ಎಸ್.ಮನ್ಸೂರ್,ರಝಾಕ್,ಆಸೀಫ್ ಆಪದ್ಬಾಂಧವ,ಖಿದ್ಮತುಲ್ ಅನಾಮ್ ಅಧ್ಯಕ್ಷ ಮಯ್ಯದ್ದಿ ಮಜಲಕೋಡಿ,ಇ ಆನತುಲ್ ಮಸಾಕೀನ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಹುಸೈನ್ ಕಾಡಿಪಟ್ಣ,ಕೌಸರ್,ರಝಾಕ್ ಕಂಚಿನಡ್ಕ,ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.