ಪಡುಬಿದ್ರಿಯಲ್ಲಿ ಅಭಿನಂದನೆ ಸ್ವೀಕರಿಸಿದ ನೂತನ ಸಂಸದೆ ಶೋಭಾ ಕರಂದ್ಲಾಜೆ

ಕೇಂದ್ರ ಸರಕಾರದ ಮೂಲಕ ಕ್ಷೇತ್ರದ ಹೆದ್ದಾರಿ, ರೈಲ್ವೇ ಮತ್ತು ಬಂದರು ಯೋಜನೆಗಳ ಬಗ್ಗೆ ಹೆಚ್ಚು ಮುತುವರ್ಜಿ

ಪಡುಬಿದ್ರಿಯಲ್ಲಿ ಅಭಿನಂದನೆ ಸ್ವೀಕರಿಸಿದ ನೂತನ ಸಂಸದೆ ಶೋಭಾ ಕರಂದ್ಲಾಜೆ
ಪಡುಬಿದ್ರಿ: ಕೇಂದ್ರ ಸರಕಾರದ ಅಧೀನದ ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಮತ್ತು ಬಂದರು ಯೋಜನೆಗಳಿಗೆ ಸಂಬಂಧಿಸಿ ಹೆಚ್ಚು ಮುತುವರ್ಜಿ ವಹಿಸುವುದಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.

ಪಡುಬಿದ್ರಿಯ ಹೋಟೆಲ್ ನಯತ್ ರೆಸಿಡೆನ್ಸಿಯ ಶುಭಂ ಸಭಾಂಗಣದಲ್ಲಿ ಭಾನುವಾರ ಪಡುಬಿದ್ರಿ ಜಿಪಂ ವ್ಯಾಪ್ತಿಯ ಮಹಾ ಶಕ್ತಿ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮುಖ್ಯವಾಗಿ ಹೆಜಮಾಡಿ ಬಂದರು ಯೋಜನೆ ಜಾರಿಗಾಗಿ ಶತ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ಅವರು ಮಲ್ಪೆ ಬಂದರಿಗೆ ಪೂರಕವಾಗಿ ಮಲ್ಪೆಯಿಂದ ಕರಾವಳಿ ಜಂಕ್ಷನ್‍ವರೆಗಿನ ರಸ್ತೆಯನ್ನು ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಪರಿಣಾಮಕಾರಿ ಯೋಜನೆ ಹಮ್ಮಿಕೊಂಡಿರುವುದಾಗಿ ಹೇಳಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಮಾತುಕತೆ ನಡೆಸಿದ್ದು,ಅತೀ ಶೀಘ್ರದಲ್ಲಿ ಸರ್ವಿಸ್ ರಸ್ತೆ, ಬಾಕಿ ಉಳಿದ ಸೇತುವೆ ಕಾಮಗಾರಿಗಳನ್ನು ಆದ್ಯೆತೆ ಮೇರೆಗೆ ನಡೆಸಲು ಮನವಿ ಮಾಡಿದ್ದೇನೆ.ಕಳಪೆ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದ್ದೇ ವಿಳಂಬಕ್ಕೆ ಕಾರಣ ಎಂದವರು ಹೇಳಿದರು.
ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿಗೆ 8 ಕೋಟಿ ರೂ. ನೀಡಲಾಗಿದ್ದರೂ, ಈ ಭಾಗದ ಪ್ರವಾಸೋದ್ಯಮಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆ ಮೂಲಕ ಮತ್ತಷ್ಟು ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದರು.

ಮೀನುಗಾರರ ಬಹುದಿನದ ಬೇಡಿಕೆಯಾದ ಕೇಂದ್ರ ಸರಕಾರದಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿಸಿದ್ದು, ಈ ಮೂಲಕ ಮೀನುಗಾರಿಕೆಗೆ ಕೇಂದ್ರ ಸರಕಾರದಿಂದ ಹೆಚ್ಚು ಪ್ರೋತ್ಸಾಹ ದೊರೆಯಲಿದೆ. ಜತೆಗೆ ಡೀಸೆಲ್ ರಸ್ತೆ ತೆರಿಗೆ ಕಡಿತಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದವರು ಹೇಳಿದರು.

ಕೆಲವು ರಾಜ್ಯಗಳಲ್ಲಿ ಸಿಆರ್‍ಝಡ್ ನಿಯಮವನ್ನು 5ಒ ಮೀಟರ್‍ಗೆ ಇಳಿಸಿದ್ದು, ಕರ್ನಾಟಕದಲ್ಲೂ 50 ಮೀಟರ್‍ಗರ ಇಳಿಸಲು ಶತಪ್ರಯತ್ನ ನಡೆಸುವುದಾಗಿ ಹೇಳಿದ ಶೋಭಾ ಕರಂದ್ಲಾಜೆ, ಕೊಂಕಣ ರೈಲ್ವೇ ವಿಭಾಗಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅತೀ ಶೀಘ್ರದಲ್ಲಿ ಈ ಭಾಗದಲ್ಲಿ ಟ್ರ್ಯಾಕ್ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣಕ್ಕೆ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

ಕಳೆದ ಬಾರಿ ಸಂಸದೆಯಾಗಿದ್ದ ಸಂದರ್ಭ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಬಾರಿ ಅವೆಲ್ಲವನ್ನೂ ಬಗೆಹರಿಸಿ ವಿಕೇಂದ್ರೀಕರಣ ಮೂಲಕ ಪ್ರತಿಯೊಂದು ಗ್ರಾಮಗಳಿಗೂ ಅನುದಾನ ಹಂಚಿಕೆ ಮಾಡಲು ನಿರ್ಧರಿಸಿದ್ದೇನೆ.ಮುಂದೆ ನನ್ನಿಂದ ಯಾವುದೇ ಕೆಲಸ ಮಾಡಿಸಬೇಕಿದ್ದರೂ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ನನ್ನನ್ನೇ ಸಂಪರ್ಕಿಸಬೇಕು. ಉಡುಪಿಯ ಕಛೇರಿಯಲ್ಲಿ ವಾರಕ್ಕೊಮ್ಮೆ ಸಾರ್ವಜನಿಕ ಭೇಟಿಗೆ ನಿರ್ಧರಿಸಿದ್ದೇನೆ. ದಿನಾಂಕವನ್ನು ಶೀಘ್ರ ಬಹಿರಂಗಪಡಿಸಲಿದ್ದೇನೆ ಎಂದವರು ಹೇಳಿದರು.
ವಾಜಪೇಯಿಯವರಿಗೆ ಗೇಲಿ ಮಾಡಿದ ಮಹಾಘಟಬಂದನ್ ನಾಯಕರಿಗೆ ಈ ಬಾರಿ ಮತದಾರರು ತಕ್ಕ ಶಾಸ್ತಿ ಮಾಡಿದ್ದಾರೆ.ಕರ್ನಾಟಕದಲ್ಲೂ ಸೂಕ್ತ ಪ್ರತಿಫಲ ಅನುಭವಿಸಿದ್ದಾರೆ.ಕರಾವಳಿ ಭಾಗದಲ್ಲಿ ಮೀನುಗಾರರ ಮತಗಳ ಬಗ್ಗೆ ಸಾಕಷ್ಟು ಗೊಂದಲಗಳಿತ್ತು.ಆದರೆ ಕರಾವಳಿಯ ಎಲ್ಲಾ ಮೀನುಗಾರರು ಬಿಜೆಪಿಗೆ ಸಾಮೂಹಿಕವಾಗಿ ಮತ ನೀಡುವ ಮೂಲಕ ಗೊಂದಲಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದವರು ಅಭಿಪ್ರಾಯಿಸಿದರು.

ಬೆಂಗಳೂರಿನ ಮತದಾರರಿಗಿಂತ ಕರಾವಳಿಯ ಮತದಾರರು ಬುದ್ಧಿವಂತರು ಎಂದು ಹೆಚ್ಚು ಮತದಾನ ಮಾಡುವ ಮೂಲಕ ತೋರಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಗಟ್ಟಿಗೊಳಿಸಿದ್ದಾರೆ.ಕಳೆದ 2-3 ತಿಂಗಳಿಂದ ಹಗಳಿರುಳು ದುಡಿದ ಕಾರ್ಯಕರ್ತರಿಗೆ ಈ ಅಭಿನಂದನೆ ಸಮರ್ಪಣೆ.ನಿಮ್ಮ ಶ್ರಮದ ಫಲವೇ ಈ ಅದ್ಭುತ ಜಯ ಎಂದು ಅವರು ಹೇಳಿದರು.
ಇನ್ನು ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಬೇಕಿದೆ. ಈ ಭಾಗದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಮುತುವರ್ಜಿ ವಹಿಸುತ್ತೇನೆ.ಹಾಗೂ ಕೇಂದ್ರ ಯೋಜನೆಗಳನ್ನು ಎಲ್ಲರಿಗೂ ತಲುಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮುಂದಿನ 20 ತಿಂಗಳಲ್ಲಿ ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ಹುರುಪನ್ನು ಉಳಿಸಿಕೊಂಡು ಬರಬೇಕು ಎಂದರು.

ಈ ಸಂದರ್ಭ ಪಡುಬಿದ್ರಿ, ಹೆಜಮಾಡಿ, ಪಲಿಮಾರು ಮತ್ತು ಎರ್ಮಾಳು ಗ್ರಾಮಗಳನ್ನೊಳಗೊಂಡ ಪಡುಬಿದ್ರಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಸತತ ಎರಡನೇ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಅತ್ಯಧಿಕ ಮತಗಳಿಂದ ಆಯ್ಕೆಯಾದ ಶೋಭಾ ಕರಂದ್ಲಾಜೆಯವರನ್ನು ಸನ್ಮಾನಿಸಲಾಯಿತು.ಬಳಿಕ ವಿವಿಧ ಸಂಘ ಸಂಸ್ಥೇಗಳು, ಸ್ಥಾನೀಯ ಸಮಿತಿಗಳ ವತಿಯಿಂದ ಸಂಸದೆಯವರನ್ನು ಅಭಿನಂದಿಸಲಾಯಿತು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ,ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ ಮತ್ತು ರಮಾಕಾಂತ್ ದೇವಾಡಿಗ, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ತಾಪಂ ಸದಸ್ಯರಾದ ನೀತಾ ಗುರುರಾಜ್ ಮತ್ತು ಕೇಶವ ಮೊೈಲಿ, ಗ್ರಾಮ ಸಮಿತಿಯ ಅಧ್ಯಕ್ಷರುಗಳಾದ ಬಾಲಕೃಷ್ಣ ದೇವಾಡಿಗ ಪಡುಬಿದ್ರಿ, ಪಾಂಡುರಂಗ ಕರ್ಕೇರ ಹೆಜಮಾಡಿ, ಪ್ರಸಾದ್ ಪಲಿಮಾರು ಮತ್ತು ವಿನಯ ಶೆಟ್ಟಿ ಎರ್ಮಾಳು ವೇದಿಕೆಯಲ್ಲಿದ್ದರು.

ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಸ್ವಾಗತಿಸಿದರು.ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಪ್ರಾಸ್ತಾವಿಸಿ, ಹೆಜಮಾಡಿ ಬಂದರು ಯೋಜನೆ, ಸಿಆರ್‍ಝಡ್ ನಿಯಮ ಸಡಿಲಿಕೆ,ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಜಾರಿ ಮತ್ತು ಪಲಿಮಾರು ಸೇತುವೆಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವಂತೆ ಸಂಸದೆಗೆ ಮನವಿ ಮಾಡಿದರು.

ವೈ.ರಾಮಕೃಷ್ಣ ರಾವ್ ಕಾರ್ಯಕ್ರಮ ನಿರ್ವಹಿಸಿದರು.