ಪಡುಬಿದ್ರಿ:ಟೋಲ್ ವಿನಾಯಿತಿ ಹೋರಾಟ ಕೈಬಿಟ್ಟ ಕರವೇ

ಪಡುಬಿದ್ರಿ: ಉಡುಪಿ ಜಿಲ್ಲಾಧಿಕಾರಿಯವರ ಮನವಿಗೆ ಸ್ಪಂದಿಸಿ ಈಗಾಗಲೇ ಪಡುಬಿದ್ರಿಯ ವಾಹನ ಬಳಕೆದಾರರಿಗೆ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ನೀಡುತ್ತಿರುವ ಸುಂಕ ವಿನಾಯಿತಿಯನ್ನು ತಮ್ಮ ಹೋರಾಟಕ್ಕೆ ಸಂದ ಜಯವೆಂದಿರುವ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಹಾಗೂ ಪಡುಬಿದ್ರಿಯ ನಾಗರಿಕ ಹೋರಾಟ ಸಮಿತಿಯು ಪಡುಬಿದ್ರಿಯಲ್ಲಿ ಕಳೆದ 32ದಿನಗಳಿಂದ ನಡೆಸುತ್ತಿರುವ ಟೋಲ್ ವಿರೋಧೀ ಹೋರಾಟವನ್ನು ಗುರುವಾರ ರಾತ್ರಿ ಕೈಬಿಟ್ಟಿದೆ.

ಕಾಪು ಪ್ರಭಾರ ಹಾಗೂ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಾಪು ಕಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್ ಮತ್ತು ನವಯುಗ ಟೋಲ್‍ಪ್ಲಾಝಾಗಳ ಪ್ರಬಂಧಕ ಶಿವಪ್ರಸಾದ್ ರೈ ಅವರ ಸಮ್ಮುಖ ಪ್ರತಿಭಟನೆಯ ಮುಖಂಡರು ಪ್ರತಿಭಟನೆಯನ್ನು ಕೈಬಿಡುವ ನಿರ್ಧಾರ ಪ್ರಕಟಿಸಿದರು.

ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಹಾಗೂ ಪಡುಬಿದ್ರಿ ನಾಗರಿಕ ಸಮಿತಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ತಾವು ಇಂದು ಜಿಲ್ಲಾಡಳಿತ ಹಾಗೂ ಸಂಸದರ ವಿರುದ್ಧ ಆಸೀಫ್ ಆಪದ್ಬಾಂಧವ ಅವರು ಸ್ವಯಂ ಕೆಸರೆರಚಿಕೊಂಡು ಅರೆಬೆತ್ತಲೆಯಾಗಿ ಹೋರಾಟವನ್ನು ನಡೆಸಿದ್ದರು. ಮುಂದೆಯೂ ಉಗ್ರ ಹೋರಾಟದ ಯೋಜನೆಗಳೂ ನಮ್ಮಲ್ಲಿದ್ದವು. ಆದರೆ ಜಿಲ್ಲಾಡಳಿತದ ಮನವಿ ಮೇರೆಗೆ ಇಂದು ಪ್ರತಿಭಟನೆಯನ್ನು ನಿಲ್ಲಿಸಿದ್ದೇವೆ. ಈಗಾಗಲೇ ಕಾಮಗಾರಿಯೂ ಒಂದಿಷ್ಟು ವೇಗವನ್ನು ಪಡೆದಿದೆ.ಆದರೆ ಒಂದು ವೇಳೆ ನವಯುಗ ಕಂಪೆನಿಯು ಮತ್ತೆ ಟೋಲ್ ವಿನಾಯಿತಿಯನ್ನು ಪಡುಬಿದ್ರಿಯ ಕಾಮಗಾರಿಗಳು ನೂರಕ್ಕೆ ನೂರು ಪೂರ್ಣಗೊಳ್ಳದೇ ಹಿಂತೆಗೆದುಕೊಂಡಲ್ಲಿ ಉಗ್ರ ಹೋರಾಟವನ್ನು ಯಥಾಪ್ರಕಾರ ಮುಂದುವರಿಸಲಿರುವುದಾಗಿಯೂ ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ.

ಈ ಸಂದರ್ಭ ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಕರವೇ ಕಾಪು ಘಟಕಾಧ್ಯಕ್ಷ ಸೈಯದ್ ನಿಝಾಮ್, ದಸಂಸ ನಾಯಕ ಲೋಕೇಶ್ ಕಂಚಿನಡ್ಕ, ಗ್ರಾಪಂ ಸದಸ್ಯರಾದ ನವೀನ್ ಎನ್.ಶೆಟ್ಟಿ, ಹಸನ್ ಬಾವ,ಬುಡಾನ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.