ಪಡುಬಿದ್ರಿ:ಕಾಮಿನಿ ಹೊಳೆಯ ತಡೆಗೋಡೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

ಪಡುಬಿದ್ರಿ: ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಗಾಗಿ ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಕಾಮಿನಿ ನದಿ ದಂಡೆಗೆ ನಿರ್ಮಿಸಲಿರುವ ತಡೆಗೋಡೆ ಕಾಮಗಾರಿಗೆ ಶಾಸಕ ಲಾಲಾಜಿ ಆರ್.ಮೆಂಡನ್ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

ಸುಮಾರು 500 ಮೀಟರ್ ಸರಕಾರಿ ಜಮೀನಿನಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನವಾಗಲಿರುವ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಗೆ ಅನುಕೂಲವಾಗುವಂತೆ 50 ಲಕ್ಷ ರೂ ವೆಚ್ಚದಲ್ಲಿ 300 ಮೀಟರ್ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆ ತಡೆಗೋಡೆ ಕಾಮಗಾರಿ ಕೈಗೆತ್ತಿಕೊಳ್ಳಲಿದೆ.

ಸಣ್ಣ ನೀರಾವರಿ ಇಲಾಖೆಯು ಈಗಿರುವ ಅರ್ಧ ಚಂದ್ರಾಕೃತಿ ವ್ಯಾಪ್ತಿಗೆ ಮಾತ್ರ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಿದ್ದು, ಇದರಿಂದ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಗೆ ಸ್ಥಳಾವಕಾಶದ ಕೊರತೆಯಾಗಲಿದೆ. ಆದ್ದರಿಂದ ಈಗ ಸಿದ್ದಪಡಿಸಿದ ಯೋಜನೆಗೆ ಬದಲಾಗಿ ಸಮಾನಾಂತರವಾಗಿ ನದಿ ಪಾತ್ರಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಯ ಗುತ್ತಿಗೆದಾರರು ಹಾಗೂ ಸ್ಥಳೀಯರು ಶಾಸಕರನ್ನು ಆಗ್ರಹಿಸಿದರು.

ಇಲಾಖೆ ಹಾಗೂ ಗುತ್ತಿಗೆದಾರ ಕಂಪೆನಿ ಪರಾಮರ್ಶಿಸಿ ಹೊಂದಾಣಿಕೆಯಿಂದ ಕಾಮಗಾರಿ ನಡೆಸುವಂತೆ ಶಾಸಕರು ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಸದಸ್ಯರಾದ ಸೇವಂತಿ ಸದಾಶಿವ್, ಶಶಿಕಲಾ, ಅಶೋಕ್ ಸಾಲ್ಯಾನ್, ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮಾಕಾಂತ ದೇವಾಡಿಗ, ಶರತ್ ಶರ್ಮ, ಗಣೇಶ್ ಕೋಟ್ಯಾನ್, ಅಶೋಕ್, ಗುರ್‍ಗಾಂವ್‍ನ ಎ ಟು ಝಡ್ ಇನ್‍ಫ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ವಿಜಯ ಶೆಟ್ಟಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ಕೃಷ್ಣಪ್ರಸಾದ್, ಚಿರಂಜಿತ್ ಉಪಸ್ಥಿತರಿದ್ದರು.