ಪಡುಪಣಂಬೂರು ಬಳಿ ಪ್ರಪಾತಕ್ಕಿಳಿದ ಬಸ್ಸು: 54 ಪ್ರಯಾಣಿಕರು ಪಾರು

ಮೂಲ್ಕಿ: ಸಮೀಪದ ಪಡುಪಣಂಬೂರು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವಿಸ್ ಬಸ್ಸೊಂದು ಚಾಲಕನ ನಿಯತ್ರಣ ತಪ್ಪಿ ವಿರುದ್ದ ದಿಕ್ಕಿಗೆ ಚಲಿಸಿ ರಸ್ತೆ ಬದಿಯ ಪ್ರಪಾತಕ್ಕೆ ಇಳಿದ ಘಟನೆ ಶುಕ್ರವಾರ ನಡೆದಿದ್ದು,ಬಸ್ಸಲ್ಲಿದ್ದ 54 ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಪಣಂಬೂರು ಇಳಿಜಾರು ಸೇತುವೆ ಬಳಿ ಮೂಲ್ಕಿಯಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಸರ್ವಿಸ್ ಬಸ್ಸು ವೇಗವಾಗಿ ಬಂದ ಕಾರಣ ಸೇತುವೆ ಹಂಪಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿತ್ತು.ಅಲ್ಲಿಂದ ಮುಂದಕ್ಕೆ ಚಲಿಸಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಕಡೆಗೆ ಚಲಿಸಿ ರಸ್ತೆಯ ಎಡಬದಿಯಲ್ಲಿದ್ದ ಆಳವಾದ ಪ್ರಪಾತಕ್ಕೆ ಇಳಿದಿದೆ.ಹೆದ್ದಾರಿಯ ರಸ್ತೆಯ ಅಂಚಿನಲ್ಲಿ ಕಬ್ಬಿಣದ ಗಾರ್ಡ್ ಇದ್ದ ಕಾರಣ ಬಸ್ಸಿನ ಚಕ್ರ ಗಾರ್ಡ್‍ಗೆ ಸಿಲುಕಿ ನಿಂತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.ಇಲ್ಲದಿದ್ದಲ್ಲಿ ಆಳವಾದ ಜಾಗದಲ್ಲಿ ಬಿದ್ದು ಹೆಚ್ಚಿನ ಅನಾಹುತವಾಗುವ ಸಂಭವವಿತ್ತು.

ಅಪಘಾತದಿಂದ ಸುಮಾರು ಅರ್ಧ ಗಂಟೆ ಸಂಚಾರ ವ್ಯತ್ಯಯವಾಗಿದ್ದು ಮಂಗಳೂರು ಉತ್ತರ ಸಂಚಾರಿ ಪೆÇಲೀಸರು ಮತ್ತು ಮೂಲ್ಕಿ ಪೆÇಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಬಸ್ಸನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.ಅಪಘಾತದಿಂದ ಬಸ್ಸಿನಲ್ಲಿದ್ದವರು ಗಾಬರಿಗೊಂಡಿದ್ದು ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹೆಚ್ಚಿನ ಹಾನಿಯಾಗಿಲ್ಲ.