ಪಂಚಾಯಿತಿ ರಾಜ್ ಕಾನೂನಿನಲ್ಲಿ ಜಮಾ ಬಂದಿಗೂ ಉನ್ನತ ಸ್ಥಾನಮಾನವಿದೆ-ಹರಿಕೃಷ್ಣ ಶಿವತ್ತಾಯ

ಪಡುಬಿದ್ರಿ: ಪಂಚಾಯಿತಿ ರಾಜ್ ಕಾನೂನಲ್ಲಿ ಜಮಾ ಬಂದಿಗೂ ಉನ್ನತ ಸ್ಥಾನಮಾನವಿದೆ. ಪಾರದರ್ಶಕವಾಗಿ ಪಂಚಾಯಿತಿಯ ಎಲ್ಲಾ ಲೆಕ್ಕಾಚಾರಗಳನ್ನು ಗ್ರಾಮಸ್ಥರ ಮುಂದಿರಿಸಿ, ಎಲ್ಲಾ ಕಾಮಗಾರಿಗಳ ಲೆಕ್ಕಗಳನ್ನೂ, ಕಾಮಗಾರಿಗಳನ್ನೂ ಪರಿಶೀಲನೆಗೊಳಪಡಿಸಿ ಗ್ರಾಮಾಭಿವೃದ್ಧಿಗೆ ಸಹಕರಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಗ್ರಾಮಸ್ಥರೂ ಇದರಲ್ಲಿ ಜವಾಬ್ದಾರಿ ಅರಿತು ಭಾಗವಹಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಸಲಹೆ ನೀಡಿದರು.
ಪಡುಬಿದ್ರಿ ಗ್ರಾಪಂ ಸಭಾಂಗಣದಲ್ಲಿ ಗ್ರಾಪಂ ಜಮಾ ಬಂದಿ ಕಾರ್ಯಕ್ರಮದಲ್ಲಿ ಹರಿಕೃಷ್ಣ ಶಿವತ್ತಾಯ ಮಾತನಾಡಿದರು.
ಅರ್ಹತೆಗೆ ತಕ್ಕಂತೆ ಗ್ರಾಪಂನಲ್ಲಿ ಸಿಬ್ಬಂದಿ ನೇಮಕವಾಗಬೇಕು. ಪಾರದರ್ಶಕವೆನ್ನುವುದಷ್ಟೇ ವಿನಹ ಆಡಳಿತದಲ್ಲಿ ಎಲ್ಲವೂ ಕಾನೂನಿನ ಚೌಕಟ್ಟನ್ನೂ ಮೀರಿ ನಡೆಸಲಾಗುತ್ತಿದೆ. ಬಾಡಿಗೆ ಅಂಗಡಿಗಳನ್ನು ವಹಿಸಿಕೊಂಡು ಬಾಕಿ ಇರಿಸಿ ಪಂಚಾಯಿತಿ ವ್ಯಾಪ್ತಿಯಲ್ಲೇ ಇರದವರೂ ಇದ್ದಾರೆ. ತೆರಿಗೆಯನ್ನು ಪಂಚಾಯಿತಿ ಕಾನೂನು ಮೀರಿ ವಿಧಿಸುತ್ತಿದ್ದು ಗ್ರಾಮಸ್ಥರು ತಮ್ಮ `ಕರ’ ಬದುಕಿನಿಂದ ರೋಸಿಹೋಗಿದ್ದಾರೆ ಎಂದು ಗ್ರಾಮಸ್ಥರ ಪರವಾಗಿ ಭಾಸ್ಕರ ಪಡುಬಿದ್ರಿ ಹೇಳಿದರು.

ಇಲ್ಲಿನ ಗ್ರಾಪಂನಲ್ಲಿ ಚಾಲ್ತಿ ಅಂಗಡಿ ಬಾಡಿಗೆ ಬಾಕಿ ವಸೂಲಿಗೆ ಜನಪ್ರತಿನಿಧಿಗಳೇ ಅಡ್ಡಿಯಾಗುತ್ತಿದ್ದಾರೆ ಎಂದು ಗ್ರಾಪಂನ ಜಮಾ ಬಂದಿಯ ವೇಳೆ ಗ್ರಾಮಸ್ಥರು ಗಮನ ಸೆಳೆದರು.  ಹಿಂದೆ ಮಾಸಿಕ 2,000-2,500ರೂ.ಗಳಿಷ್ಟಿದ್ದ ಬಾಡಿಗೆಯನ್ನು 20,100ಕ್ಕೂ ಮೇಲ್ಪಟ್ಟು ಏಲಂ ಮೂಲಕ ಮಾರ್ಕೆಟ್ ಪ್ರದೇಶದ ಬಾಡಿಗೆದಾರರು ವಹಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಈಗ ಕಳೆದ ಆರು ತಿಂಗಳಿಂದ ಬಾಡಿಗೆಯನ್ನೇ ಪಾವತಿಸದೇ ವ್ಯವಹಾರ ಮುಂದುವರಿಸಿದ್ದಾರೆ. ಇವರಿಗೆ ಪಂಚಾಯಿತಿಯಿಂದ ಮೂರು ನೋಟಿಸ್‍ಗಳನ್ನು ಜಾರಿಗೊಳಿಸಲಾಗಿದೆ. ಬಾಡಿಗೆಯ ಆರು ತಿಂಗಳ ಮುಂಗಡವನ್ನು ಠೇವಣಿಯಾಗಿರಿಸಿರುವ ಅವರ ಆರು ತಿಂಗಳ ಅವಧಿ ಈ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. ಆದುದರಿಂದ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಪಂಗೆ 2016-17ರ ಸಾಲಿನಲ್ಲಿ ಅಂಗಡಿಗಳ ಬಾಡಿಗೆ 5,67,830 ರೂ. ಬಾಕಿ ಹಾಗೂ 2017-18 ರ ಸಾಲಿನಲ್ಲಿ 18,14,460 ಸೇರಿ 23,82,290 ರೂ. ವಸೂಲಿಯಾಗಬೇಕಿತ್ತು. ಅದರಲ್ಲಿ 18,29,140 ಸಂಗ್ರಹವಾಗಿದ್ದು, ಇನ್ನೂ 3,48,550 ರೂಪಾಯಿ ಬಾಕಿಯಿದೆ ಎಂದು ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ತಿಳಿಸಿದರು.
ಗ್ರಾಪಂ ಅಂಗಡಿ ಬಾಡಿಗೆ ಬಾಕಿ ಇರಿಸಿದ ಕೆಲ ವ್ಯಕ್ತಿಗಳು ನಾಪತ್ತೆಯಾಗಿದ್ದು, ಅವರು ನೀಡಿರುವ ವಿಳಾಸವೂ ಇಲ್ಲವಾಗಿದೆ. ಉದ್ಯಮ ಪರವಾನಿಗೆಯಲ್ಲಿಯೂ ಹಿಂದಿನ ಬಾಕಿ 91,571 ರೂ. ಸೇರಿ 3,32,271 ರೂ. ಸಂಗ್ರಹವಾಗಬೇಕಿತ್ತು. ಅದರಲ್ಲಿ 2,60,709 ಪಾವತಿಯಾಗಿ71, 562 ಬಾಕಿ ಬರಬೇಕಿದೆ ಎಂದು ವಿವರಿಸಿದರು.

ವಿವಿಧ ಮೂಲಗಳ ಅನುದಾನ ಕ್ರೋಢಿಕರಣ ಸೇರಿ ಎರಡು ಕೋಟಿ ರೂಪಾಯಿಗಳ ಬಜೆಟ್ ಗಾತ್ರ ಪಡುಬಿದ್ರಿ ಗ್ರಾಪಂ ಹೊಂದಿದೆ. ನವೆಂಬರ್‍ನಲ್ಲಿ ಬಜೆಟ್ ಮಂಡನೆಯಾಗಬೇಕು. ಡಿಸೆಂಬರ್ ಅಂತ್ಯದೊಳಗೆ ತೆರಿಗೆ ಸಂಗ್ರಹ ಪೂರ್ಣಗೊಳ್ಳಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ 800 ಅರ್ಜಿಗಳು ಬಂದಿದ್ದು, ಜಮೀನಿನ ಅಲಭ್ಯತೆಯಿಂದ ನಿವೇಶನ ನೀಡಲು ತೊಡಕಾಗಿದೆ. ನಿವೇಶನ ಹಾಗೂ ವಸತಿ ರಹಿತರ ಪಟ್ಟಿಯನ್ನು ಪರಿಷ್ಕರಿಸಿ ಬಿಟ್ಟು ಹೋಗಿರುವವರ ಪಟ್ಟಿಯನ್ನು ಸಿದ್ದಪಡಿಸಿ. ಗ್ರಾಪಂಗೆ ಬಾಡಿಗೆ ಬಾಕಿಯಿರಿಸಿರುವ ಅಂಗಡಿಗಳಿಗೆ ನೋಟಿಸ್ ನೀಡಿ, ಪಾವತಿ ಮಾಡದಿದ್ದಲ್ಲಿ ಪುನರ್ ಏಲಂ ಮಾಡಿ ಎಂದು ಪಿಡಿಒ ಅವರಿಗೆ ನಿರ್ದೇಶನ ನೀಡಿದರು.
ಜನಪ್ರತಿನಿಧಿಗಳು ಬರುತ್ತಾರೆ, ಹೋಗುತ್ತಾರೆ. ಅಧಿಕಾರಿಗಳು ಪಂಚಾಯಿತಿಯ ಎಲ್ಲಾ ಖರ್ಚು ವೆಚ್ಚಗಳಿಗೆ ಜವಾಬ್ದಾರರಾಗಿರುತ್ತಾರೆ. ಜನಪ್ರತಿನಿಧಿಗಳೂ ಇದನ್ನು ಅರಿತಿರಬೇಕಾಗುತ್ತದೆ. ತ್ಯಾಜ್ಯ ವಿಲೇವಾರಿಗೆ ಮನೆ, ಮನೆಗಳಲ್ಲಿಯೇ ಪರಿಹಾರಗಳನ್ನು ಮೂಲದಲ್ಲೇ ಕಂಡುಕೊಳ್ಳಬೇಕಾಗುತ್ತದೆ ಎಂದು ಅಧ್ಯಕ್ಷತೆರ ವಹಿಸಿದ್ದ ಗ್ರಾಪಂ ಉಪಾಧ್ಯಕ್ಷ ವೈ. ಸುಕುಮಾರ್ ಹೇಳಿದರು.

ತೆಂಕ ಗ್ರಾಪಂ ಕಾರ್ಯದರ್ಶಿ ವಸಂತಿ ಬಾಯಿ ಹಾಗೂ ತಾಪಂ ಗುಮಾಸ್ತ ವಿನಾಯಕ್ ಜಮಾಬಂದಿ ಸಹಾಯಕರಾಗಿ ಪಾಲ್ಗೊಂಡಿದ್ದರು.