ನಿಧನ: ವೇದಮೂರ್ತಿ ಮೂಲ್ಕಿ ಭಾಸ್ಕರ ಭಟ್ (Vedamoorthy Mulki Bhaskara Bhat)

ಮೂಲ್ಕಿ: ಹಿರಿಯ ವೈದಿಕ ಮೂಲ್ಕಿ ಸಂಪಿಗೆ ಮನೆ ವೇದಮೂರ್ತಿ ಭಾಸ್ಕರ ಭಟ್(89) ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಶುಕ್ರವಾರ ನಿಧನರಾದರು.

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕರಾಗಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಭಾಸ್ಕರ ಭಟ್‍ರವರು ತಮ್ಮ ವೈದಿಕ ಶಿಕ್ಷಣವನ್ನು ಮಂಗಳೂರಿನ ನಿಗಮಾಗಮ ಪಾಠ ಶಾಲೆಯಲ್ಲಿ ಮುಗಿಸುವ ಸಂದರ್ಭ ಅಂದಿನ ಕಾಶೀ ಮಠದ ಹಿರಿಯ ಯತಿಗಳಾದ ಶ್ರೀ ಸುಕೃತೀಂದ್ರ ಸ್ವಾಮೀಜಿಯವರ ಆತ್ಮೀಯ ಅನುಜ್ಷೆಯ ಮೇರೆಗೆ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕರಾಗಿ ದೇವತಾ ಸೇವೆಯನ್ನು ಆರಂಭಿಸಿದರು. ಬಳಿಕ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆತ್ಮೀಯ ಬಳಗದಲ್ಲಿ ಒಬ್ಬರಾಗಿ ಸುಧೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ದೀಕ್ಷಾ ಸ್ವೀಕಾರದ 75ನೇ ವರ್ಷಾರಣೆ ನಡೆಸುವ ಸಂದರ್ಭವೂ ಭಾಸ್ಕರ ಭಟ್‍ರವರು ಸಮಾರಂಭದಲ್ಲಿ ಭಾಗಿಗಳಾಗಿದ್ದರು.

ಶಿಸ್ತು ಸಂಯಮದ ವ್ಯಕ್ತಿತ್ವದ ಬಡವ ಬಲ್ಲಿದರೆನ್ನದೆ ಎಲ್ಲರೊಡನೆಯೂ ಆತ್ಮೀಯವಾಗಿ ಬೆರೆಯುವ ಭಾಸ್ಕರ ಭಟ್ ಜನ ಸಾಮಾನ್ಯರಿಗೆ ದೇವಾತಾ ಸ್ವರೂಪಿಯಾಗಿದ್ದರು. ಸುಮಾರು 50 ವರ್ಷಗಳ ಕಾಲ ಮೂಲ್ಕಿ ವೆಂಕಟರಮಣ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಿ ಪ್ರತಿಷ್ಠಾ ಪೂರ್ಣಿಮೆಯಂದು ಶ್ರೀ ದೇವರಿಗೆ ಅಭಿಷೇಕ ಮಾಡುವ ಭಾಗ್ಯ ಗಳಿಸಿಕೊಂಡಿದ್ದರು.ಅವರ ಪರ್ಯಾಯದ ಸಂದರ್ಭ ಬಡ ವಿದ್ಯಾರ್ಥಿಗಳಿಗೆ ಅನ್ನ ದಾನ ಮುಂತಾದ ಸಮಾಜ ಸೇವಾ ಕಾರ್ಯಗಳನ್ನು ಕೈಗೊಂಡಿದ್ದ ಮಹಾನ್ ವ್ಯಕ್ತಿಯಾಗಿದ್ದರು.

ಅವರಿಗೆ ಐವರು ಪುತ್ರಿಯರು ಮತ್ತು ಮೂರು ಪುತ್ರರು ಇದ್ದಾರೆ.