ನಿಧನ: ಡಾ| ಕೆ. ಪಿ. ಮಧ್ಯಸ್ಥ (Dr KP Madhyastha)

ಮುಲ್ಕಿ ವಿಜಯ ಕಾಲೇಜಿನ ಸ್ಥಾಪಕ ಟ್ರಸ್ಟಿ ಹಾಗೂ ಉಡುಪಿ ಕೋ-ಅಪರೇಟಿವ್ ಟೌನ್ ಬ್ಯಾಂಕಿನ ನಿರ್ದೇಶಕರಾದ ಡಾ| ಕೆ. ಪಿ. ಮದ್ಯಸ್ಥರು ದಿನಾಂಕ 10-08-2019ರಂದು ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲದಲ್ಲಿ ನಿಧನರಾದರು. ಇವರಿಗೆ 91 ವರ್ಷ ಪ್ರಾಯವಾಗಿತ್ತು. ಮೂಲತ: ಉಡುಪಿಯವರಾದ ಇವರು ತಮ್ಮ ಎಲ್.ಐ.ಎಂ. ಪದವಿಯನ್ನು ಮದ್ರಾಸಿನಲ್ಲಿ ಪಡೆದ ನಂತರ 1953ರಲ್ಲಿ ಮುಲ್ಕಿಯಲ್ಲಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದರು. ಮುಲ್ಕಿಯಲ್ಲಿ ತುಂಬ ಜನಪ್ರಿಯ ವೈದ್ಯರಾದ ಇವರು 1970ರಲ್ಲಿ ಅಮೇರಿಕಕ್ಕೆ ತೆರಳಿ ನಾಲ್ಕು ತಿಂಗಳು ಸೈಂಟ್ ಲೂಯಿಸ್ ಮಕ್ಕಳ ಅಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿ ಬದಲಾಗುತ್ತಿರುವ ಆಧುನಿಕ ಔಷಧಿ ಹಾಗೂ ಚಿಕಿತ್ಸಾ ವಿಧಾನದ ಬಗ್ಗೆ ವಿಶೇಷ ಪರಿಣತಿಯನ್ನು ಗಳಿಸಿರುತ್ತಾರೆ. ಮುಲ್ಕಿ ವಿಜಯ ಕಾಲೇಜು ಸ್ಥಾಪನೆಯಲ್ಲಿ ಇವರ ಸಹಭಾಗಿತ್ವ ಅಪೂರ್ವವಾದದ್ದು. ಕಾಲೇಜಿನ ಅಡ್-ಹಾಕ್ ಕಮಿಟಿಯ ಸದಸ್ಯರಾಗಿ ಹಾಗೂ ವಿಜಯ ಕಾಲೇಜು ಟ್ರಸ್ಟಿನ ಸ್ಥಾಪಕ ಸದಸ್ಯರಾಗಿ ಕಾಲೇಜಿನ ಶ್ರೇಯೋಬಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ ಇವರ ಕಾರ್ಯ ಶ್ಲಾಘನೀಯವಾದುದು. ಇವರು ಕಾಲೇಜಿನ ಮೆಡಿಕಲ್ ಆಫೀಸರ್ ಆಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುತ್ತಾರೆ. ಮುಲ್ಕಿ ಆಸ್ಪತ್ರೆಯ ಬಡ ರೋಗಿಗಳ ಫಂಡ್, ಯೂನಿಯನ್ ಕ್ಲಬ್, ಬಪ್ಪನಾಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಕೂಡಾ ಸೇವೆ ಸಲ್ಲಿಸಿರುತ್ತಾರೆ. ಮುಲ್ಕಿ ಲಯನ್ಸ್ ಕ್ಲಬ್ಬಿನ ಚಾರ್ಟರ್ ಮೆಂಬರ್ ಆದ ಇವರು ನಂತರ ನಿರ್ದೇಶಕರಾಗಿದ್ದರು. ಲಯನ್ಸ್ ಕ್ಲಬ್ ವತಿಯಿಂದ ಆಗ ಪ್ರತಿ ವರ್ಷ ನಡೆಸಲ್ಪಡುತ್ತಿದ್ದ ಡಾ| ಎಂ. ಸಿ. ಮೋದಿಯವರ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಡಾ| ಕೆ. ಪಿ. ಮಧ್ಯಸ್ಥರ ಸೇವೆ ಉಲ್ಲೇಖನೀಯ. ಇವರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.