ನಿಧನ: ಕಂಬಳ ಕ್ಷೇತ್ರದ ಮಹಾನ್ ಸಾಧಕ ವಿನು ವಿಶ್ವನಾಥ ಶೆಟ್ಟಿ ಮೂಡುಬಿದಿರೆ ಕರಿಂಜೆ

ಪಡುಬಿದ್ರಿ: ಕಂಬಳ ಕ್ಷೇತ್ರದ ಮಹಾನ್ ಸಾಧಕ, ಸಮಾಜ ಸೇವೆಯನ್ನು ತೆರೆಮರೆಯಲ್ಲಿದ್ದುಕೊಂಡೇ ಗೈಯ್ಯತ್ತಿದ್ದ ಅಪ್ರತಿಮ ಸಮಾಜ ಸುಧಾರಕ, ಪ್ರಾಣಿ ಪ್ರೇಮಿ ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ(52) ಭಾನುವಾರದ ಬಂಟ್ವಾಳ ಹೊಕ್ಕಾಡಿ ಗೋಳಿ ಕಂಬಳದಿಂದ ವಾಪಾಸಾಗುವ ವೇಳೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

15ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಇವರು ದೆಹಲಿಯ ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು. ಮೂಲತಃ ಮೂಡುಬಿದಿರೆಯವರಾದ ಇವರು ಕಾಪು ಹಾಗೂ ಪಡುಬಿದ್ರಿಯ ಪಾದೆಬೆಟ್ಟಿನಲ್ಲಿ ವಾಸವಾಗಿದ್ದರು.

ಪಾದೆಬೆಟ್ಟಿನಲ್ಲಿ ಕೋಣಗಳಿಗೆಂದೇ ಸ್ವಿಮ್ಮಿಂಗ್ ಪೂಲ್, ಅವುಗಳ ವಿಶ್ರಾಂತಿಗಾಗಿ ಹವಾನಿಯಂತ್ರಿತ ಕೊಠಡಿಯಲ್ಲಿ ಫ್ಯಾನ್ ಹಾಗೂ ಸಂಗೀತ ವ್ಯವಸ್ಥೆಯನ್ನೂ ಇವರು ಅಳವಡಿಸಿದ್ದರು.

ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಇವರು ಕೊಡುಗೈ ದಾನಿಯಾಗಿದ್ದರು . ಕಷ್ಟದಲ್ಲಿ ಮದುವೆಯಾಗುವ ಹೆಣ್ಮಕ್ಕಳಿಗೆ ತಾಳಿಯನ್ನೂ ಇವರು ನೀಡುತ್ತಿದ್ದರು. ಈ ಬಾರಿಯ ಕಂಬಳ ಸೀಸನ್‍ನಲ್ಲಿನ ನಾಲ್ಕು ಕಂಬಳಗಳಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಇವರ ಕೋಣಗಳು 3 ಪ್ರಥಮ ಹಾಗೂ ಒಂದು ದ್ವಿತೀಯ ಬಹುಮಾನವನ್ನು ಗಳಿಸಿದ್ದವು. ಹೊಕ್ಕಾಡಿಗೋಳಿ ಕಂಬಳದಲ್ಲೂ ಪ್ರಥಮ ಬಹುಮಾನವನ್ನು ಗಳಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲೇ ಹೃದಯಾಘಾತವಾಗಿದ್ದು ಹತ್ತಿರದ ಆಸ್ಪತ್ರೆಗೆ ಒಯ್ದರೂ ಆ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಕಂಬಳ ಕ್ಷೇತ್ರಕ್ಕಾಗಿ ಈಚೆಗಿನ ನ್ಯಾಯಾಲಯದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದು ಸಣ್ಣ ಮಟ್ಟಿನ ಕಂಬಳವಾಗಲೀ, ದೊಡ್ಡ ವ್ಯವಸ್ಥಾಪನದ ಕಂಬಳವಾಗಲೀ ಇವರು ಅದೆಲ್ಲಿಗಾದರೂ ತಮ್ಮ ಕೋಣಗಳನ್ನು ಒಯ್ಯುತ್ತಿದ್ದರು. ಹಗ್ಗ ಕಿರಿಯ ವಿಭಾಗದಲ್ಲೂ ಇವರ ಕೋಣಗಳೇ ಪ್ರಥಮ ಸ್ಥಾನವನ್ನು ಬಾಚಿಕೊಳ್ಳುತ್ತಿದ್ದು ಸದ್ಯ ಹಿರಿಯ ವಿಭಾಗದಲ್ಲೂ ಇದನ್ನು ಮುಂದುವರಿಸಿರುವುದೂ ಒಂದು ದಾಖಲೆ ಎನಿಸಿದೆ. ದುಬೈಯಲ್ಲೂ ಹೊಟೇಲ್ ಉದ್ಯಮವನ್ನು ವಿನು ವಿಶ್ವನಾಥ ಶೆಟ್ಟಿ ಹೊಂದಿದ್ದು ಅವಿಭಜಿತ ಜಿಲ್ಲೆಯಲ್ಲೂ ಉದ್ಯಮಿಯಾಗಿಯೂ ಅವರು ತಮ್ಮ ಛಾಪನ್ನು ಮೂಡಿಸಿದ್ದಾರೆ. ಬಂಟ ಸಮಾಜದ ಅಭ್ಯುದಯಕ್ಕಾಗಿಯೂ ತಮ್ಮ ಕೈಲಾದಷ್ಟು ಸೇವೆಯನ್ನು ಇವರು ನೀಡಿದ್ದಾರೆ.