ನಾಡದೋಣಿ ಮೀನುಗಾರಿಕೆ ಸಂದರ್ಭ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

ಪಡುಬಿದ್ರಿ: ಸಮುದ್ರದಲ್ಲಿ ನಾಡದೋಣಿ ಮೂಲಕ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ದೋಣಿಯಿಂದ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಪಡುಬಿದ್ರಿ ಸಮೀಪ ಸಮುದ್ರದಲ್ಲಿ ನಡೆದಿದೆ.
ಕಾಪು ಪೊಲಿಪು ಕಾತ್ಯಾಯಿನಿ ಮಾಟುಬಲೆ ಫಂಡಿನ ಸದಸ್ಯ, ಮೂಲತಃ ಹೆಜಮಾಡಿ ನಿವಾಸಿಯಾಗಿದ್ದು ಉಳಿಯಾರಗೋಳಿ ಕಾಪುವಿನಲ್ಲಿ ವಾಸವಿದ್ದ ಸಂಜೀವ ಕೋಟ್ಯಾನ್(54) ಮೃತಪಟ್ಟ ದುರ್ದೈವಿ.

ಘಟನೆಯ ವಿವರ: ನಿತ್ಯದಂತೆ ಮಂಗಳವಾರ ಬೆಳಿಗ್ಗೆ ಮಾಟುಬಲೆಗಾಗಿ ಮಲ್ಪೆ ಬಂದರಿನಿಂದ ಹೊರಟಿದ್ದ ಕಾತ್ಯಾಯಿನಿ ಫಂಡ್‍ನ ನಾಡದೋಣಿ ಮೀನಿನ ಸೆಲೆ ಹುಡುಕುತ್ತಾ ಪಡುಬಿದ್ರಿವರೆಗೆ ಬಂದಿದ್ದ ಸಂದರ್ಭ ಮೀನುಗಳ ಹಿಂಡು ಕಂಡು ಅಲ್ಲಿ ಬಲೆ ಹರಡಿದ್ದರು. ಬಲೆ ಹರಡುತ್ತಿದ್ದ ಸಂದರ್ಭ ಬೃಹತ್ ಅಲೆಯೊಂದು ನಾಡದೋಣಿಗೆ ಬಡಿದಿತ್ತು. ಈ ಸಂದರ್ಭ ಸಂಜೀವ ಕೋಟ್ಯಾನ್‍ರವರು ಆಯತಪ್ಪಿ ನೀರಿಗೆ ಎಸೆಯಲ್ಪಟ್ಟಿದ್ದರು. ತಕ್ಷಣ ದೋಣಿ ನಿಲುಗಡೆಗೊಳಿಸಿ ಇತರ ಮೀನುಗಾರರು ನೀರಿಗೆ ಹಾರಿ ಸಂಜೀವ ಕೋಟ್ಯಾನ್‍ರನ್ನು ರಕ್ಷಿಸಿದ್ದರು. ಆದರೆ ಆಗಲೇ ನೀರಿನಲ್ಲಿ ಅವರು ಮೃತಪಟ್ಟಿದ್ದು ಗಮನಕ್ಕೆ ಬಂದಿತ್ತು.

ಬಳಿಕ ಮಲ್ಪೆ ಬಂದರಿಗೆ ಬಂದ ದೋಣಿಯಿಂದ ಸಂಜೀವ ಕೋಟ್ಯಾನ್‍ರ ಶವವನ್ನು ಪೋಸ್ಟ್ ಮಾರ್ಟಮ್‍ಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಪು ಶಾಸಕ ಲಾಲಾಜಿ ಅರ್.ಮೆಂಡನ್, ಮೀನುಗಾರಿಕಾ ಇಲಾಖಾಧಿಕಾರಿಗಳಾದ ಪಾಶ್ರ್ವನಾಥ್ ಮತ್ತು ಕಿರಣ್ ಆಸ್ಪತ್ರೆಗೆ ಆಗಮಿಸಿ ಮಾಹಿತಿ ಪಡೆದರು. ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ವಿಜಯ ಕರ್ಕೇರ ಉಪಸ್ಥಿತರಿದ್ದರು.

ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜೀವ ಕೋಟ್ಯಾನ್‍ರಿಗೆ ಪತ್ನಿ ಇದ್ದಾರೆ. ಶವದ ಮಹಜರು ಬಳಿಕ ಸಂಜೀವ ಕೋಟ್ಯಾನ್‍ರವರ ಅಕ್ಕನ ಮಗ ಮಹೇಶ್ ಕೋಟ್ಯಾನ್‍ರವರಿಗೆ ಶವವನ್ನು ಹಸ್ತಾಂತರಿಸಲಾಯಿತು.