ನಾಗರಿಕ ಸಮಿತಿ ಮೂಲಕ ಟೋಲ್ ವಿರುದ್ಧ ಹೋರಾಟಕ್ಕೆ ಚಾಲನೆ

ಮೂಲ್ಕಿ: ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ರಚಿಸಿ ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿಯ ವಾಹನಗಳಿಗೆ ಟೋಲ್ ವಿನಾಯಿತಿಗೆ ಹೋರಾಟ ನಡೆಸಲು ಮೂಲ್ಕಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಭಾನುವಾರ ಶ್ರೀ ಕ್ಷೇತ್ರ ಬಪ್ಪನಾಡು ದೇವಳದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯಿತಗೆ ಆಗ್ರಹಿಸಿ ಕರೆಯಲಾದ ಸಮಾನಾಸಕ್ತರ ಸಭೆಯಲ್ಲಿ ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ,ಹೆಜಮಾಡಿ ಟೋಲ್‍ಗೆ ಅತೀ ಸನಿಹದಲ್ಲಿರುವ ಮೂಲ್ಕಿ ನಾಗರಿಕರಿಗೆ ಕಡ್ಡಾಯವಾಗಿ ಟೋಲ್ ವಿನಾಯಿತಿ ನೀಡಲೇಬೇಕು.ಇದಕ್ಕಾಗಿ ಮೂಲ್ಕಿ ನಾಗರಿಕರು ಒಗ್ಗಟ್ಟಾಗಿ ಹೋರಾಟ ಕೈಗೊಳ್ಳಬೇಕು.ಈ ಮೂಲಕ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ.

ಅದಕ್ಕಾಗಿ ಬಂದ್ ಸಹಿತ ನಾಗರಿಕರಿಗೆ ತೊಂದರೆಯಾಗುವ ಯಾವುದೇ ಕ್ರಮಕ್ಕೆ ತನ್ನ ಬೆಂಬಲವಿಲ್ಲ.ಟೋಲ್ ವಿನಾಯಿತಿಗೆ ಆಗ್ರಹಿಸುವ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ ಎಂದವರು ಹೇಳಿ,ಪ್ರತಿಭಟನೆಯಿಂದ ಮಾತ್ರ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

ಮಧು ಆಚಾರ್ಯ ಮಾತನಾಡಿ,ಮೂಲ್ಕಿಯ ಜನತೆಗೆ ಟೋಲ್ ವಿನಾಯಿತಿ ಅಗತ್ಯದ್ದು, ಮೂಲ್ಕಿ ಬಂದ್ ಸಹಿತ ಉಗ್ರ ಹೋರಾಟದಿಂದ ಮಾತ್ರ ಟೋಲ್ ವಿನಾಯಿತಿ ದೊರಕಬಹುದು.ಮೂಲ್ಕಿ ವ್ಯಾಪ್ತಿಯ 5 ಕೀಮೀ ಸುತ್ತಲಿನ ವಾಹಗಳಿಗೆ ಟೋಲ್ ವಿನಾಯಿತಿ ನೀಡಲೇಬೇಕಾಗಿದೆ ಎಂದರು. ಗೋಪಿನಾಥ ಪಡಂಗ ಮಾತನಾಡಿ,ಮೂಲ್ಕಿ ಜನತೆಯ ಶಕ್ತಿ ಪ್ರದರ್ಶನದ ಅಗತ್ಯವಿದೆ.ಎಲ್ಲಾ ಪಕ್ಷದವರನ್ನು,ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಹೋರಾಟ ನಡೆಸೋಣ ಎಂದರು.

ಬಾಲಚಂದ್ರ ಸನಿಲ್,ಧನಂಜಯ ಕೋಟ್ಯಾನ್ ಮಟ್ಟು,ಜೀವನ್ ಕೆ.ಶೆಟ್ಟಿ,ಶಾಲೆಟ್ ಪಿಂಟೋ,ಮುನೀರ್ ಕಾರ್ನಾಡು,ಪ್ರಾಣೇಶ್ ಹೆಜ್ಮಾಡಿ,ದಯಾನಂದ ಮಟ್ಟು ತಮ್ಮ ಅಭಿಪ್ರಾಯ ಮಂಡಿಸಿದರು.

ಹರೀಶ್ ಎನ್.ಪುತ್ರನ್ ಮಾತನಾಡಿ,ಟೋಲ್ ಸಮಸ್ಯೆಯೊಂದಿಗೆ ಮೂಲ್ಕಿ ಅತೀ ದೊಡ್ಡ ಸಮಸ್ಯೆಗಳಾದ ಒಳ ಚರಂಡಿ ವ್ಯವಸ್ಥೆ,ಕುಡಿಯುವ ನೀರಿನ ಸಮಸ್ಯೆ,ಅಪೂರ್ಣ ಹೆದ್ದಾರಿ ಕಾಮಗಾರಿ ಮತ್ತು ತಾಲೂಕು ರಚನೆಗಾಗಿ ನಿರ್ಣಾಯಕ ಹೋರಾಟದ ಅಗತ್ಯವಿದ್ದು,ನೂತನ ಸಮಿತಿ ರಚಿಸಿ ಹೋರಾಟ ಹಮ್ಮಿಕೊಳ್ಳೋಣ ಎಂದು ಹೇಳಿದರು.

ನೂತನ ಸಮಿತಿ ಅಸ್ತಿತ್ವಕ್ಕೆ: ಈ ಸಂದರ್ಭ ಮುಂದಿನ ಎಲ್ಲಾ ಹೋರಾಟಕ್ಕೆ ಅನುಗುಣವಾಗಿ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಗೆ ಚಾಲನೆ ನೀಡಲಾಯಿತು.ಹಲವು ಗಣ್ಯರ ಅನುಪಸ್ಥಿತಿಯಿಂದ ಸಮಿತಿಗೆ ಪದಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆಗೆ ಮುಂದೆ ಕರೆಯುವ ಸಭೆಯಲ್ಲಿ ನಿರ್ಧರಿಸಲು ತೀರ್ಮಾನಿಸಲಾಯಿತು.

ಸಮಿತಿಯ ಸದಸ್ಯರನ್ನಾಗಿ ಜನಪ್ರತಿನಿಧಿಗಳು,ಮೂರು ಪ್ರಮುಖ ಪಕ್ಷಗಳ ಅಧ್ಯಕ್ಷರುಗಳು,ಮೂಲ್ಕಿಯ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು,ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರನ್ನು ಆಯ್ಕೆ ಮಾಡಲಾಯಿತು.

ಶಶಿ ಅಮೀನ್,ಡಾ.ಹರಿಶ್ಚಂದ್ರ ಸಾಲ್ಯಾನ್,ಸದಾಶಿವ ಹೊಸದುರ್ಗ,ಅಬ್ದುಲ್ ರಝಾಕ್,ವಸಂತ ಬೆರ್ನಾರ್ಡ್,ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ,ರಂಗನಾಥ ಶೆಟ್ಟಿ,ವೆಂಕಟೇಶ ಹೆಬ್ಬಾರ್,ದಯಾನಂದ್ ಎಮ್.,ಭಾಸ್ಕರ ಶೆಟ್ಟಿಗಾರ್,ಪ್ರಬೋದ್ ಕುಡ್ವ,ಕಿಶೋರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಎನ್.ಪುತ್ರನ್ ಕಾರ್ಯಕ್ರಮ ನಿರ್ವಹಿಸಿದರು.ರವೀಶ್ ಕಾಮತ್ ವಂದಿಸಿದರು.