ನವೋದಯ ಸ್ವಸಹಾಯ ಸಂಘಗಳ ಬ್ಯಾಂಕ್ ಸಾಲಗಳ ಬಡ್ಡಿ ಮನ್ನಾ-ಹರಿನಾಥ್

ಪಡುಬಿದ್ರಿ: ನವೋದಯ ಸ್ವಸಹಾಯ ಸಂಘಗಳು ಸಂಘಸ ಸದಸ್ಯರಿಗಾಗಿ ಪಡೆದ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರವನ್ನು ಮನ್ನಾ ಮಾಡಲಾಗಿದೆ ಎಂದು ನವೋದಯ ಸ್ವಸಹಾಯ ಯೋಜನೆಯ ಜಿಲ್ಲಾ ಮೇಲ್ವಿಚಾರಕ ಹರಿನಾಥ್ ಹೇಳಿದರು.

ಭಾನುವಾರ ಹೆಜಮಾಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಜಮಾಡಿ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಮಹಾಸಭೆ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

2017-18 ಸಾಲಿನ ಸಾಲಗಳ ಶೇ.12 ಬಡ್ಡಿದರದಲ್ಲಿ ರಾಜ್ಯ ಸರಕಾರವು ಶೇ.7 ಮನ್ನಾ ಮಾಡಿದ್ದು, ತಮ್ಮ ಖಾತೆಗೆ ಜಮಾವಣೆಯಾಗಿದೆ. ಉಳಿದ ಶೇ.5ನ್ನು ಕೇಂದ್ರ ಸರಕಾರ ಶೀಘ್ರವೇ ಮನ್ನಾ ಮಾಡಲಿದೆ. ಅದೇ ರೀತಿ 2018-19ನೇ ಸಾಲಿನ ಬಡ್ಡಿದರವೂ ಮನ್ನಾ ಆಗಲಿದೆ ಎಂದ ಅವರು ಯಾವುದೇ ಕಾರಣಕ್ಕೆ ಸಾಲ ಮರುಪಾವತಿ ತಪ್ಪಿಸದಿರಿ. ಕ್ರಮಬದ್ಧವಾಗಿ ಮರುಪಾವತಿಸಿದ ಸಾಲಗಳಿಗೆ ಮಾತ್ರ ಬಡ್ಡಿ ಮನ್ನಾ ಸೌಲಭ್ಯ ಸಿಗಲಿದೆ ಎಂದರು.

ಇದೇ ಸಂದರ್ಭ ನವೋದಯ ಸ್ವ ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಒಕ್ಕೂಟದ 37 ಸಂಘಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ಈ ಬಾರಿ ಶೇ 100 ಹಾಜರಾತಿ ದಾಖಲಿಸಿದ 6 ಸ್ವಸಹಾಯ ಸಂಘಗಳಿಗೆ ಸತ್ಕರಿಸಲಾಯಿತು. ಚೈತನ್ಯ ಬಿಮಾ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ಸಂತೋಷ್ ಬೇಕಲ್ ಮತ್ತು ಶ್ರೇಯಾರವರು ಸಂಘದ ಸದಸ್ಯರಿಗೆ ತರಬೇತಿ ನಡೆಸಿಕೊಟ್ಟರು.

ಹೆಜಮಾಡಿ ವಲಯ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವರ್ಧನ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಹರೀಶ್ ಹೆಜಮಾಡಿ, ಮಾಜಿ ಅಧ್ಯಕ್ಷ ಸದಾಶಿವ ಕೋಟ್ಯಾನ್, ಕಾರ್ಯದರ್ಶಿ ವಿದ್ಯಾ, ಕೋಶಾಧಿಕಾರಿ ಸುಮಿತ್ರಾ, ನವೋದಯ ಸ್ವಸಹಾಯ ಯೋಜನೆಯ ತಾಲೂಕು ಮೇಲ್ವಿಚಾರಕ ಚಂದ್ರಶೇಖರ್, ಪ್ರೇರಕಿ ಶಶಿಕಲಾ ಮುಖ್ಯ ಅತಿಥಿಗಳಾಗಿದ್ದರು.