ನರೇಂದ್ರ ಮೋದಿಯವರು ವಿಶ್ವದ ಪ್ರಭಾವೀ ನಾಯಕ-ಲಾಲಾಜಿ ಆರ್.ಮೆಂಡನ್

ಮೂಲ್ಕಿ: ದೇಶವನ್ನು ವಿಶ್ವ ಭೂಪಟದಲ್ಲಿ ತಲೆ ಎತ್ತುವಂತೆ ಆಡಳಿತ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ವಿಶ್ವವೇ ಮಹಾನಾಯಕನೆಂದು ಒಪ್ಪಿಕೊಂಡಿದೆ.ಇಂದು ಅವರೊಬ್ಬ ವಿಶ್ವದ ಪ್ರಭಾವೀ ನಾಯಕರಾಗಿದ್ದಾರೆ.ದೇಶಕ್ಕೆ ಮುಂದಿನ 10-20 ವರ್ಷ ಅವರ ಸೇವೆ ದೊರೆಯಲೇಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಮೂಲ್ಕಿ-ಒಡೆಯರಬೆಟ್ಟು ಶ್ರೀ ದುರ್ಗಾ ರೆಸಿಡೆನ್ಸಿ ಪ್ರಾಂಗಣದಲ್ಲಿ ಮೂಲ್ಕಿ ನಾಲ್ಕುಪಟ್ಣ ಮೊಗವೀರ ಮಹಾಸಭಾದ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹು ನಿರೀಕ್ಷಿತ ಹೆಜಮಾಡಿ ಬಂದರು ಯೋಜನೆಗೆ ಕೇಂದ್ರದ ಅನುಮೋದನೆ ದೊರಕಿ 13.50ಕೋಟಿ ಅನುದಾನವೂ ಬಿಡುಗಡೆಯಾಗಿದೆ.ರಾಜ್ಯ ಸರಕಾರದ ಬಿಡುಗಡೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜತೆ ಚರ್ಚಿಸಿ ಶೀಘ್ರ ಅನುದಾನ ಬಿಡುಗಡೆಗೆ ಪಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಮೂಲ್ಕಿ-ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ,ಹೆಜಮಾಡಿ ಬಂದರು ಯೋಜನೆ ಜಾರಿಯಿಂದ ಮೂಲ್ಕಿ ಪರಿಸರಕ್ಕೂ ಉಪಯೋಗವಾಗಲಿದೆ.ಇಲ್ಲಿನ ಬೀಚ್‍ಗಳ ಅಭಿವೃದ್ಧಿ ಹಾಗೂ ಮೀನುಗಾರಿಕೆಗೂ ಅನುಕೂಲವಾಗಲಿದ್ದು,ಶಾಸಕ ಲಾಲಾಜಿ ಜತೆಗೂಡಿ ರಾಜ್ಯ ಸರಕಾರದ ಅನುಮೋದನೆಗೆ ಪ್ರತ್ನಿಸುವುದಾಗಿ ಹೇಳಿದರು.ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿಯೂ ಭರವಸೆ ನೀಡಿದರು.

ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾದ ವತಿಯಿಂದ ಉಭಯ ಶಾಸಕರಿಗೆ ಚರಂತಿಪೇಟೆ ಮೊಗವೀರ ಸಭಾ ಅಧ್ಯಕ್ಷ ಏಕನಾಥ ಕರ್ಕೇರ ಮನವಿ ಸಲ್ಲಿಸಿದ್ದರು.

ಸನ್ಮಾನ: ಶಾಸಕರಾಗಿ ಪ್ರಥಮ ಬಾರಿಗೆ ಮೂಲ್ಕಿ ನಾಲ್ಕು ಪಟ್ಣದ ಸಭೆಯಲ್ಲಿ ಭಾಗವಹಿಸಿದ ಉಭಯ ಶಾಸಕರಾದ ಲಾಲಾಜಿ ಆರ್.ಮೆಂಡನ್ ಮತ್ತು ಉಮಾನಾಥ ಕೋಟ್ಯಾನ್‍ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಮೂಲ್ಕಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಿರ್ಧರಿಸಲಾಗಿದ್ದು,ಮೊಗವೀರ ಸಮಾಜ ನಮ್ಮೊಂದಿಗೆ ಕೈಜೋಡಿಸಿ ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕೆಂದು ವಿನಂತಿಸಿದರು.ಅದೇ ರೀತಿ ಅಕ್ಟೋಬರ್ 19ರಂದು ಬಪ್ಪನಾಡು ದೇವಳದಲ್ಲಿ ನಡೆಯಲಿರುವ ಸ್ವರ್ಣ ಪಲ್ಲಕ್ಕಿ ಸಮರ್ಪಣಾ ಕಾರ್ಯಕ್ರಮದ ಆರಂಭೋತ್ಸವಕ್ಕೂ ಆಗಮಿಸಿ ಸಹಕರಿಸುವಂತೆ ವಿನಂತಿಸಿದರು.
ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಗುರುವಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಮನವಿ: ಹೆಜಮಾಡಿ ಬಂದರು ಯೋಜನೆಯ ಶೀಘ್ರ ಜಾರಿಗೆ ಮತ್ತು ಮೂಲ್ಕಿ ಬಪ್ಪನಾಡು ಬೀಚ್‍ನಿಂದ ನಡಿಕುದ್ರುವಿಗೆ ಸೇತುವೆ ನಿರ್ಮಾಣಕ್ಕೆ ಶಾಸಕದ್ವಯರು ಮುತುವರ್ಜಿ ವಹಿಸುವಂತೆ ಮನವಿ ಸಲ್ಲಿಸಲಾಯಿತು.

ಪ್ರತಿಭಾ ಪುರಸ್ಕಾರ: ಇದೇ ಸಂದರ್ಭ ಮೂಲ್ಕಿ ನಾಲ್ಕುಪಟ್ಣ ವ್ಯಾಪ್ತಿಯ 7 ಗ್ರಾಮಸಭೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರ ನಡೆಸಲಾಯಿತು.

ಮಹಾಸಭಾದ ಕಾರ್ಯದರ್ಶಿ ಅರುಣ್ ಕುಮಾರ್ ಸ್ವಾಗತಿಸಿದರು.ಪೂರ್ವಾಧ್ಯಕ್ಷ ಎನ್.ಡಿ.ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.ಸ್ಪೂರ್ತಿ ಮತ್ತು ಚಿಂತನಾ ಪ್ರಾರ್ಥಿಸಿದರು.ಜತೆ ಕಾರ್ಯದರ್ಶಿ ಶಶಿಕಾಂತ್ ಕೋಟ್ಯಾನ್ ವಂದಿಸಿದರು.