ದೈನಂದಿನ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ತುರ್ತು ಅಗತ್ಯ-ರಾಯಪ್ಪ

ಪಡುಬಿದ್ರಿ: ನಮ್ಮ ಜೀವನ ಶೈಲಿಯನ್ನು ಇಂದು ತುರ್ತಾಗಿ ಬದಲಿಸಿಕೊಳ್ಳುವುದು ಅನಿವಾರ್ಯ. ನಮ್ಮ ಹಿರಿಯರ ಮನಃಸ್ಥಿತಿಗೇ ಮರಳುವಂತಾಗಬೇಕು. ಪ್ಲಾಸ್ಟಿಕನ್ನು ನಮ್ಮ ಮುಂದಿನ ಪೀಳಿಗೆಯ ಸ್ವಚ್ಛ, ಸುಂದರ ಬದುಕಿಗಾಗಿ ಇಂದು ತ್ಯಜಿಸಲೇ ಬೇಕು ಎಂದು ಕಾಪು ಪುರಸಭೆಯ ನಿಕಟಪೂರ್ವ ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.

ಅವರು ಪಡುಬಿದ್ರಿ ಗ್ರಾಪಂ ಸಭಾಂಗಣದಲ್ಲಿ ಅ. 2ರಂದು ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ಗ್ರಾಪಂ ಮತ್ತು ಎಸ್‍ಎಲ್‍ಆರ್‍ಎಂ ಘಟಕಗಳ ಸಂಯೋಜನೆಯೊಂದಿಗೆ ನಡೆದ `ಸ್ವಚ್ಛತಾ ಹಿ ಸೇವಾ’ ಮತ್ತು ಪೈಪ್ ಕಂಪೆÇೀಸ್ಟಿಂಗ್ ಕುರಿತಾದ ಮಾಹಿತಿಯನ್ನು ನೀಡುತ್ತಾ ಮಾತನಾಡಿದರು.

ಮನೆಯಲ್ಲೇ ಪೈಪ್ ಕಂಪೆÇೀಸ್ಟಿಂಗ್ ಮೂಲಕ ಹಸಿ ಕಸವನ್ನು ನಮಗೆ ನಾವೇ ವಿಲೇವಾರಿ ಮಾಡಿಕೊಂಡಲ್ಲಿ 60 ದಿನಗಳಲ್ಲಿ ಉತ್ತಮ ಮನೆಗೊಬ್ಬರವು ಲಭಿಸಲಿದ್ದು, ಹೂವಿನ ಗಿಡಗಳು, ತೆಂಗಿನ ಮರಗಳಿಗೂ ಹಾಕಬಹುದಾಗಿದೆ. ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಆಂಧ್ರ, ಗೋವಾಗಳಿಂದ ಲೋಡುಗಟ್ಟಲೇ ತರಿಸಿಕೊಳ್ಳಲಾಗುತ್ತಿತ್ತು. ಇಂದಿನ ನಿಷೇಧದ ಬಳಿಕ ಮುಂದಿನ ಒಂದೆರಡು ತಿಂಗಳುಗಳಲ್ಲೇ ಇವುಗಳ ಉತ್ಪಾದನೆಯೂ ನಿಲುಗಡೆಯಾಗಲಿದ್ದು ಸಂತೆ, ಅಂಗಡಿ ಸಾಮಾನು, ಮನೆವಾರ್ತೆಗಳಿಗಾಗಿ ಪೇಟೆಗೆ ತೆರಳುವಾಗ ಅವಶ್ಯವಾಗಿ ಬಟ್ಟೆ ಚೀಲಗಳನ್ನೇ ಜತೆಗೊಯ್ಯಬೇಕು ಎಂದೂ ರಾಯಪ್ಪ ಸೂಚಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಸ್ವಚ್ಛತೆಯತ್ತ ಬದ್ಧತೆಗಾಗಿ ಪ್ರಮಾಣವಚನವನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿದ್ದ ಪಡುಬಿದ್ರಿ ರೋಟರಿ ಅಧ್ಯಕ್ಷ ರಿಯಾಜ್ ಮುದರಂಗಡಿ ಸಂದರ್ಭೋಚಿತವಾಗಿ ಮಾತನಾಡಿದರು.
ತಾಪಂ ಸದಸ್ಯ ದಿನೇಶ್ ಕೋಟ್ಯಾನ್ ಪಲಿಮಾರು, ಎಸ್‍ಎಲ್‍ಆರ್‍ಎಂ ಘಟಕದ ಉಸ್ತುವಾರಿ ರಮೀಜ್ ಹುಸೈನ್, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ. ಸುಕುಮಾರ್, ರೋಟರಿ ಸಹಾಯಕ ರಾಜ್ಯಪಾಲ ಗಣೇಶ್ ಆಚಾರ್ಯ, ಪಡುಬಿದ್ರಿ ಸಹಕಾರಿ ವ್ಯಾವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಉಪಸ್ಥಿತರಿದ್ದರು.
ಪಡುಬಿದ್ರಿ ಗ್ರಾಪಂ ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರೀಮಠ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.