ದೇವಳಗಳಿಗೆ ನೀಡುವ ಹಣ ಸದ್ವಿನಿಯೋಗವಾಗುವ ಬಗ್ಗೆ ಖಚಿತಪಡಿಸಿಕೊಳ್ಳಿ-ಕೇಮಾರು ಶ್ರೀ

ಪಡುಬಿದ್ರಿ: ಇತ್ತೀಚಿನ ದಿನಗಳಲ್ಲಿ ಮಠ ಮಂದಿರಗಳಿಗೆ ಭಕ್ತರು ಅತೀ ಹೆಚ್ಚು ದೇಣಿಗೆಗಳನ್ನು ನೀಡುತ್ತಿದ್ದು,ಅವುಗಳು ಅಲ್ಲಿ ಸದ್ವಿನಿಯೋಗವಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಹೇಳಿದ್ದಾರೆ.

ಹೆಜಮಾಡಿ ಬ್ರಹ್ಮಸ್ಥಾನ ಬಳಿಯ ಶ್ರೀ ಖಡ್ಗೇಶ್ವರೀ ಭಜನಾ ಮಂದಿರವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಕ್ತರು ನೀಡುವ ಹಣವನ್ನು ಅಲ್ಲಿ ಬೇರೆ ಬೇರೆ ಕಾರ್ಯಗಳಿಗೆ ದುಂದುವೆಚ್ಚ ಮಾಡಲಾಗುತ್ತಿದೆ.ಅದರ ಬದಲು ಗ್ರಾಮಗಳಲ್ಲಿ ಅಲ್ಲಲ್ಲಿರುವ ಭಜನಾ ಮಂದಿರಗಳಿಗೆ ನೀಡಿದಲ್ಲಿ ಗ್ರಾಮಾಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಶ್ರೀಗಳು ಹೇಳಿದರು.

ಇಂದು ದೇವಳಗಳಲ್ಲಿ ಮಾನವೀಯತೆ ಕಡಿಮೆಯಾಗುತ್ತಿದ್ದು,ಯಾಂತ್ರಿಕತೆ ಅಳವಡಿಸಿಕೊಳ್ಳಲಾಗುತ್ತಿದೆ.ಯಾಂತ್ರಿಕ ಜೀವನದಿಂದ ಹೊರಬರಲೇಬೇಕಾಗಿದೆ.ಭಜನಾ ಮಂದಿರಗಳು ಎಳೆಯರನ್ನು ಮಾನವೀಯತೆಯೆಡೆ ಕೊಂಡೊಯ್ಯಲು ಪರಿಣಾಮಕಾರೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಶ್ರೀಗಳು ಅಭಿಪ್ರಾಯಿಸಿದರು.

ಹೆಜಮಾಡಿ ವೇದಮೂರ್ತಿ ರಾಮಚಂದ್ರ ಭಟ್,ವೇದಮೂರ್ತಿ ರಂಗಣ್ಣ ಭಟ್,ಸುರೇಶ್ ಭಟ್ ಲೋಕಾರ್ಪಣೆ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.

ಮಟ್ಟು ಮೊಗವೀರ ಸಭಾ ಗೌರವಾಧ್ಯಕ್ಷ ನಾರಾಯಣ ಕೆ.ಮೆಂಡನ್,ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್,ಹೆಜಮಾಡಿ ರಂಪಣಿ ಫಂಡ್‍ನ ಕಾರ್ಯದರ್ಶಿ ಹರಿಶ್ಚಂದ್ರ ಮೆಂಡನ್,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು,ಸುಶೀಲಾ ಪೂಜಾರ್ತಿ,ತಾಪಂ ಸದಸ್ಯೆ ರೇಣುಕಾ ಆರ್.ಪುತ್ರನ್,ಹೆಜಮಾಡಿ ಮಾಧವ ಸನಿಲ್,ದೊಂಬಯ್ಯ ಪೂಜಾರಿ,ಉದ್ಯಮಿ ಜಯಂತ್ ಪುತ್ರನ್,ರಾಜೇಶ್ ಆಚಾರಿ,ಲಲಿತಾ ಸದಾನಂದ ಸಾಲ್ಯಾನ್,ವಾದಿರಾಜ ಆಚಾರಿ,ಸತೀಶ್ ದೇವಾಡಿಗ ಸೂರತ್,ಹೆಜಮಾಡಿ ಕೋಡಿ ಗಾಂಧಿನಗರ ಯುವಕ ವೃಂದದ ಅಧ್ಯಕ್ಷ ರವೀಂದ್ರ ಕೋಟ್ಯಾನ್,ಕೃಷ್ಣ ದೇವಾಡಿಗ,ಹೆಜಮಾಡಿ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಎಚ್.ರವಿ ಕುಂದರ್,ಮಹೇಶ್ ಸಾಲ್ಯಾನ್,ಸಚಿನ್ ನಾಯಕ್,ಸಮಿತಿಯ ಅಧ್ಯಕ್ಷ ಕೃಷ್ಣ ಪೂಜಾರಿ,ಭಜನಾ ಮಂದಿರದ ಅಧ್ಯಕ್ಷ ದೇವದಾಸ ಸಾಲ್ಯಾನ್,ಹರೀಶ್ ಮೊೈಲಿ ಉಪಸ್ಥಿತರಿದ್ದರು.

ಇದಕ್ಕೆ ಮುನ್ನ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿಯವರು ಭಜನಾ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಜನಾ ಮಂದಿರದ ಸ್ಥಳದಾನಿ ಹೆಜಮಾಡಿ ಭವಾನಿ ಕೆ.ಪೂಜಾರಿಯವರನ್ನು ಗೌರವಿಸಲಾಯಿತು.

ಸಾರ್ವಜನಿಕ ಸತ್ಯನಾರಾಯಣ ಪೂಜೆ,ಗಣಹೋಮ ಸಹಿತ ಧಾರ್ಮಿಕ ವಿಧಿವಿಧಾನಗಳ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ,ಭಜನಾ ಕಾರ್ಯಕ್ರಮ,ಶೃಂಗೇರಿ ಕಾಂಚಿನಗರ ಶ್ರೀ ಶಾರದಾ ವಿಶೇಷ ಚೇತನರ ಗೀತಗಾಯನ ಕಲಾ ತಂಡದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.