ತೆಂಗಿನ ಮರ ಹತ್ತುವ ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆಯ ಅವಶ್ಯಕತೆ ಇದೆ-ಪ್ರಾಣೇಶ್ ಹೆಜ್ಮಾಡಿ

ಮೂಲ್ಕಿ: ಅವಿಭಜಿತ ದಕ ಜಿಲ್ಲೆಯ ಜೀವನಾವಶ್ಯಕವಾದ ತೆಂಗು ಬೆಳೆಗಾರರು ತೆಂಗಿನ ಕಾಯಿ ಕೀಳುವ ಕಾರ್ಮಿಕರ ಕೊರತೆ ಇದ್ದು,ಇದಕ್ಕೆ ತೆಂಗಿನ ಮರ ಹತ್ತುವವರಿಗೆ ಜೀವನ ಭದ್ರತೆ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ.ಈ ಬಗ್ಗೆ ಸರಕಾರ ಎಚ್ಚೆತ್ತು ತೆಂಗಿ ಮರ ಹತ್ತುವ ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಿ ಜೀವನ ಭದ್ರತೆ ಒದಗಿಸುವ ಕಾರ್ಯ ಮಾಡಬೇಕೆಂದು ಉಡುಪಿ ಜಿಲ್ಲಾ ತೆಂಗು ಬೆಳೆಗಾರರ ಪ್ರಕೋಷ್ಠದ ಸಂಚಾಲಕ ಹಾಗೂ ಸಮಾಜ ಸೇವಕ ಪ್ರಾಣೇಶ್ ಹೆಜ್ಮಾಡಿ ಹೇಳಿದರು.

ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಸೋಮವಾರ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ತಮ್ಮ ನಿಸ್ವಾರ್ಥ ಸಮಾಜ ಸೇವೆಗಾಗಿ ನೀಡಲ್ಪಟ್ಟ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಇಂದು ತೆಂಗಿನ ಮರ ಹತ್ತುವವರಿಗೆ ಆಧುನಿಕ ವ್ಯವಸ್ಥೆ ಇದ್ದು ಸರಕಾರವೇ ಮುಂದಿ ನಿಂತು ಅರ್ಹ ಎಳೆಯರಿಗೆ ತರಬೇತಿಗಳನ್ನು ಹಮ್ಮಿಕೊಳ್ಳಬೇಕಿದೆ.ಈ ಬಗ್ಗೆ ಉಡುಪಿ ಜಿಲ್ಲಾ ತೆಂಗು ಬೆಳೆಗಾರರ ಪ್ರಕೋಷ್ಠ ನಿರ್ಧಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದವರು ಹೇಳಿ,ತನ್ನ ಸಾಮಾಜಿಕ ಕಳಕಳಿಯ ಸೇವೆಗೆ ಸಮಾಜದ ಬೆಂಬಲದ ಅವಶ್ಯಕತೆ ಇದೆ ಎಂದರು.
ರಾಜ್ಯ ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ನಿಸ್ವಾರ್ಥ ಸೇವೆಗೈಯ್ಯುವವರಿಗೆ ದೇವರ ಆಶೀರ್ವಾದವಿದೆ.ಅಂತವರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ,ಪ್ರಾಣೇಶ್ ಹೆಜ್ಮಾಡಿಯವರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ.ಅವರಿಗೆ ಸರ್ವರ ಬೆಂಬಲದ ಅಗತ್ಯವಿದೆ ಎಂದರು.

ಸನ್ಮಾನ: ಇದೇ ಸಂದರ್ಭ ಹೆಜಮಾಡಿ ಗ್ರಾಪಂ ಸದಸ್ಯ ಹಾಗೂ ಅಬಲರಿಗರ,ವೃದ್ಧರಿಗೆ ಸದಾ ನಿಸ್ವಾರ್ಥ ಸೇವೆಗೈಯ್ಯುವ ಪ್ರಾಣೇಶ್ ಹೆಜ್ಮಾಡಿಯವರನ್ನು ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಥಾ ಬಿಂದು ಸಂಚಾಲಕ ಪ್ರದೀಪ್ ಕುಮಾರ್,ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು,ಜಯಪಾಲ್ ಶೆಟ್ಟಿ ಐಕಳಬಾವ,ವಿಜಯಕುಮಾರ್ ಕುಬೆವೂರು,ಸುರೇಶ್ ಬಂಗೇರ ಬಪ್ಪನಾಡು,ರವೀಂದ್ರ ಶೆಟ್ಟಿ,ಆನಂದ ದೇವಾಡಿಗ,ಜಯರಾಮ ಉಪಸ್ಥಿತರಿದ್ದರು.
ಹೊಸ ಅಂಗಣ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವಿಸಿದರು.ರವಿಚಂದ್ರ ಕಾರ್ಯಕ್ರಮ ನಿರ್ವಹಿಸಿದರು.ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.