ತೆಂಗಿನ ಬೆಳೆಗಾರರು ತರಬೇತಿಯ ಪ್ರಯೋಜನ ಪಡೆದುಕೊಳ್ಳಿ: ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ

ಪಡುಬಿದ್ರಿ: ದಕ್ಷಿಣ ಭಾರತದಾದ್ಯಂತ ಕಂಡುಬಂದಿರುವ ತೆಂಗಿನ ಹುಳ ಬಾಧೆ ನಿವಾರಣೆಗೆ ಇಲಾಖೇ ಸೂಕ್ತವಾಗಿ ಸ್ಪಂದಿಸಿದ್ದು,ಇದರ ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಶುಕ್ರವಾರ ಹೆಜಮಾಡಿ ಗ್ರಾಪಂ ಸಭಾಭವನದಲ್ಲಿ ಜಿಪಂ ಉಡುಪಿ, ಹೆಜಮಾಡಿ ಗ್ರಾಪಂ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಗಳ ಜಂಟಿ ಸಹಯೋಗದಲ್ಲಿ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡಿನ ವಿಜ್ಞಾನಿಗಳ ಮೂಲಕ ನಡೆಸಲಾದ ರುಗೋಸ್ ಬಿಳಿ ಸುರುಳಿಯಾಕಾರದ ನೊಣದ ನಿರ್ವಹಣೆ ಮತ್ತು ತೆಂಗು ಬೆಳೆಯ ಸಮಗ್ರ ನಿರ್ವಹಣೆ ಕುರಿತಾದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಶಶಿಕಾಂತ್ ಪಡುಬಿದ್ರಿ ಮಾತನಾಡಿದರು.

ರೈತರ ಮಾತಿಗೆ ತೋಟಗಾರಿಕಾ ಇಲಾಖೆ ಸ್ಪಂದಿಸಿ ನೀಡುತ್ತಿರುವ ತೆಂಗು ಬೆಳೆ ನಿರ್ವಹಣೆ ಮತ್ತು ಸುರುಳಿಯಾಕಾರದ ಬಿಳಿ ನೊಣ ರುಗೋಸ್ ನಿರ್ವಹಣೆ ಕುರಿತಾದ ಮಾಹಿತಿಗಳುಳ್ಳ ತರಬೇತಿ ಶಿಬಿರದ ಪ್ರಯೋಜನವನ್ನು ರೈತರು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ತೋಟಗಳ ಉತ್ತಮ ನಿರ್ವಹಣೆಯಾದಾಗ ಉತ್ತಮ ಬೆಳೆ, ಉತ್ತಮ ವ್ಯವಹಾರಗಳು ರೈತರದ್ದಾಗುವವು ಎಂದವರು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿದ ತಾಪಂ ಸದಸ್ಯೆ ರೇಣುಕಾ ಪುತ್ರನ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ ಈ ತರಬೇತಿಯಿಂದ ಉತ್ತಮ ತೆಂಗಿನ ಫಸಲನ್ನು ಹೊಂದುವ ಭಾಗ್ಯ ನಮ್ಮೆಲ್ಲರದಾಗಲಿ ಎಂದರು.

ತರಬೇತಿ ಶಿಬಿರವನ್ನು ನಡೆಸಿದ ಸಿಪಿಸಿಆರ್‍ಐ ಕಾಸರಗೋಡಿನ ವಿಜ್ಞಾನಿ ಡಾ| ವಿನಾಯಕ ಹೆಗಡೆ ಶಿರಸಿ ಮಾತನಾಡಿ ರುಗೋಸ್ ಬಿಳಿ ಹುಳದ ಬಾಧೆಯು ತಮಿಳುನಾಡಿನ ಪೆÇಳ್ಳಾಚಿಯಲ್ಲಿ ಮೊದಲಬಾರಿಗೆ ಕಾಣಿಸಿದೆ. ಗಾಳಿಯಲ್ಲಿ ತೇಲಿ ಹೋಗಬಲ್ಲಂತಹ ಈ ಹುಳಗಳು ಮುಂದೆ ಕೇರಳ, ಆಂದ್ರ ಹಾಗೂ ಕರ್ನಾಟಕದ ಕರಾವಳಿಯಲ್ಲಿ 2016ರಿಂದ ಹಾವಳಿಯನ್ನೀಯುತ್ತಿವೆ. ಇವುಗಳ ನಿಯಂತ್ರಣಕ್ಕೆ ಬೇವಿನ ಎಣ್ಣೆ ಸಿಂಪರಣೆ ಮುಖ್ಯ ಅಸ್ತ್ರವಾಗಿದೆ. 1ಲೀಟರ್ ನೀರಿಗೆ 20ಗ್ರಾಂ ಬಟ್ಟೆ ಒಗೆಯುವ ಸಾಬೂನನ್ನು ಕಲಸಿ ಅದಕ್ಕೆ 5ಎಂ. ಎಲ್ ಬೇವಿನ ಎಣ್ಣೆಯನ್ನು ಸೇರಿಸಿಕೊಂಡು ಸಣ್ಣ ತೆಂಗಿನ ಮರಗಳಿಗೆ ಸಿಂಪಡಿಸಬೇಕೆಂದು ಹೇಳಿದರು.

ಮತ್ತೋರ್ವ ವಿಜ್ಞಾನಿ ಡಾ| ಸುಚಿತ್ರಾ ತರಬೇತಿ ಶಿಬಿರದಲ್ಲಿ ಸಹಕರಿಸಿದರು. ಹೆಜಮಾಡಿ ಪಿಡಿಒ ಮಮತಾ ಶೆಟ್ಟಿ, ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಶ್ರೀನಿವಾಸ್, ತಾ| ತೋಟಗಾರಿಕಾ ಅಧಿಕಾರಿ ಶ್ವೇತಾ ಉಪಸ್ಥಿತರಿದ್ದರು. ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರು.