ತುಳು ಆಚಾರ ವಿಚಾರಗಳು ನಮ್ಮ ಬದುಕಿನ ಕನ್ನಡಿ -ತುಳುನಾಡಿನ ಆಚಾರ-ವಿಚಾರಗಳು ಕೃತಿ ಬಿಡುಗಡೆಗೊಳಿಸಿ ಉಮಾನಾಥ್ ಕೋಟ್ಯಾನ್

ಮೂಲ್ಕಿ:: ತಗ್ಗಿ ಬಗ್ಗಿ ನಡೆಯುವುದು ನಮ್ಮ ಸಂಸ್ಕøತಿ. ತುಳುನಾಡಿನಲ್ಲಿ ಇರುವಷ್ಟು ಆಚಾರ ವಿಚಾರಗಳು ವಿಶ್ವದ ಬೇರೆಲ್ಲೂ ಕಾಣಸಿಗದು. ಅದು ನಮ್ಮ ಬದುಕಿನ ಕನ್ನಡಿ ಎಂದು ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.

ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಗುರುವಾರ ಹೊಸ ಅಂಗಣ ಪ್ರಕಟಣಾಲಯದ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್‍ರವರ 14ನೇ ಕೃತಿ “ತುಳುನಾಡಿನ ಆಚಾರ-ವಿಚಾರಗಳು” ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳುನಾಡಿನ ಎಲ್ಲಾ ಆಚಾರಗಳೂ ಸತ್ಯವಾದುದು ಮತ್ತು ಸತ್ವಯುತವಾದುದು. ನಮ್ಮ ಹಿರಿಯರು ಕಂಡುಹಿಡಿದ ಎಲ್ಲಾ ಆಚಾರಗಳೂ ನೂರಕ್ಕೆ ನೂರರಷ್ಟು ಸತ್ಯವಾದುದು. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಪುಸ್ತಕಗಳನ್ನು ಕೊಂಡು ಓದುವ ಸಂಸ್ಕøತಿ ನಮ್ಮದಾಗಬೇಕು. ಲೇಖಕರಿಗೆ ಹೆಚ್ಚು ಪ್ರೋತ್ಸಾಹದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿ ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮಾತನಾಡಿ, ಲೇಖಕರ ಈ ಪುಸ್ತಕದ ಬರವಣಿಗೆ ಅತಿರೇಕಗಳಿಂದ ಮುಕ್ತವಾಗಿದೆ. ಬದಲಾಗಿ ವಿಮರ್ಶಾತ್ಮಕವಾಗಿದೆ. ಈ ಕೃತಿ ಸಂಗ್ರಹಯೋಗ್ಯವೂ ಹೌದು ಎಂದರು.

ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ರಾಜ್ಯ ಜಾನಪದ ಪರಿಷತ್ತಿನ ಅಧ್ಯಕ್ಷ ತಲ್ಲೂರು ಡಾ.ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಲೇಖಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಕೃತಿ ಪರಿಚಯಿಸಿದರು. ವಿಜಯ ಕುಮಾರ್ ಸ್ವಾಗತಿಸಿದರು. ಡಾ. ಪ್ರಿಯಾ ಹರೀಶ್ ಶೆಟ್ಟಿ ನಿರೂಪಿಸಿ ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.