ತುಂಬೆಯಿಂದ ಮೂಲ್ಕಿಗೆ ಬರುವ ನೀರು ಪರರ ಪಾಲು-ಕಠಿಣ ಕ್ರಮಕ್ಕೆ ಮೂಲ್ಕಿ ನಪಂ ನಿರ್ಧಾರ

ಮೂಲ್ಕಿ: ತುಂಬೆ ವೆಂಟೆಡ್ ಡ್ಯಾಮ್‍ನಿಂದ ಮೂಲ್ಕಿ ನಗರಕ್ಕೆ ಬರುವ ಕುಡಿಯುವ ನೀರಿನ ಪೈಪ್ ತುಂಡರಿಸಿ ಹಲವೆಡೆ ಟ್ಯಾಪಿಂಗ್ ಮೂಲಕ ನೀರನ್ನ ಸೆಳೆಯುತ್ತಿದ್ದು,ವಾರದೊಳಗೆ ಅವನ್ನು ಪತ್ತೆ ಹಚ್ಚಿ ಪೋಲೀಸ್ ಬೆಂಗಾವಲಿನೊಂದಿಗೆ ಸರಿಪಡಿಸಲು ಮೂಲ್ಕಿ ನಪಂ ಮಾಸಿಕ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಶನಿವಾರ ಮೂಲ್ಕಿ ನಪಂ ಸಭಾಂಗಣದಲ್ಲಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
8 ವರ್ಷಗಳಿಂದ ಮೂಲ್ಕಿ ನಪಂಗೆ ತುಂಬೆ ನೀರು ಸರಬರಾಜು ಆಗುತ್ತಿದೆ.ಕುಳಾಯಿ ಪಂಪ್‍ಹೌಸ್‍ನಿಂದ ಪ್ರತ್ಯೇಕ ಮೀಟರ್ ಅಳವಡಿಸಿ ನೀರು ರೀಡಿಂಗ್ ಮಾಡಲಾಗಿದೆ.ಈ ಮಧ್ಯೆ ಹಳೆಯಂಗಡಿ ಮತ್ತು ಆಸುಪಾಸಿನ ಗ್ರಾಮಗಳಿಗೆ ನಪಂ ಪ್ರತ್ಯೇಕ ಒಳ ಒಪ್ಪಂದ ಮಾಡಿಕೊಂಡು ನೀರು ಸರಬರಾಜು ಮಾಡುತಿತ್ತು.ಹಳೆಯಂಗಡಿ ಗ್ರಾಪಂ ಒಳ ಒಪ್ಪಂದ 2 ವರ್ಷದ ಹಿಂದೆ ಮುಗಿದಿದ್ದು,ಆವರೆಗಿನ ನೀರಿನ ಬಿಲ್ಲು ಸುಮಾರು 50ಲಕ್ಷ ರೂ.ದಾಟಿದ್ದು ಈವರೆಗೂ ಯಾವುದೇ ಹಣ ಪಾವತಿಸಿಲ್ಲ.ಈ ಬಗ್ಗೆ ಹಲವು ಪತ್ರ ವ್ಯವಹಾರ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ.

ಮಂಗಳೂರು ನಗರ ಪಾಲಿಕೆಯಿಂದ ನೀರಿನ ಬಿಲ್ಲು ಅಧಿಕವಾಗುತ್ತಿದ್ದುದನ್ನು ಕಂಡು ಮೂಲ್ಕಿ ನಪಂ ಕೆಎಸ್ ರಾವ್ ನಗರದಲ್ಲಿ ಪ್ರತ್ಯೇಕ ಮೀಟರ್ ಅಳವಡಿಸಿ ನಗರಕ್ಕೆ ಬರುವ ನೀರಿನ ಖಚಿತ ಪಡಿಸಿಕೊಳ್ಳುತ್ತಿತ್ತು.
ಕಳೆದ ನಾಲ್ಕೈದು ದಿನಗಳಿಂದ ನೀರಿನ ಪ್ರಮಾದಲ್ಲಿ ತೀರಾ ಕಡಿಮೆಯಾಗುತ್ತಿದ್ದು,ಮೀಟರ್ ರೀಡಿಂಗ್ ಪರಿಶೀಲಿಸಿದಾಗ ಕುಳಾಯಿ ರೀಡಿಂಗ್‍ನಲ್ಲಿ 8 ಲಕ್ಷ ಲೀ.ನೀರು ಸರಬರಾಜಾಗಿದ್ದರೆ ಮೂಲ್ಕಿ ಕೆಎಸ್ ರಾವ್ ನಗರದ ಮೀಟರ್‍ನಲ್ಲಿ ನಗರಕ್ಕೆ ಬಂದ ನೀರಿನ ಪ್ರಮಾಣ ಕೇವಲ ಒಂದು ಲಕ್ಷ ಲೀ.ನೀರು ಮಾತ್ರ.ಉಳಿದ ನೀರು ದಾರಿ ಮಧ್ಯೆ ಪರರ ಪಾಲಾಗುತ್ತಿದ್ದುದ ಗಮನಕ್ಕೆ ಬಂದಿತ್ತು.

ಈ ಬಗ್ಗೆ ಅಧ್ಯಕ್ಷ ಸುನಿಲ್ ಆಳ್ವ ವಿಷಯ ಪ್ರಸ್ತಾವಿಸಿ ಸೂಕ್ತ ಕ್ರಮಕ್ಕೆ ಆಡಳಿತದ ಅನುಮತಿ ಕೋರಿದ್ದರು.ಈ ಬಾರಿ ಈಗಲೇ ನೀರಿನ ಕೊರತೆ ಇದ್ದು,ತುಂಬೆ ನೀರನ್ನೆ ಆಶ್ರಯಿಸಬೇಕಾಗಿದೆ ಎಂದರು.
ತಕ್ಷಣ ಹಳೆಯಂಗಡಿ ಗ್ರಾಪಂ ಪಿಡಿಒಗೆ ಮೂಲ್ಕಿ ನಪಂ ಬರಹೇಳಿ ಈ ಬಗ್ಗೆ ಸ್ಪಷ್ಟನೆ ಕೋರಲು ಸಭೆ ನಿರ್ಧರಿಸಿದ್ದು,ಅವರು ಬಾರದಿದ್ದಲ್ಲಿ ಪೋಲೀಸ್ ಬೆಂಗಾವಲಿನೊಂದಿಗೆ ಆಕ್ರಮ ಟ್ಯಾಪಿಂಗ್‍ಗಳನ್ನು ಪತ್ತೆಹಚ್ಚಿ ಟ್ಯಾಪಿಂಗ್ ಮುಚ್ಚಲು ಸಭೆ ನಿರ್ಣಯ ಕೈಗೊಂಡಿತು.

ಕಾರ್ನಾಡು,ಕೆಎಸ್ ರಾವ್ ನಗರ ಧೂಳುಮಯ: ಬಹು ನಿರೀಕ್ಷಿತ 16 ಕೋಟಿ ರೂ.ಕುಡಿಯುವ ನೀರಿನ ಯೋಜನೆ ಮೂಲ್ಕಿಯಲ್ಲಿ ಜಾರಿಯಲ್ಲಿದ್ದು ಅದಕ್ಕಾಗಿ ನಗರದಲ್ಲೆಡೆ ರಸ್ತೆ ಅಗೆದು ಪೈಪ್ ಅಳವಡಿಕೆ ಕಾಮಗಾರಿ ಚಾಲ್ತಿಯಲ್ಲಿದೆ.ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೆ ಕಾಮಗಾರಿ ನಡೆಯುವುದರಿಂದ ಕಾರ್ನಾಡು ಜಂಕ್ಷನ್ ಮತ್ತು ಕೆಎಸ್ ರಾವ್ ನಗರದಲ್ಲಿ ಧೂಳು ತುಂಬಿ ರಸ್ತೆ ಸಂಚಾರ ಸಮಸ್ಯೆಯಾಗಿದೆ ಎಂದು ಸದಸ್ಯರಾದ ಪುತ್ತುಬಾವ,ಬಿಎಮ್ ಆಸಿಫ್,ವಿಮಲಾ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.ಈ ಸಂದರ್ಭ ಗುತ್ತಿಗೆದಾರರ ಪೈಕಿ ಇಂಜಿನಿಯರ್‍ರನ್ನು ತಕ್ಷಣ ಸಭೆಗೆ ಕರೆಸಿ ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸೂಚಿಸಲಾಯಿತು.

ಡಿ.24 ಶಾಸಕರು ಸಂಸದರು ಮೂಲ್ಕಿಗೆ: ಮೂಲ್ಕಿಯ ಚಿತ್ರಾಪು ನೂತನ ರಸ್ತೆ ಕಾಮಗಾರಿ ಡಿ.24 ಸೋಮವಾರ ಸಂಜೆ 3 ಗಂಟೆಗೆ ಉದ್ಘಾಟನೆಯಾಗಲಿದ್ದು ಶಾಸಕರು ಮತ್ತು ಸಂಸದರು ಆಗಮಿಸಲಿದ್ದಾರೆ ಎಂದು ಸುನಿಲ್ ಆಳ್ವ ತಿಳಿಸಿದರು.ಬಳಿಕ ಸಂಜೆ 4 ಗಂಟೆಗೆ ನಪಂ ಸಭಾಂಗಣದಲ್ಲಿ ಜಿ-2 ವಸತಿ ಸಂಕೀರ್ಣ ಮತ್ತು ಪ್ರಧಾನಮಂತ್ರಿ ಆವಾಜ್ ಯೋಜನೆಯ ಫಲಾನುಭವಿಗಳೊಂದಿಗೆ ಸಮೀಕ್ಷಾ ಸಭೆ ನಡೆಯಲಿದೆ ಎಂದವರು ಹೇಳಿದರು.
ಜನವರಿ ಪ್ರಥಮ ವಾರದಲ್ಲಿ ಮತ್ತೊಮ್ಮೆ ಮಾಸಿಕ ಸಭೆ ಕರೆಯಲು ನಿರ್ಧರಿಸಲಾಯಿತು.ಜ.26ರ ಗಣರಾಜ್ಯೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಸಭೆ ನಿರ್ಧರಿಸಿತು.

ಚುನಾವಣೆ ಹತ್ತಿರ ಬರುವ ಸಂದರ್ಭ ರಾಜಕೀಯ ಬೇಡ ಎಂದು ಸದಸ್ಯ ಆಸಿಫ್ ಆಕ್ಷೇಪಿಸಿ,ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರನ್ನೂ ಕರೆಯಬೇಕೆಂದು ಆಗ್ರಹಿಸಿದರು.

ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಮುಖ್ಯಾಧಿಕಾರಿ ಇಂದು ಎಮ್.ಉಪಸ್ಥಿತರಿದ್ದರು.