ತರಬೇತಿ ಪಡೆದ ಕಟ್ಟಡ ಕಾರ್ಮಿಕರಿಗೆ ಪ್ರಮಾಣ ಪತ್ರ,ಸಲಕರಣೆಗಳ ಕಿಟ್ ವಿತರಣೆ

ಪಡುಬಿದ್ರಿ: ಇಲ್ಲಿನ ಪಾದೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿತ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಭಿತರಿಗಾಗಿ ನಿರ್ಮಿತಿ ಕೇಂದ್ರದ ಮೂಲಕ ಪಾದೆಬೆಟ್ಟು ಶಾಲೆಯಲ್ಲಿ ಒಂದು ತಿಂಗಳ ಕಾಲ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ 58 ಶಿಬಿರಾರ್ಥಿಗಳಿಗೆ ಸಲಕರಣೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಶಾಸಕ ಲಾಲಾಜಿ.ಆರ್ ಮೆಂಡನ್ ಕಿಟ್ ಹಾಗೂ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.ಕಳೆದ ಒಂದು ತಿಂಗಳಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರಕಾರದ ವಿವಿಧ ಇಲಾಖೆಗಳ ಮೂಲಕ ಮಹಿಳೆಯರೇ ಅಧಿಕವಿದ್ದ ಶಿಬಿರಾರ್ಥಿಗಳಿಗೆ ಕಟ್ಟಡ ನಿರ್ಮಾಣದ ವಿವಿಧ ಹಂತಗಳ ಕಾಮಗಾರಿಗಳ ಬಗ್ಗೆ ಮೇಸನ್ರಿ ತರಬೇತಿ ನೀಡಲಾಗಿದ್ದು,ತರಬೇತಿ ಪಡೆದ 58 ಶಿಬಿರಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಮಾಡಿಕೊಳ್ಳಲು ಬೇಕಾದ ಸಲಕರಣೆಗಳ ಕಿಟ್‍ಗಳನ್ನು ವಿತರಿಸಲಾಯಿತು.ಪಕ್ಕದಲ್ಲಿ ಕೊರಗ ಸಮಾಜದವರಿಗಾಗಿ ನಿರ್ಮಿಸುತ್ತಿರುವ 19 ಮನೆಗಳ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರದ ಮೂಲಕ ಇದೇ ಶಿಬಿರಾರ್ಥಿಗಳನ್ನು ಬಳಸಿಕೊಳ್ಳಲು ಸರಕಾರ ನಿರ್ಧರಿಸಿದೆ.
ಮೊದಲ ತರಬೇತಿ ಶಿಬಿರ ಮುಕ್ತಾಯದ ಬಳಿಕ ಎರಡನೇ ಶಿಬಿರ ಆರಂಭಗೊಂಡಿದ್ದು,ಇದೇ ಪರಿಸರದಲ್ಲಿ ತರಬೇತಿ ನೀಡಲಾಗುತ್ತಿದೆ.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‍ಕುಮಾರ್, ಐಟಿಡಿಪಿ ಯೋಜನಾ ಸಮಯನ್ವಾಧಿಕಾರಿ ಲಲಿತಾದೇವಿ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ, ಅಲ್ಟ್ರಾಟೆಕ್ ಸಿಮೆಂಟ್‍ನ ನಾಗೇಶ್, ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಮಿಥುನ್ ಆರ್.ಹೆಗ್ಡೆ,ಶ್ರೀನಿವಾಸ ಶರ್ಮ ಉಪಸ್ಥಿತರಿದ್ದರು.