ತಂದೆ ಬಿಟ್ಟುಹೋದ ಮಕ್ಕಳಿಬ್ಬರ ರಕ್ಷಣೆ

ಪಡುಬಿದ್ರಿ ತಾಯಿ ನಿಧನರಾದ ಬಳಿP
À ತಂದೆಯೊಂದಿಗೆ ವಾಸಿಸುತ್ತಿದ್ದ ಮಕ್ಕಳಿಬ್ಬರನ್ನು ತಂದೆಯೇ ಬಿಟ್ಟುಹೋಗಿದ್ದು, ಮಕ್ಕಳ ರಕ್ಷಣಾ ಘಟಕ ರಕ್ಷಿಸಿದೆ.
ಘಟನೆಯ ವಿವರ: ಮೂಲತಃ ಬಿಜಾಪುರದ ದಂಪತಿಯು ಜೋಡಿ ಬಂದು ಹೆಜಮಾಡಿಯಲ್ಲಿ ವಾಸವಿದ್ದರು. ಪತ್ನಿಗೆ ಮೊದಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಇಬ್ಬರ ವಯಸ್ಸಿನಲ್ಲೂ ಅಜಗಾಂತರ ವ್ಯತ್ಯಾಸವಿತ್ತು. ಪತ್ನಿಗೆ 46, ಪತಿಗೆ 27 ವರ್ಷ ವಯಸ್ಸು. ಅವರಿಬ್ಬರೂ ಕೆಲವು ವರ್ಷಗಳ ಹಿಂದೆ ಹೆಜಮಾಡಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹೆಜಮಾಡಿ ಟೋಲ್ ಬಳಿ ಅಂಗಡಿಯೊಂದನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಅದರ ಬಳಿಕ ಅಂಗಡ್ ಬಂದ್ ಮಾಡಿ ತೆಂಗಿನ ಮರ ಹತ್ತುವ ಕಾಯಕ ಪತಿ ಮಾಡಿಕೊಂಡಿದ್ದ.

ಇದೇ ಸಂದರ್ಭ ಪತ್ನಿ ಹೃದಯ ಸಂಬಂಧಿ ಕಾಯಿಲೆಗೊಳಗಾಗಿ 6 ತಿಂಗಳ ಹಿಂದೆ ನಿಧನರಾಗಿದ್ದರು. ಇದರ ಬಗ್ಗೆ ಸ್ಥಳೀಯರಾದ ಹಮೀದ್‍ರಿಂದ ಮಾಹಿತಿ ಪಡೆದ ಮಕ್ಕಳ ರಕ್ಷಣಾ ಘಟಕದ ಪ್ರಭಾಕರ ಆಚಾರ್ಯ ಮತ್ತವರ ತಂಡ ಕಳೆದ ಸೆಪ್ಟಂಬರ್‍ನಲ್ಲಿ ಮನೆಗೆ ಆಗಮಿಸಿ ತಂದೆ ರಾಜುರವರಲ್ಲಿ ಮಕ್ಕಳನ್ನು ಘಟಕಕ್ಕೆ ಒಪ್ಪಿಸುವಂತೆ ಮನವಿ ಮಾಡಿದ್ದರು. ರಾಜು ಯುವಕನಾಗಿದ್ದು ಮತ್ತೊಂದು ಮದುವೆ ಮಾಡಿಕೊಂಡರೆ 9 ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ಮನವರಿಕೆ ಮಾಡಲಾಗಿತ್ತು. ಆದರೆ ರಾಜು ಅದಕ್ಕೊಪ್ಪದೆ ತಾನೇ ಅವರನ್ನು ಸಾಕುವುದಾಗಿ ಹೇಳಿದ್ದ. ಆದರೆ ಆ ಬಳಿಕ ಮನೆಯಲ್ಲಿ ಮಕ್ಕಳೊಂದಿಗೆ ನಿತ್ಯ ಜಗಳ ಮಾಡುತ್ತಿದ್ದುದಲ್ಲದೆ ಕೊಲ್ನಾಡಿನ ಯುವತಿಯೊಬ್ಬಳೊಂದಿಗೆ ಸಂಬಂಧವನ್ನೂ ಹೊಂದಿದ್ದ.

3 ವಾರಗಳ ಹಿಂದೆ ಇಬ್ಬರು ಮಕ್ಕಳನ್ನೂ ಹೆಜಮಾಡಿಯ ಬಾಡಿಗೆ ಮನೆಯಲ್ಲಿ ಬಿಟ್ಟು ಮಧ್ಯರಾತ್ರಿ ನಾಪತ್ತೆಯಾಗಿದ್ದ. ಇದರ ಬಗ್ಗೆ ಮಾಹಿತಿ ಅರಿತ ಬಾಡಿಗೆ ಮನೆಯ ಮಾಲೀಕರು ಮಕ್ಕಳನ್ನು ತಕ್ಷಣ ತೆರವುಗೊಳಿಸುವಂತೆ ತಿಳಿಸಿದ್ದರು. ಈ ಸಂದರ್ಭ ಈ ಬಗ್ಗೆ ಮಾಹಿತಿ ತಿಳಿದ ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರರವರು ಇಬ್ಬರೂ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ 3 ವಾರಗಳಿಂದ ಸಲಹುತ್ತಿದ್ದರು. ಇದೇ ವೇಳೆ ಹೆಜಮಾಡಿ ಗ್ರಾಮಸಭೆಯಲ್ಲಿ ಸುಧಾಕರ ಕರ್ಕೇರವರು ಮಕ್ಕಳ ಸಹಾಯವಾಣಿಯವರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಗ್ರಾಮಸಭೆಯಲ್ಲಿ ಒಪ್ಪಿಕೊಂಡರೂ ಆ ಬಳಿಕ ಅವರ ಸುದ್ದಿಯಿರಲಿಲ್ಲ.

ಹೆಜಮಾಡಿ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಇಬ್ಬರು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿದ ಅವರು ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದುದರಿಂದ ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ರವಾನಿಸಿದ್ದರು.
ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿದ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ, ಸಾಮಾಜಿಕ ಕಾರ್ಯಕರ್ತೆ ಗ್ಲೀಷಾ ಮೊಂತೇರೋ ಗುರುವಾರ ಸುಧಾಕರ ಕರ್ಕೇರರವರ ಪಲಿಮಾರು ಹೊಸಾಗ್ಮೆಯಲ್ಲಿರುವ ಮನೆಗೆ ಆಗಮಿಸಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಮಕ್ಕಳನ್ನು 3 ವಾರಗಳ ಕಾಲ ರಕ್ಷಿಸಿ ಸಲಹಿದ ಸುಧಾಕಕರ ಕರ್ಕೇರ ಮತ್ತವರ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಡುಪಿಗೆ ಕರೆದುಕೊಂಡು ಹೋದ ಮಕ್ಕಳ ಪೈಕಿ ಬಾಲಕಿಯನ್ನು ಉಡುಪಿ ನಿಟ್ಟೂರಿನ ಬಾಲಕಿಯರ ಬಾಲವನದಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟಿದ್ದು, ಬಾಲಕನನ್ನು ಮಿಶನ್‍ಕಂಪೌಂಡ್‍ನ ಸಿಎಸ್‍ಐ ಬಾಲಕರ ವಸತಿ ನಿಲಯದಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿಯ ವತಿಯಿಂದ ನಡೆಯುವ ಆಪ್ತ ಸಮಾಲೋಚನೆಯಲ್ಲಿ ಮಕ್ಕಳಿಬ್ಬರನ್ನು ಕರೆದು ಸೂಕ್ತ ಸಲಹೆ ಸೂಚನೆ ನೀಡಲಾಗುವುದು. ಇಬ್ಬರು ಮಕ್ಕಳೂ ಒಬ್ಬರೊನ್ನೊಬ್ಬರು ಬಿಟ್ಟು ಇರಲಾರದ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಅವರು ಬಯಸಿದ ವ್ಯವಸ್ಥೆ ಕಲ್ಪಿಸಲಾಗುವುದು. ಶುಕ್ರವಾರ ಆರೋಗ್ಯ ತಪಾಸಣೆಯನ್ನೂ ಮಾಡಲಾಗುವುದು ಎಂದು ಪ್ರಭಾಕರ ಆಚಾರ್ಯ ವಿಕ ಕ್ಕೆ ತಿಳಿಸಿದ್ದಾರೆ. ಪರೀಕ್ಷೆ ಹತ್ತಿರ ಬರುವ ಹಿನ್ನೆಲೆಯಲ್ಲಿ ಬಾಲಕಿಯನ್ನು ನಿಟ್ಟೂರು ಬಳಿಯ ಹನುಮಾನ್ ನಗರ ಶಾಲೆಗೆ ಸೇರಿಸಿ ಅಲ್ಲಿಯೇ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸುತೇವೆ. ಬಾಲಕನನ್ನು ಮಿಶನ್ ಕಂಪೌಂಡ್ ಶಾಲೆಗೆ ಸೇರಿಸಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.