ಡಿ7-8: ಪಡುಬಿದ್ರಿಯಲ್ಲಿ ಅನಾರೋಗ್ಯ ಪೀಡಿತರ ನೆರವಿಗಾಗಿ ದಸಂಸ ವತಿಯಿಂದ ರಾಜ್ಯ ಮಟ್ಟದ ಕ್ರಿಕೆಟ್

ಪಡುಬಿದ್ರಿ:: ದಲಿತರ ಪ್ರತಿಭೆಯನ್ನು ಹೊರತರುವ ಸಲುವಾಗಿ ದಲಿತರಿಗಾಗಿಯೇ ರಾಜ್ಯಮಟ್ಟದ ಜೈಭೀಮ್ ಕ್ರಿಕೆಟ್ ಪಂದ್ಯಾಟವು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಇದರ ಪಡುಬಿದ್ರಿ ಗ್ರಾಮ ಶಾಖೆಯ ವತಿಯಿಂದ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಡಿ.7 ಮತ್ತು ಡಿ.8ರಂದು ನಡೆಯಲಿದೆ ಎಂದು ದ.ಸಂ.ಸ. ಕಾಪು ಇದರ ಪ್ರಧಾನ ಸಂಚಾಲಕ ಲೋಕೇಶ್ ತಿಳಿಸಿದರು.

ಅವರು ಬುಧವಾರ ಸಂಜೆ ಪಡುಬಿದ್ರಿಯ ಅಂಬೇಡ್ಕರ್ ಭವನದ ಸಂಘದ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೈಭೀಮ್ ಟ್ರೋಫಿ ಅನಾವರಣಗೊಳಿಸಿ ಮಾತನಾಡಿದರು.

ವಿಶೇಷವಾಗಿ ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲಾ ವರ್ಗಗಳ ಅನಾರೋಗ್ಯ ಪೀಡಿತರನ್ನು ಗುರುತಿಸಿ ಆರ್ಥಿಕ ನೆರವು ನೀಡುವ ಸದುದ್ದೇಶದೊಂದಿಗೆ ಈ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಹಾಸನ, ಬೆಳಗಾಂ, ಸಹಿತ ರಾಜ್ಯದಾದ್ಯಂತ ಸುಮಾರು 22 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಕ್ರಿಕೆಟ್ ಪಟುವಿನ ಜಾತಿ ಪ್ರಮಾಣ ಪತ್ರ ಮಾತ್ರ ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.
2016ರಿಂದ ಇದುವರೆಗೆ ಒಟ್ಟು 21 ಅನಾರೋಗ್ಯ ಪೀಡಿತರಿಗೆ 1.97 ಲಕ್ಷ ರೂ ಆರ್ಥಿಕ ನೆರವು ಇದುವರೆಗೆ ನೀಡಲಾಗಿದ್ದು, ಈ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟದ ಉಳಿಕೆ ಹಣದಲ್ಲಿ 30 ಸಾವಿರ ರೂ.ವನ್ನು ವಿವಿಧ ವರ್ಗದ 5 ಜನರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಅದರೊಂದಿಗೆ ದಲಿತ ಪ್ರತಿಭೆಗಳು ಮತ್ತು ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದವರು ತಿಳಿಸಿದರು.
ಇದೇ ಸಂದರ್ಭ ಜೈಭೀಮ್ ಟ್ರೋಫಿ ಅನಾವರಣ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ದ.ಸಂ.ಸ. ಪಡುಬಿದ್ರಿ ಗ್ರಾಮ ಶಾಖೆಯ ಸಂಚಾಲಕ ಸುಕೇಶ್ ಕುಮಾರ್, ಕಾರ್ಯದರ್ಶಿ ಕೀರ್ತಿ ಕುಮಾರ್, ಕೋಶಾಧಿಕಾರಿ ಹರಿಶ್ಚಂದ್ರ, ಸಲಹೆಗಾರ ವಿಠಲ್ ಮಾಸ್ಟರ್, ಮಹಿಳಾ ವಿಭಾಗದ ಅಧ್ಯಕ್ಷೆ ವಸಂತಿ ಶಿವಾನಂದ್, ಸುರೇಶ್ ಕಲ್ಲಟ್ಟೆ ಮೊದಲಾದವರು ಉಪಸ್ಥಿತರಿದ್ದರು.