ಡಿ.23-24: ಪಡುಬಿದ್ರಿಯಲ್ಲಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್

ಬಿಡ್ಡಿಂಗ್ ಮೂಲಕ ಆಟಗಾರರ ಆಯ್ಕೆ

ಪಡುಬಿದ್ರಿ: ಬ್ಯಾಡ್ಮಿಂಟನ್ ಆಟಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ಆಯೋಜಿಸುವ ಹೊನಲು ಬೆಳಕಿನ ಪಡುಬಿದ್ರಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2018 ಪಂದ್ಯಾಕೂಟವು ಪಡುಬಿದ್ರಿ ಬೋರ್ಡು ಶಾಲಾ ಮೈದಾನದ ಬ್ಯಾಂಡ್ಮಿಂಟನ್ ಅಂಗಣದಲ್ಲಿ ಡಿಸೆಂಬರ್ 22 ಮತ್ತು 23ರಂದು ನಡೆಯಲಿದೆ.

ಈ ಪಂದ್ಯಾಕೂಟದ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಬ್ಯಾಡ್ಮಿಂಟನ್ ಅಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2018 ಟ್ರೋಫಿಯನ್ನು ಪಡುಬಿದ್ರಿ ಎಸ್‍ಐ ಸತೀಶ್ ಎಮ್.ಪಿ. ಅನಾವರಣಗೊಳಿಸಿದರು. ಆಟಗಾರರ ಜರ್ಸಿಯನ್ನು 8 ತಂಡದ ಮಾಲೀಕರು ಬಿಡುಗಡೆಗೊಳಿಸಿದರು.

ಪಂದ್ಯಾಕೂಟದ ವಿಜೇತರಿಗೆ ಪ್ರಥಮ ರೂ. 15,555 ಹಾಗೂ ಪಿಬಿಸಿ ಟ್ರೋಫಿ, ದ್ವಿತೀಯ ರೂ. 9,999 ನಗದು ಹಾಗೂ ಪಿಬಿಸಿ ಟ್ರೋಫಿ ಲಭಿಸಲಿದೆ. ಪಂದ್ಯಾಕೂಟದ ಅಂಗವಾಗಿ ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್ ಹಾಗೂ ರಮೀಝ್ ಮಾಲೀಕತ್ವದ ನವರಂಗ್ ವಾರಿಯರ್ಸ್, ಡಾ.ಪ್ರಶಾಂತ್ ಶೆಟ್ಟಿ ಕಾಪು ಮಾಲಿಕತ್ವದ ಸೆವೆನ್ ಸ್ಟಾರ್ ಕಾಪು, ನವೀನ್‍ಚಂದ್ರ ಜೆ.ಶೆಟ್ಟಿ ಇವರ ಓಶಿಯನ್ ವಾರಿಯರ್ಸ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹಾಗೂ ಅಶ್ವಥ್ ಮಾಲಿಕತ್ವದ ಸ್ಕಂದ ವಾರಿಯರ್ಸ್, ಮಯ್ಯದ್ದಿ ಇವರ ಕಲರ್ಸ್ ವಾರಿಯರ್ಸ್, ಪ್ರಶಾಂತ್ ಎರ್ಮಾಳು ಇವರ ಎಸ್.ಎನ್.ಜಿ ವಾರಿಯರ್ಸ್, ವೈ.ದಾಮೋದರ್ ಮಾಲಿಕತ್ವದ ಡೈಮಂಡ್ಸ್, ಶಂಕರ್ ಕಂಚಿನಡ್ಕ ಇವರ ಯಶ್ ವಾರಿಯರ್ಸ್ ಸೇರಿ ಒಟ್ಟು 8 ತಂಡಗಳು ಭಾಗವಹಿಸಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿತು.

ಬಿಡ್ಡಿಂಗ್‍ನಲ್ಲಿ ಒಟ್ಟು 56 ಆಟಗಾರರು ಭಾಗವಹಿಸಿದ್ದರು. ಐಕಾನ್ ಆಟಗಾರರ ಬಿಡ್ಡಿಂಗ್‍ನಲ್ಲಿ ಅತೀ ಹೆಚ್ಚಿನ ಅಂಕಗಳಿಗೆ ಮಾರಾಟಗೊಂಡ ಆಟಗಾರರಲ್ಲಿ ಅಶ್ರಫ್ ಪಡುಬಿದ್ರಿ 80000 ಅಂಕಗಳಿಗೆ ಹಾಗೂ ಸಂಜಯ್ ಆರ್.ಯಮ್ 70000 ಅಂಕಗಳಿಗೆ ಮಾರಾಟಗೊಂಡರು.

ಬ್ಯಾಡ್ಮಿಂಟನ್ ಕ್ಲಬ್‍ನ ಅಧ್ಯಕ್ಷ ವೈ.ಸುಕುಮಾರ್, ಉಪಾಧ್ಯಕ್ಷ ವಿಜಯ್ ಆಚಾರ್ಯ, ಪಂದ್ಯಾಕೂಟದ ಆಯೋಜಕರಾದ ಮಿನ್ನ ಶರೀಫ್, ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಸಿ ರಮೀಝ್ ಹುಸೈನ್ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿಕೊಟ್ಟರು.