ಡಿ.1 ದೇಶದ ಎಲ್ಲಾ ಟೋಲ್‌ಗಳು ಫಾಸ್ಟ್ ಟ್ಯಾಗ್

ಹೆಜಮಾಡಿ ಟೋಲ್‌ನಲ್ಲಿ ನ.ಒಂದರ ರಾತ್ರಿಯಿಂದ ಪ್ರಾಯೋಗಿಕ ಫಾಸ್ಟ್ ಟ್ಯಾಗ್‌ಗೆ ಚಾಲನೆ

ಪಡುಬಿದ್ರಿ: ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ವಾಹನ ಸವಾರರಿಗೆ ಸಮಯ ಉಳಿತಾಯವಾಗುವಂತೆ ದೇಶದ ಎಲ್ಲಾ ಟೋಲ್‌ಗಳನ್ನು ಫಾಸ್ಟ್ ಟ್ಯಾಗ್ ಆಗಿ ಪರಿವರ್ತಿಸಲು ಎನ್‌ಎಚ್‌ಎಐ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನವಯುಗ್ ಕಂಪನಿಯ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಟೋಲ್‌ಗಳನ್ನು ಡಿಸೆಂಬರ್ ಒಂದರಿAದ ಫಾಸ್ಟ್ ಟ್ಯಾಗ್ ಟೋಲ್ ಸಂಗ್ರಹ ಕಡ್ಡಾಯಗೊಳಿಸಲಾಗಿದೆ.

ಇದರ ಪೂರ್ವಭಾವಿಯಾಗಿ ನ.೧ ಶುಕ್ರವಾರ ರಾತ್ರಿಯಿಂದ ಹೆಜಮಾಡಿ ಟೋಲ್‌ನಲ್ಲಿ ಟೋಲ್‌ನ ಎಲ್ಲಾ ಲೇನ್‌ಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಫಾಸ್ಟ್ ಟ್ಯಾಗ್ ಆಗಿ ಪರಿವರ್ತಿಸಲಾಯಿತು.

ಈ ಸಂದರ್ಭ ಎನ್‌ಎಚ್‌ಎಐ ಪ್ರಾಜೆಕ್ಟ್ ಡೈರೆಕ್ಟರ್ ಶಿಶು ಮೋಹನ್ ಉಪಸ್ಥಿತರಿದ್ದು, ಫಾಸ್ಟ್ ಟ್ಯಾಗ್ ಲೇನ್ ಅಳವಡಿಕೆಗಳನ್ನು ವೀಕ್ಷಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭ ವಿಕದೊಂದಿಗೆ ಮಾತನಾಡಿದ ಶಿಶುಮೋಹನ್, ಪ್ರಧಾನಿಯವರ ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ ದೇಶದ ಎಲ್ಲಾ ಟೋಲ್‌ಗಳನ್ನು ಫಾಸ್ಟ್ ಟ್ಯಾಗ್‌ಗೆ ಒಳಪಡಿಸಲು ಎನ್‌ಎಚ್‌ಎಐ ಆದೇಶಿಸಿದೆ. ಇದರಿಂದ ವಾಹನ ಚಾಲಕರ ಅತ್ಯಮೂಲ್ಯ ಸಮಯವನ್ನು ಉಳಿಸುವ ಜತೆಗೆ ಟೋಲ್ ಪ್ಲಾಝಾಗಳ ಚಿಲ್ಲರೆ ಸಮಸ್ಯೆಗೂ ಮುಕ್ತಿ ದೊರೆಯುವಂತಾಗಲಿದೆ. ಡಿ.ಒಂದರಿAದ ದೇಶದಾದ್ಯಂತ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಟೋಲ್ ಸಂಗ್ರಹ ಕಡ್ಡಾಯಗೊಳಿಸಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವ ಉದ್ದೇಶದಿಂದ ನವೆಂಬರ್ ಒಂದರಿAದ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಟೋಲ್ ಪ್ಲಾಝಾಗಳಲ್ಲಿ ಪ್ರಾಯೋಗಿಕ ಫಾಸ್ಟ್ ಟ್ಯಾಗ್ ಟೋಲ್ ಸಂಗ್ರಹ ಆರಂಭಿಸಲಾಗಿದೆ ಎಂದರು. ಈ ಮೂಲಕ ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರಮೋಷನ್ ನೀಡಿದಂತಾಗುತ್ತದೆ. ಗ್ರಾಹಕರಿಗೆ ಕ್ಯಾಶ್‌ಲೆಸ್ ವ್ಯವಹಾರ ನೀಡಿದಂತಾಗುತ್ತದೆ ಎಂದವರು ಹೇಳಿದ್ದು, ನಿತ್ಯ ಸರತಿ ಸಾಲಿನಲ್ಲಿ ನಿಂತು ಟೋಲ್ ನೀಡುವುದು ಸ್ಥಗಿತವಾಗಲಿದೆ ಎಂದಿದ್ದಾರೆ
.
ಈಗಾಗಲೇ ನವಯುಗ್ ಕಂಪನಿಯ ಹೆಜಮಾಡಿ ಟೋಲ್‌ನಲ್ಲಿರುವ ೧೪ ಲೇನ್‌ಗಳ ಪೈಕಿ ೨ ಲೇನ್‌ಗಳು ಫಾಸ್ಟ್ ಟ್ಯಾಗ್ ವ್ಯವಹಾರ ನಡೆಸುತ್ತಿತ್ತು. ಈ ಸಂದರ್ಭ ನಿತ್ಯ ಸಂಚರಿಸುವ ಶೇ.೨೫ರಷ್ಟು ವಾಹನಗಳು ಈಗಾಗಲೇ ಕ್ಯಾಶ್‌ಲೆಸ್ ವ್ಯವಹಾರವಾದ ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದೆ. ಕೇಂದ್ರ ಸರಕಾರದ ನಿರ್ದೇಶನದಂತೆ ಡಿಸೆಂಬರ್ ಒಂದರಿAದ ಎಲ್ಲಾ ಲೇನ್‌ಗಳು ಫಾಸ್ಟ್ ಟ್ಯಾಗ್ ವ್ಯವಹಾರಕ್ಕೆ ಅಣಿಯಾಗಲಿದ್ದು, ಗ್ರಾಹಕರು ಎನ್‌ಎಚ್‌ಎಐ ಹೆಲ್ಪ್ಲೈನ್ ಸಂಖ್ಯೆ ೧೦೩೩ಕ್ಕೆ ಕರೆಮಾಡಿ ಮಾಹಿತಿ ಪಡೆಯುವಂತೆ ಅಥವಾ ಮೈ ಫಾಸ್ಟ್ ಟ್ಯಾಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಶಿಶುಮೋಹನ್ ಮನವಿ ಮಾಡಿದ್ದಾರೆ.

ಈ ಸಂದರ್ಭ ಎನ್‌ಎಚ್‌ಎಐ ಅಧಿಕಾರಿಗಳಾದ ಬಸವರಾಜ್, ನವೀನ್ ಜೆ.ಎಸ್., ನವಯುಗ್ ಕಂಪನಿಯ ರಾಘವೇಂದ್ರ, ಬಾಲಚಂದ್ರ, ಶಿವಪ್ರಸಾದ್ ರೈ ಉಪಸ್ಥಿತರಿದ್ದರು.