ಡಿ.ಒಂದರಿಂದ ಟೋಲ್‍ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ – ಸ್ಥಳೀಯ ವಾಹನಗಳಿಗೆ ರಿಯಾಯಿತಿ ಬಗ್ಗೆ ಆಶಾಭಾವನೆ

ಪಡುಬಿದ್ರಿ: ಡಿಸೆಂಬರ್ ಒಂದರಿಂದ ದೇಶದ ಎಲ್ಲಾ ಟೋಲ್‍ಗಳಲ್ಲಿ ಫಾಸ್ಟ್ ಟ್ಯಾಗ್ ಟೋಲ್ ಪಾವತಿ ಕಡ್ಡಾಯಗೊಳಿಸಲಾಗಿದ್ದು, ಅತಂತ್ರರಾದ ಸ್ಥಳೀಯ ವಾಹನಗಳ ಟೋಲ್ ವಿನಾಯಿತಿ ಬಗ್ಗೆ ಪಡುಬಿದ್ರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಆಶಾಭಾವನೆ ವ್ಯಕ್ತವಾಗಿದೆ.
ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಸ್ಥಳೀಯ ವಾಹನಗಳ ರಿಯಾಯಿತಿ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯಲಾಗಿದ್ದು, ಈ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆಂದು ಟೋಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಲೋಚನಾ ಸಭೆಯಲ್ಲಿ ಈಗಿರುವ ಟೋಲ್ ವಿನಾಯಿತಿಯನ್ನು ಮುಂದುವರಿಸಲೇಬೇಕೆಂದು ಆಗ್ರಹಿಸಲಾಯಿತು.

ಸೋಮವಾರ ಸಂಜೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಫಾಸ್ಟ್ ಟ್ಯಾಗ್ ಬಗ್ಗೆ ಕಾಪು ನಿರೀಕ್ಷರಾದ ಮಹೇಶ್ ಪ್ರಸಾದ್ ಕರೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
ಎಲ್ಲಾ ಟೋಲ್‍ಗಳಲ್ಲಿ ಟ್ಯಾಗ್ ಉಚಿತ ಲಭ್ಯ: ಡಿ.ಒಂದರಿಂದ ಕಡ್ಡಾಯ ಫಾಸ್ಟ್ ಟ್ಯಾಗ್ ಅಳವಡಿಕೆಗೊಳಿಸಿರುವ ಕಾರಣ ದೇಶದಾದ್ಯಂತ ಟ್ಯಾಗ್ ವಿತರಣೆ ವಹಿಸಿಕೊಂಡಿರುವ ಐಎಚ್‍ಎಮ್‍ಸಿಎಲ್ ಕಂಪನಿಯು ಉಚಿತವಾಗಿ ಟ್ಯಾಗ್ ವಿತರಣೆ ತೀವ್ರಗೊಳಿಸಿದ್ದು, ಸದ್ಯ ಎಲ್ಲಾ ಟೋಲ್ ಪ್ಲಾಝಾಗಳಲ್ಲಿ ಟ್ಯಾಗ್ ವಿತರಣೆ ನಡೆಸುತ್ತಿದೆ ಎಂದು ಎನ್‍ಎಚ್ ಅಧಿಕಾರಿ ನವೀನ್ ಮಾಹಿತಿ ನೀಡಿದರು. ಈ ಸಂದರ್ಭ ಟ್ಯಾಗ್ ಲಭ್ಯತೆ ಇಲ್ಲದ ಸಂದರ್ಭ ವಾಹನ ಸವಾರರು ಟೋಲ್ ದಾಟುವ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ಬಗ್ಗೆ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಡಿ ಒಂದರೊಳಗೆ ಟ್ಯಾಗ್ ವಿತರಣೆ ಪೂರ್ಣಗೊಳ್ಳದಿದ್ದಲ್ಲಿ ಕಡ್ಡಾಯ ಫಾಸ್ಟ್ ಟ್ಯಾಗ್ ಮುಂದೂಡುವ ಪ್ರಮೇಯ ಬರಲಿದೆ ಎಂದವರು ಹೇಳಿದರು.
ಡಿ.31ರವರೆಗೆ ಕಡ್ಡಾಯ ಮುಂದುವರಿಸುವಂತೆ ಅನೇಕರು ಆಗ್ರಹಿಸಿದರು.

ಮಾಸಿಕ ಪಾಸ್‍ಗೂ ಟ್ಯಾಗ್ ಕಡ್ಡಾಯ: ಮಾಸಿಕ ಪಾಸ್ ಹೊಂದಿರುವ ವಾಹನಗಳಿಗೂ ಟ್ಯಾಗ್ ಕಡ್ಡಾಯವಾಗಿದ್ದು, ಅವರ ನೋಂದಣಿಯನ್ನು ಫಾಸ್ಟ್ ಟ್ಯಾಗ್‍ಗೆ ಮರ್ಜ್ ಮಾಡಲಾಗುವುದು. ಅವರ ಸುಗಮ ಸಂಚಾರಕ್ಕೆ ಯಾವುದೆ ತೊಂದರೆ ಇಲ್ಲ ಎಂದವರು ತಿಳಿಸಿದರು.
ಹೆಜಮಾಡಿ ಒಳ ರಸ್ತೆಯಿಂದ ಸಾಗುವ ಸರ್ವಿಸ್ ಬಸ್ಸುಗಳ ವಿನಾಯಿತಿ ಬಗ್ಗೆ ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಶೆಟ್ಟಿ(ಬಾಬಣ್ಣ) ಪ್ರಶ್ನಿಸಿದರು. ಹೆಜಮಾಡಿ ಕೋಡಿಗೆ ತೆರಳುವ ಬಸ್ಸು ಹೊರತು ಇತರ ಬಸ್ಸುಗಳಿಗೆ ಟ್ಯಾಗ್ ಕಡ್ಡಾಯವಾಗಿದೆ. ರಿಕ್ಷಾ, ದ್ವಿಚಕ್ರ ವಾಹನ ಹೊರತುಪಡಿಸಿ ಇತರ ಎಲ್ಲಾ ವಾಹನಗಳಿಗೆ ಟ್ಯಾಗ್ ಕಡ್ಡಾಯ ಎಂದವರು ಹೇಳಿದರು.

ದಾಖಲೆ ಸಲ್ಲಿಕೆ: ಉಚಿತ ಟ್ಯಾಗ್ ಬಯಸುವವರು ವಾಹನಗಳ ದಾಖಲೆ, ವಾಹನ ಮಾಲೀಕರ ಚಾಲನಾ ಪರವಾನಗಿ ಅಥವಾ ಆಧಾರ್ ಕಾರ್ಡ್‍ನೊಂದಿಗೆ ವಾಹನ ಸಮೇತ ಬಂದಲ್ಲಿ ತಕ್ಷಣ ಟ್ಯಾಗ್ ಸಿಗಲಿದೆ ಎಂದು ಮಾಹಿತಿ ನೀಡಲಾಯಿತು.

ಪಡುಬಿದ್ರಿ ಕಲ್ಸಂಕ ಸೇತುವೆ ಹಾಗೂ ಸರ್ವಿಸ್ ರಸ್ತೆ ಕಾಮಗಾರಿ ಜನವರಿ 31ರೊಳಗೆ, ಕುಂದಾಪುರ ಮೇಲ್ಸೇತುವೆ ಕಾಮಗಾರಿ ಮೇ 31ರೊಳಗೆ ಮುಗಿಯಲಿದೆ ಎಂದು ತಿಳಿಸಲಾಯಿತು. ಪಡುಬಿದ್ರಿಯ ಬಸ್ಸು ನಿಲ್ದಾಣದ ಎರಡೂ ಬದಿಗಳಲ್ಲಿ ತಾತ್ಕಾಲಿಕ ಪ್ರಯಾಣಿಕರ ತಂಗುದಾಣ ನಿರ್ಮಾಣವನ್ನು 15 ದಿನದೊಳಗೆ ನಿರ್ಮಿಸಲು ನವಯುಗ್ ಮಂಪನಿ ಒಪ್ಪಿಗೆ ನೀಡಿತು.

ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಮಂಗಳಮುಖಿಯರ ಕಾಟ ವಿಪರೀತವಾಗಿದ್ದು ಪೋಲೀಸರು ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ವಾಹನ ಸವಾರರು ದೂರು ನೀಡಿದಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಲಾಯಿತು.

ಫಾಸ್ಟ್ ಟ್ಯಾಗ್‍ನ್ನು ವಾಹನಗಳ ಮುಂಭಾಗದ ಗ್ಲಾಸ್‍ಗೆ ಅಳವಡಿಸುವಂತೆ ವಿನಂತಿಸಲಾಯಿತು. ಫಾಸ್ಟ್ ಟ್ಯಾಗ್ ಅಳವಡಿಸಿಯೂ ಅನಿವಾರ್ಯ ಸಂದರ್ಭಗಳ ವಾಹನ ದಟ್ಟಣೆ ಆದಲ್ಲಿ ಯಾರು ಜವಾಬ್ದಾರಿ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯಲಿಲ್ಲ.

ವಿವಿಧ ಸಂಘಟನೆಗಳ ಮುಖಂಡರುಗಳಾದ ಮಧು ಆಚಾರ್ಯ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್‍ಚಂದ್ರ ಜೆ.ಶೆಟ್ಟಿ, ಅನ್ಸಾರ್ ಅಹಮದ್, ಸೈಯದ್ ನಿಜಾಮುದ್ದೀನ್, ಅಮೀರ್ ಸಾಹೇಬ್, ದುರ್ಗಾಪ್ರಸಾದ್ ಹೆಗ್ಡೆ, ಸುದೇಶ್ ಮರೋಳಿ, ಜಗದೀಶ್ ಶೆಟ್ಟಿ, ವೇಣುಗೋಪಾಲ್ ಹೆಗ್ಡೆ, ಲತೇಶ್ ಕುಂದರ್, ದೇವಣ್ಣ ನಾಯಕ್, ಕೌಸರ್, ಶಂಕರ್ ಶೆಟ್ಟಿ, ವಿನೋದ್, ಠಾಣಾಧಿಕಾರಿ ಸುಬ್ಬಣ್ಣ, ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.