ಟೋಲ್ ಆರಂಭಿಸಿದಲ್ಲಿ ವಾಹನ ಅಡ್ಡವಿಟ್ಟು ಪ್ರತಿಭಟನೆ-ಉಭಯ ಜಿಲ್ಲಾ ರಾಹೆ ಹೋರಾಟ ಸಮಿತಿ ಎಚ್ಚರಿಕೆ

ಪಡುಬಿದಿ: ಸೋಮವಾರದಿಂದ ಹೆಜಮಾಡಿ ಮತ್ತು ಸಾಸ್ತಾನದಲ್ಲಿ  ಪ್ಲಾಝಾಗಳಲ್ಲಿ ಕೆಎ-20 ನೋಂದಣಿಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಿಸಿದಲ್ಲಿ ವಾಹನ ಅಡ್ಡವಿಟ್ಟು ಪ್ರತಿಭಟನೆ ನಡೆಸುವುದಾಗಿ ಅವಿಭಜಿತ ದಕ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಎಚ್ಚರಿಸಿದೆ. ಭಾನುವಾರ ಸಂಜೆ ಪಡುಬಿದ್ರಿ ನಾರಾಯಣಗುರು ಸಭಾಂಗಣದಲ್ಲಿ ಸಮಿತಿಯು ಉಭಯ ಜಿಲ್ಲಾ ವಿವಿಧ ಸಂಘಟನೆಗಳು ಮತ್ತು ಜನಪ್ರತಿನಿಧಿಗಳ ಸಭೆ ಕರೆದು ಪ್ರತಿಭಟನೆ ನಡೆಸುವುದಾಗಿ ಸಮಿತಿ ಎಚ್ಚರಿಸಿದೆ.

ಜಿಲ್ಲಾಡಳಿತ ನಮ್ಮ ಸಮಸ್ಯೆಯನ್ನು ಅರಿತು ಶೀಘ್ರ ಸಭೆ ಕರೆದು ಅಹವಾಲು ಸ್ವೀಕರಿಸಬೇಕು.ಅಲ್ಲಿತನಕ ಟೋಲ್ ಸಂಗ್ರಹ ಮಾಡಕೂಡದು.ಸ್ಥಳೀಯ ವಾಹನಗಳಿಗೆ ಇಡೀ ದೇಶದಲ್ಲಿಯೇ ಟೋಲ್ ವಿನಾಯಿತಿ ಇದೆ.ಹಾಗಾಗಿ ನಮಗೂ ಟೋಲ್ ವಿನಾಯಿತಿ ನೀಡಬೇಕು.ತಪ್ಪಿದಲ್ಲಿ ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಸಮಿತಿಯ ಉಪಾಧ್ಯಕ್ಷ ಗುಲಾಮ್ ಮೊಹಮ್ಮದ್ ಆರಂಭದಲ್ಲಿ ಮಾತನಾಡಿ ಸೋಮವಾರ ಕೆಎ-20 ವಾಹನಗಳಿಗೆ ಟೋಲ್ ಸಂಗ್ರಹ ಆರಂಭಿಸಿದಲ್ಲಿ ತಾನು ಮೊದಲಿಗನಾಗಿ ತನ್ನ ವಾಹನ ಅಡ್ಡವಿಟ್ಟು ಪ್ರತಿಭಟಿಸುವುದಾಗಿ ಘೋಷಿಸಿದರು.ತನ್ನನ್ನು ಗುಂಡಿಟ್ಟು ಕೊಂದರೂ ತಾನು ವಾಹನ ತೆಗೆಯಲಾರೆ ಎಂದು ಎಚ್ಚರಿಸಿದ್ದರು.ಇದಕ್ಕೆ ಪೂರಕವಾಗಿ ಮೂಲ್ಕಿ ಹಾಗೂ ಇತರ ಕಾರು ಚಾಲಕ ಮಾಲಕ ಸಂಘವೂ ಬೆಂಬಲ ವ್ಯಕ್ತಪಡಿಸಿ ತಮ್ಮ ವಾಹನಗಳನ್ನೂ ಟೋಲ್‍ಗೆ ಅಡ್ಡ ಇರಿಸುವುದಾಗಿ ಹೇಳಿದ್ದರು.

ಈ ಸಂದರ್ಭ ಮಾತನಾಡಿದ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ,ಸರ್ಕಾರ ಮತ್ತು ಜಿಲ್ಲಾಡಳಿತ ಆತುರದ ನಿಧಾರ ಕೈಗೊಂಡಿದೆ.ಜಿಲ್ಲಾಧಿಕಾರಿ ಬಂಡವಾಳಶಾಹಿಗಳ ಪರವಾಗಿದ್ದಾರೆ.28ಕ್ಕೆ ಉಸ್ತುವಾರಿ ಸಚಿವರು ರಾಹೆ ಸಮಸ್ಯೆ ಕುರಿತು ಸಭೆ ಕರೆದಿದ್ದರೂ ಆತುರಾತುರವಾಗಿ ಜಿಲ್ಲಾಧಿಕಾರಿ ನಿರ್ಧಾರ ಕೈಗೊಂಡಿದ್ದಾರೆ.ಇದು ಸಚಿವರಿಗೆ ಮಾಡಿದ ಅವಮಾನ.ನಮ್ಮ ಬೇಡಿಕೆಗಳನ್ನು ಪರಿಗಣಿಸದೆ ಟೋಲ್ ಸಂಗ್ರಹಕ್ಕೆ ಅನುವು ಮಾಡಿಕೊಟ್ಟಲ್ಲಿ ಜಿಲ್ಲೆ ಚಿರಕಾಲ ನೆನಪಿಡುವ ರೀತಿಯಲ್ಲಿ ಹೋರಾಟ ನಡೆಸಲಿದ್ದೇವೆ.ಮುಂದೆ ನಡೆಯುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ.ನಮ್ಮ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ,ಅವಿಭಜಿತ ಜಿಲ್ಲೆಯ ಎಲ್ಲಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.ಹಾಗಾಗಿ ನಮ್ಮ ನಿರ್ಣಾಯಕ ಹೋರಾಟ ಆರಂಭಿಸುವ ಮುನ್ನ ಜಿಲ್ಲಾಧಿಕಾರಿಗಳು ಟೋಲ್ ಸಂಗ್ರಹಕ್ಕೆ ತಡೆ ನೀಡಬೇಕು.ನಮ್ಮ ಮನವಿಯನ್ನು ಪುರಸ್ಕರಿಸಿ ಸೋಮವಾರದ ಟೋಲ್ ಸಂಗ್ರಹ ನಿಲ್ಲಿಸಿ ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸಬೇಕು.ಇದಕ್ಕೆ ತಪ್ಪಿದಲ್ಲಿ ನಮ್ಮ ನಿರ್ಣಾಯಕ ಹೋರಾಟ ಶತಸಿದ್ಧ ಎಂದವರು ಎಚ್ಚರಿಸಿದ್ದಾರೆ.

ಸುರತ್ಕಲ್ ಮಾದರಿ ನಮಗೂ ವಿನಾಯಿತಿ ನೀಡಿ:ತಲಪಾಡಿಯಿಂದ ಕುಂದಾಪುರ ತನಕ(91 ಕಿಮೀ) 4 ಟೋಲ್‍ಗಳು ಕಾರ್ಯಾಚರಿಸುತ್ತಿವೆ.ಇದೂ ಕಾನೂನುಬಾಹಿರ.ಜನ ಸಾಮಾನ್ಯರಿಗೆ ಇದರ ನೇರ ಹೊಡೆತ ಬೀಳುತ್ತದೆ.ಶೇ.100ರಷ್ಟು ಕಾಮಗಾರಿ ನಡೆಸದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಸಾಧ್ಯವಿಲ್ಲ.ಅಲ್ಲದೆ ಸುರತ್ಕಲ್ ಟೋಲ್‍ನಲ್ಲಿ ದಕ ಜಿಲ್ಲಾ ನೋಂದಣಿಯ ವಾಹನಗಳಿಗೆ ಟೋಲ್ ವಿನಾಯಿತಿ ಇದೆ.ಆದರೆ ಉಡುಪಿ ಜಿಲ್ಲೆಗೆ ಈ ವಿನಾಯಿತಿ ಯಾಕೆ ಸಿಗುತ್ತಿಲ್ಲ.ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು.ನಮಗೂ ಸುರತ್ಕಲ್ ಮಾದರಿ ವಿನಾಯಿತಿ ನೀಡಿ.ತಪ್ಪಿದಲ್ಲಿ ಎಲ್ಲರೂ ಸೇರಿ ಹೋರಾಟ ನಡೆಸಲಿದ್ದೇವೆ ಎಂದು ಹೋರಾಟ ಸಮಿತಿಯ ಗೌರವ ಸಲಹೆಗಾರ ಕಾಪು ದಿವಾಕರ ಶೆಟ್ಟಿ ಎಚ್ಚರಿಸಿದರು.

ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳು ಸುಂಕ ನೀಡುವ ಪ್ರಶ್ನೆಯೇ ಇಲ್ಲ.ಉಗ್ರ ಹೋರಾಟದ ಮೂಲಕ ನಮ್ಮ ಅಹವಾಲನ್ನು ಮನಗಾಣಿಸಬೇಕು.ಜಿಲ್ಲಾಡಳಿತ ನಮ್ಮ ಬೇಡಿಕೆ ಈಡೇರಿಕೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಹೇಳಿದರು.

ಹೋರಾಟದಲ್ಲಿ ರಾಜಕೀಯ ಸಲ್ಲದು.ಸುಂಕ ವಿನಾಯಿತಿಯಿಂದ ಎಲ್ಲರಿಗೂ ಅನುಕೂಲವಾಗಲಿದೆ.ಹಾಗಾಗಿ ಸಾರ್ವಜನಿಕರೆಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕೆಂದು ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹೇಳಿದರು.

ಶೇ.60 ರಷ್ಟು ಕಾಮಗಾರಿ ನಡೆಸಿ ಟೋಲ್ ಸಂಗ್ರಹ ಸಾಧುವಲ್ಲ.ಶೇ.100ರಷ್ಟು ಕಾಮಗಾರಿ ನಡೆಸಲಿ.ಅಲ್ಲದೆ ದೇಶದೆಲ್ಲೆಡೆ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ಇದೆ.ಹಾಗಾಗಿ ನವಯುಗ್ ಕಂಪನಿ ನಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು.ತಪ್ಪಿದಲ್ಲಿ ನಿರ್ಣಾಯಕ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ ಹೇಳಿದರು.
ಸೋಮವಾರ ಟೋಲ್ ಬಳಿ ಜಮಾವಣೆ: ನಮ್ಮ ಬೇಡಿಕೆಗಳನ್ನು ಕಡೆಗಣಿಸಿ ಸೋಮವಾರ ಟೋಲ್ ಸಂಗ್ರಹ ಆರಂಭಿಸಿದಲ್ಲಿ ಹೋರಾಟಗಾರರು ತಕ್ಷಣ ಟೋಲ್ ಪ್ಲಾಝಾದಲ್ಲಿ ಒಟ್ಟಾಗಿ ಮುಂದಿನ ಹೋರಾಟ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ದೂರವಾಣಿ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಮೂಲ್ಕಿ ಕಾರು ಚಾಲಕ ಮಾಲಕ ಸಂಘದ ಕಾರ್ಯದರ್ಶಿ ದೇವಣ್ಣ ನಾಯಕ್,ಕಾಪು ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ,ವೈ.ಸುಧೀರ್‍ಕುಮಾರ್,ತಾಪಂ ಸದಸ್ಯ ಯು.ಸಿ.ಶೇಖಬ್ಬ,ವೇದಿಕೆಯಲ್ಲಿದ್ದರು.ಶೇಖರ್ ಹೆಜ್ಮಾಡಿ ಸ್ವಾಗತಿಸಿ ವಂದಿಸಿದರು.

ಅಭೂತಪೂರ್ವ ಪೋಲೀಸ್ ಬಂದೋಬಸ್ತ್:ನವಯುಗ್ ಕಂಪನಿಯು ಜಿಲ್ಲಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ತಯಾರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅಭೂತಪೂರ್ವ ಪೋಲೀಸ್ ಬಂದೋಬಸ್ತ್‍ನೊಂದಿಗೆ ಟೋಲ್ ಸಂಗ್ರಹಕ್ಕೆ ಅನುವುಮಾಡಿಕೊಡಲು ಪೋಲೀಸ್ ಇಲಾಖೆ ಬಂದೋಬಸ್ತ್‍ಗೆ ವ್ಯವಸ್ಥೆ ಮಾಡಿದೆ.

ತಹಶೀಲ್ದಾರ್ ಮತ್ತು ಆರ್‍ಟಿಒ ಟೋಲ್ ಪ್ಲಾಝಾದಲ್ಲಿ ಉಪಸ್ಥಿತರಿದ್ದು,ಪ್ರತಿಭಟಿಸಿದ ವಾಹಗಳನ್ನು ಸ್ಥಳದಲ್ಲಿಯೇ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ.ಪ್ರತಿಭಟನಾಕಾರರನ್ನು ತಕ್ಷಣ ಬಂಧಿಸಿ ಕರೆದೊಯ್ಯಲು ಹಲವಾರು ಬಸ್ಸುಗಳನ್ನು ರಾತ್ರಿಯೇ ತಂದಿರಿಸಲಾಗಿದೆ.ಪ್ರತಿಭಟನೆ ತೀವ್ರಗೊಂಡಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲೂ ನಿರ್ಧರಿಸಲಾಗಿದೆ.