ಟೋಲ್‍ಗಳಲ್ಲಿ ಕಾನೂನುಬಾಹಿರ ಸುಂಕ ವಸೂಲಾತಿಗೆ ಕೇಂದ್ರ ಸರಕಾರವೇ ಹೊಣೆ-ಐವನ್ ಡಿಸೋಜಾ

ಪಡುಬಿದ್ರಿ: ಅವಿಭಜಿತ ದಕ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಪೂರ್ತಿಗೊಳಿಸದೆ ಅಲ್ಲಲ್ಲಿ ಸುಂಕ ವಸೂಲಾತಿ ಮಾಡುತ್ತಿರುವ ಟೋಲ್ ಪ್ಲಾಝಾಗಳ ದುಂಡಾವರ್ತನೆಗೆ ಕೇಂದ್ರ ಸರಕಾರವೇ ನೇರ ಹೊಣೆ.ಸ್ಥಳೀಯ ಸಂಸದರು ಈ ಬಗ್ಗೆ ಮೌನವಾಗಿರುವುದು ತರವಲ್ಲ.ಟೋಲ್ ಸಮಸ್ಯೆಯನ್ನು ಸಂಸದರು ಮುಂದೆ ನಿಂತು ಶೀಘ್ರ ಬಗೆಹರಿಸದಿದ್ದಲ್ಲಿ ಸಂಸದರ ವಿರುದ್ಧವೇ ಹೋರಾಟ ನಡೆಸಬೇಕಾದೀತು ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಎಚ್ಚರಸಿದ್ದಾರೆ.

ಶುಕ್ರವಾರ ಪಡುಬಿದ್ರಿಯ ಟೆಂಪೋ ನಿಲ್ದಾಣದಲ್ಲಿ ಹೆಜಮಾಡಿ ಟೋಲ್‍ನಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿಗೆ ಆಗ್ರಹಿಸಿ ಸ್ಥಳೀಯರ ಬೆಂಬಲದೊಂದಿಗೆ ಕರವೇ(ಪ್ರವೀಣ್ ಶೆಟ್ಟಿ ಬಣ) ನಡೆಸುತ್ತಿರುವ ಅರ್ನಿಷ್ಟಾವ ಧರಣಿ ಮುಷ್ಕರಕ್ಕೆ ಬೆಂಬಲವಾಗಿ ಭಾಗವಹಿಸಿದ ಐವನ್ ಸ್ಥಳೀಯರಿಗೆ ಟೋಲ್ ಪಡೆಯುವುದಕ್ಕೆ ತನ್ನ ವಿರೋಧವಿದೆ ಎಂದರು.
ಸೋಮವಾರವೇ ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾರೊಡಗೂಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಟೋಲ್ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರಲ್ಲದೆ ಮುಖ್ಯ ಕಾರ್ಯದರ್ಶಿಯವರ ಜತೆಗೂ ಚರ್ಚಿಸುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದರು.

ಅನಧಿಕೃತ ಗುತ್ತಿಗೆದಾರ ಕಂಪನಿಗಳಿಗೆ ಕಾಮಗಾರಿ ವಹಿಸಿದ ಕಾರಣ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದೆ.ಸಂಸದಸ ನಳಿನ್‍ಕುಮಾರ್ ಕಟೀಲ್ ಬಳಿ ನವಯುಗ್ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದೆ.ಈ ಬಗ್ಗೆ ಈಗಾಗಲೇ ವಿಧಾನಪರಿಷತ್ತಿನಲ್ಲೂ ಧ್ವನಿ ಎತ್ತಿದ್ದೆ.ಆದರೆ ಅವರು ಅದಕ್ಕೆ ಕೇಂದ್ರ ಸರಕಾರವೇ ಉತ್ತರಿಸಬೇಕು ಎಂದಿದ್ದಾರೆ.ಇಲ್ಲಿ ಕಾನೂನುಬಾಹಿರ ಸುಂಕ ವಸೂಲಾತಿಯಿಂದ ಜನರ ಸುಲಿಗೆಯಾಗುತ್ತಿದೆ. ಟೋಲ್‍ಗಳಲ್ಲಿ ಅಮಾಯಕರ ಮೇಲೆ ಗೂಂಡಾಗಿರಿಯನ್ನೂ ಮಾಡಲಾಗುತ್ತಿದೆ.ರಸ್ತೆ ಕಾಮಗಾರಿ ಎಷ್ಟು ಆಗಿದೆ ಎಂದು ಚರ್ಚೆಯಾಗುತ್ತಲೇ ಇಲ್ಲ. ಕೇವಲ ಟೋಲ್ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ.ಪಡುಬಿದ್ರಿ ಜಿಪಂ ವ್ಯಾಪ್ತಿಗೆ ಅಥವಾ ಹೆಜಮಾಡಿ ಟೋಲ್ ಪ್ಲಾಝಾ ಸುತ್ತ 20 ಕಿಮೀ ವ್ಯಾಪ್ತಿಯಲ್ಲಿ ಸುಂಕ ವಿನಾಯಿತಿ ನೀಡಲೇಬೇಕು.ಕೆಲವೇ ದಿನಗಳಲ್ಲಿ ಈ ಬಗ್ಗೆ ಉತ್ತಮ ಫಲಿತಾಂಶ ದೊರಕಿಸಿಕೊಡುತ್ತೇನೆ ಎಂದವರು ಭರವಸೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್,ಪಡುಬಿದ್ರಿ ನಾಗರಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ.ಸುಧೀರ್‍ಕುಮಾರ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್,ದಸಂಸ ಸಂಚಾಲಕ ಲೋಕೇಶ್ ಕಂಚಿನಡ್ಕ,ನವೀನ್ ಎನ್.ಶೆಟ್ಟಿ,ತಾಪಂ ಸದಸ್ಯ ದಿನೇಶ್ ಕೋಟ್ಯಾನ್,ಕರವೇ ಕಾಪು ತಾಲೂಕು ಅಧ್ಯಕ್ಷ ಎಮ್‍ಎಸ್ ಸಯ್ಯದ್ ನಿಜಾಮ್,ಹೆಜಮಾಡಿ ಘಟಕದ ಅಧ್ಯಕ್ಷ ಹಮೀದ್ ಹೆಜ್ಮಾಡಿ,ಉಪಾಧ್ಯಕ್ಷ ಗಣೇಶ್ ಮೆಂಡನ್,ಆಸಿಫ್ ಆಪತ್ಬಾಂಧವ,ಎಮ್.ಪಿ.ಮೊೈದಿನಬ್ಬ,ಅಬ್ದುಲ್ ಅಜೀಜ್,ಹಸನ್ ಬಾವಾ,ಬುಡಾನ್ ಸಾಹೇಬ್,ಸುಲೈಮಾನ್ ಕಂಚಿನಡ್ಕ,ರಹೀಂ ಕಂಚಿನಡ್ಕ,ನಜೀರ್ ಕಂಚಿನಡ್ಕ,ಯೂಸುಫ್ ಮತ್ತಿತರರು ಉಪಸ್ಥಿತರಿದ್ದರು.