ಜ.25-27:ಹೆಜಮಾಡಿಯಲ್ಲಿ ರಾಜ್ಯ ಮಟ್ಟದ ಕ್ರಿಕೆಟ್-ದುರ್ಗಾ ಪ್ರೀಮಿಯರ್ ಲೀಗ್-2ಕೆ19

ಪಡುಬಿದ್ರಿ: ಇಲ್ಲಿಗೆ ಸಮೀಪದ ಹೆಜಮಾಡಿ ಬಸ್ತಿಪಡ್ಪು ಕ್ರೀಡಾಂಗಣದಲ್ಲಿ ಜನವರಿ 25ರಿಂದ 27ರವರೆಗೆ ಹೆಜಮಾಡಿಯ ದುರ್ಗಾ ಫ್ರೆಂಡ್ಸ್ ಆಶ್ರಯದಲ್ಲಿ ರಾಜ್ಯ ಮಟ್ಟದ ಆಟಗಾರರನ್ನೊಳಗೊಂಡ ದುರ್ಗಾ ಪ್ರೀಮಿಯರ್ ಲೀಗ್-2ಕೆ19 ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ಪಂದ್ಯಾಟವನ್ನು ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಮುಖ್ಯ ಸಚೇತಕ ಐವನ್ ಡಿಸೋಜಾ ಮತ್ತು ಮಂಗಳೂರು ಗರೋಡಿ ಸ್ಟೀಲ್ಸ್‍ನ ಮನೋಜ್ ಕುಮಾರ್ ಉದ್ಘಾಟಿಸಲಿರುವರು.

8 ತಂಡಗಳು ಭಾಗವಹಿಸುವ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಟ್ರೋಫಿ ಸಹಿತ ನಗದು ರೂ.ಒಂದು ಲಕ್ಷ,ದ್ವಿತೀಯ ಟ್ರೋಫಿ ಸಹಿತ ನಗದು ರೂ.ಐವತ್ತು ಸಾವಿರ ಹಾಗೂ ವೈಯಕ್ತಿಕ ಪ್ರಶಸ್ತಿಗಳಿವೆ.


ಪಂದ್ಯಾಟದ ಟ್ರೋಫಿ,ಜೆರ್ಸಿ ಅನಾವರಣ: ಸೋಮವಾರ ರಾತ್ರಿ ಹೆಜಮಾಡಿಯ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಪಂದ್ಯಾಟದ ಟ್ರೋಫಿ,ಜೆರ್ಸಿಗಳನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭ ಮಾತನಾಡಿದ ಮುಖ್ಯ ಅತಿಥಿ ಪಡುಬಿದ್ರಿ ಕ್ರಿಕೆಟರ್ಸ್ ಮಾಜಿ ನಾಯಕ ಹರೀಶ್ ಕುಮಾರ್ ಹೆಜ್ಮಾಡಿ,ಶಾಂತಿ-ಪ್ರೀತಿ-ಸಾಮರಸ್ಯಕ್ಕಾಗಿ ನಡೆಯಲಿರುವ ಪಂದ್ಯಾಟದಲ್ಲಿ ಆಟಗಾರರು ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.ಈ ಮೂಲಕ ಕೋಮು ಸಾಮರಸ್ಯಕ್ಕೆ ಪ್ರಸಿದ್ಧಿ ಪಡೆದ ಹೆಜಮಾಡಿಗೆ ಕೀರ್ತಿ ತರಬೇಕೆಂದರು.

ಪಂದ್ಯಾಟದಲ್ಲಿ ಸಂದೇಶ್ ಶೆಟ್ಟಿ ಮಾಲಿಕತ್ವದ ಶಿವಶಕ್ತಿ ಕ್ರಿಕೆಟರ್ಸ್,ಮುನ್ನಾ ಮಾಲಿಕತ್ವದ ಬುಲೆಟ್ ಫ್ರೆಂಡ್ಸ್,ಸಂದೇಶ್ ಪುತ್ರನ್ ಮಾಲಿಕತ್ವದ ದೃಶಾ ವಾರಿಯರ್ಸ್,ಸಯ್ಯದ್ ಮಾಲಿಕತ್ವದ ಟ್ರೀ ಹೌಸ್,ಸಂತೋಷ್ ಪುಣೆ ಮಾಲಿಕತ್ವದ ಕೆ.ಸಿ.ಕೆ.,ಫಯಾಝ್ ಮಾಲಿಕತ್ವದ ಏರ್ ಇಂಡಿಯಾ,ಜಿತೇಂದ್ರ ಕೋಟ್ಯಾನ್(ಚಿಂಟು) ಮಾಲಿಕತ್ವದ ಮಾರುತಿ ಕ್ರಿಕೆಟರ್ಸ್ ಮತ್ತು ಹೇಮಾನಂದ ಪುತ್ರನ್ ಮಾಲಿಕತ್ವದ ಪ್ರತೀಕ್ ಇಲೆವೆನ್ ತಂಡಗಳು ಭಾಗವಿಸಲಿದ್ದು,ಸ್ಥಳೀಯ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಏಳು ಸ್ಥಳೀಯ ಆಟಗಾರರನ್ನು ಹೊರತುಪಡಿಸಿ ಉಳಿದಂತೆ ರಾಜ್ಯದಾದ್ಯಂತ ಯಾವುದೇ ಆಟಗಾರರನ್ನು ಆಟವಾಡಿಸಲು ಅವಕಾಶ ಕಲ್ಪಿಸಲಾಗಿದೆ.8 ತಂಡಗಳನ್ನು ಎರಡು ವಿಭಾಗವನ್ನಾಗಿಸಿ 8 ಓವರ್‍ಗಳ ಲೀಗ್ ಮಾದರ ಪಂದ್ಯಾಟ ಮೂರು ದಿನಗಳ ಕಾಲ ನಡೆಯಲಿದೆ.

ಸೋಮವಾರ ರಾತ್ರಿ ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಯುವ ಪ್ರಶಸ್ತಿ ವಿಜೇತ ಶರಣ್‍ಕುಮಾರ್ ಮಟ್ಟು,ಉದ್ಯಮಿ ಹೇಮಾನಂದ ಪುತ್ರನ್,ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಎಚ್.ರವಿ ಕುಂದರ್,ಗೌರವಾಧ್ಯಕ್ಷ ದೇವದಾಸ ಸಾಲ್ಯಾನ್,ರಾಮಮದಾಸ ಶೆಟ್ಟಿ ಪಠೇಲರ ಮನೆ,ಪುಷ್ಪರಾಜ್ ಶೆಟ್ಟಿ ಪಠೇಲರ ಮನೆ, ಉದ್ಯಮಿ ರಫೀಕ್ ಟ್ರೋಫಿ ಮತ್ತು ಜೆರ್ಸಿ ಅನಾವರಣಗೊಳಿಸಿದರು.ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.