ಜ.11: ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಹೊನಲು ಬೆಳಕಿನ ಕಂಬಳೋತ್ಸವ

ಪಡುಬಿದ್ರಿ ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 28ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳೋತ್ಸವವು ಜ.11ರ ಶನಿವಾರ ಅಡ್ವೆ ನಂದಿಕೂರಿನಲ್ಲಿ ನಡೆಯಲಿದೆ.

ಕನೆ ಹಲಗೆ, ಅಡ್ಡ ಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದ್ದು, ಹಗ್ಗ ಹಿರಿಯ ವಿಭಾಗದ ವಿಜೇತ ಕೋಣಗಳನ್ನು ಓಡಿಸಿದ ಓಟಗಾರನಿಗೆ ದಿ.ನಡುಮುಗೇರಗುತ್ತು ಕರುಣಾಕರ ಶೆಟ್ಟಿ ಸ್ಮರಣಾರ್ಥ ಒಂದು ಪವನ್ ವಿಶೇಷ ಬಹುಮಾನ ನೀಡಲಾಗುವುದು.
ಕಂಬಳೋತ್ಸವವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ ಬೆಳಿಗ್ಗೆ 8 ಗಂಟೆಗೆ ಉದ್ಘಾಟಿಸಲಿದ್ದು, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೈ.ಪ್ರಪುಲ್ಲ ಶೆಟ್ಟಿ, ಅಡ್ವೆ ಮಹಾಗಣಪತಿ ದೇವಸ್ಥಾನದ ಜೆನ್ನಿ ರವಿಶಂಕರ ಭಟ್, ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಸುಂದರ ಯು.ಸುವರ್ಣ ಪಾಲ್ಗೊಳ್ಳುವರು.

ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೆ.ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ವಿ.ಸುನಿಲ್ ಕುಮಾರ್, ಉಮಾನಾಥ ಎ. ಕೋಟ್ಯಾನ್, ಐವನ್ ಡಿಸೋಜಾ, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಕೆ.ಅಭಯಚಂದ್ರ ಜೈನ್ ಮತ್ತಿತರ ಪ್ರಮುಖರು ಭಾಗವಹಿಸುವರು.

ಜ.12 ಭಾನುವಾರ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬೆಳ್ಮಣ್ ಉದ್ಯಮಿ ಎಸ್.ಕೆ. ಸಾಲ್ಯಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿವಾಲ್, ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ಬಿ. ಪಾಲ್ಗೊಳ್ಳುವರು ಎಂದು ಕಂಬಳ ಸಮಿತಿ ಪ್ರಕಟಣೆ ತಿಳಿಸಿದೆ.