ಜೂ. 22: ಪಡುಬಿದ್ರಿ ಬಂಟರ ಸಂಘದಲ್ಲಿ ಸರಣಿ ಸಾಂಸ್ಕøತಿಕ ಕಾರ್ಯಕ್ರಮ `ಬಿರ್ದ್’ ಉದ್ಘಾಟನೆ

ಪಡುಬಿದ್ರಿ: ಬಂಟರ ಯಾನೆ ನಾಡವರ ಸಂಘ, ಪಡುಬಿದ್ರಿಯಲ್ಲಿ ಸಂಘದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವ ಉದ್ದೇಶದೊಂದಿಗೆ ಇನ್ನ ಉದಯ ಕುಮಾರ ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಸಾಂಸ್ಕøತಿಕ ಚಟುವಟಿಕೆಗಳಿಗೆ ಚಾಲನೆಯನ್ನು ನೀಡಲಾಗುತ್ತಿದ್ದು ಜೂ. 22ರಂದು ಸರಣಿ ಸಾಂಸ್ಕøತಿಕ ಕಾರ್ಯಕ್ರಮಗಳ ಹಬ್ಬ `ಬಿರ್ದ್’ಗೆ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್. ಮೋಹನ್ ಆಳ್ವ ಚಾಲನೆಯನ್ನು ನೀಡಲಿದ್ದಾರೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸಂಘವು ಕೇವಲ ಉಳ್ಳವರ ಕೈಯಲ್ಲಿರದೇ ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪಬೇಕೆಂಬ ಆಶಯದೊಂದಿಗೆ ಸಮಾಜದ ಗ್ರಾಮ ಸಭೆಗಳಿಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ. ಅಶಕ್ತರು, ಅಂಗವಿಕಲರು, ವಿಧವೆಯರು ಮುಂತಾದವರಿಗೆ ಮಾಸಾಶನವನ್ನು ನೀಡುವುದಲ್ಲದೇ ಅವರೂ ಸಮಾಜದ ಮುಖ್ಯ ವಾಹಿನಿಯನ್ನು ಸೇರುವಂತಾಗಬೇಕು. ಹಾಗಾಗಿ ಅವರನ್ನು ತಲುಪುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಮುಂದೆ ಪಡುಬಿದ್ರಿ ಬಂಟರ ಸಭಾಭವನವನ್ನು ಸಂಪೂರ್ಣ ಹವಾನಿಯಂತ್ರಿತವನ್ನಾಗಿಸುವ ಯೋಜನೆ, ಶಿಕ್ಷಣ ಕ್ಷೇತ್ರಕ್ಕೆ ಸಂಘವು ದಾಪುಗಾಲನ್ನಿಡುವ ಮತ್ತು ಧಾರ್ಮಿಕ ಶ್ರದ್ಧೆಯನ್ನು ಸಮಾಜ ಬಾಂಧವರಲ್ಲಿ ಆಳವಾಗಿರಿಸುವ ದೃಷ್ಟಿಯಿಂದ ಪ್ರತೀ ತಿಂಗಳ ಮೊದಲ ಮಂಗಳವಾರ ಸಂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನೂ ನಡೆಸಲಾಗುತ್ತದೆ ಎಂದೂ ಡಾ. ಶೆಟ್ಟಿ ವಿವರಿಸಿದರು.

ಜೂ. 22ರಂದು ಸಂಜೆ 4.30ರಿಂದ ನಿಹಾಲಿ ರೈ, ಮಂಗಳೂರು ಇವರಿಂದ ನೃತ್ಯ ವೈವಿಧ್ಯ, ಸಂಜೆ 5 ಗಂಟೆಗೆ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಅಜೇರು ದ್ವಂದ್ವ ಹಾಡುಗಾರಿಕೆಯೊಂದಿಗೆ ಭೀಷ್ಮ ವಿಜಯ' ತಾಳಮದ್ದಲೆ ಕೂಟ, ಸಂಜೆ 6ಗಂಟೆಗೆ ನಡೆಯುವಬಿರ್ದ್’ನ ಉದ್ಘಾಟನಾ ಸಮಾರಂಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿರುವರು. ವಿಶ್ವ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಭಾಗವತ, ಯಕ್ಷಧ್ರುವ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು. ಮುಂಬಯಿ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರು, ಎರ್ಮಾಳು ಶಶಿಧರ ಶೆಟ್ಟಿ ಹಾಗೂ ಸಾಂತೂರು ಭಾಸ್ಕರ ಶೆಟ್ಟಿ ಭಾಗವಹಿಸುವರು. ಇದೇ ಸಮಾರಂಭದಲ್ಲಿ ಸಂಶೋಧನಾತ್ಮಕ `ಪುರಾತನ ತುಳು ನಾಡಿನ ಜನಾಂಗಗಳು, ಹಿನ್ನೆಲೆ ಮತ್ತು ಸಂಬಂಧ’ಗಳನ್ನೊಳಗೊಂಡ ಕೃತಿಯ ಅನಾವರಣ ಗೈಯ್ಯಲಾಗುವುದೆಂದೂ ಡಾ. ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಪಡುಬಿದ್ರಿ ಬಂಟರ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಟಿಯಲ್ಲಿ ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಸಾಂಸ್ಕøತಿಕ ಸಮಿತಿ ಕಾರ್ಯದರ್ಶಿ ಶೋಭಾ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಸಾಂಸ್ಕøತಿಕ ಸಮಿತಿಯ ಸಂಚಾಲಕ ಇನ್ನ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.