ಜಿಲ್ಲೆಯ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಂದ ಕಾನೂನಿಗೆ ಸದಾ ಗೌರವ – ರಮೇಶ್ ಕೋಟ್ಯಾನ್

ಪಡುಬಿದ್ರಿ: ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್, ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್‍ನ 64 ಘಟಕಗಳ ಸದಸ್ಯರು ಮೋಟಾರು ವಾಹನ ಕಾಯಿದೆ, ಕಾನೂನುಗಳನ್ನು ಸದಾ ಗೌರವಿಸುತ್ತಾರೆ. ಮ್ಯಾಕ್ಸಿಕ್ಯಾಬ್‍ನಲ್ಲಿ ಹಿಂದಿನ ರೀತಿಯಲ್ಲೇ ವ್ಯವಹಾರ ನಡೆಸಲಾಗದು. ಸದ್ಯದ ದಂಡನಾ ಮೊತ್ತಗಳಿಂದ ರಕ್ಷಿಸಲು ಸರಕಾರದ ಮೊರೆ ಹೋಗಲು ನಿಶ್ಚಯಿಸಿರುವುದಾಗಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಹಾಗೂ ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್‍ನ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಹೇಳಿದರು.
ಅವರು ಉಡುಪಿ ಟ್ಯಾಕ್ಸಿಮೆನ್ ಹಾಗೂ ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್‍ನ ಪಡುಬಿದ್ರಿ ಘಟಕದ 28ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಸಮಿತಿಯ ವತಿಯಿಂದ ದಾನಿಗಳ ನೆರವಿನಿಂದ ಅಗತ್ಯವಿದ್ದೆಡೆ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪಡುಬಿದ್ರಿ ಘಟಕವು ಸೂಕ್ತ ಜಾಗ ನೀಡುವಂತೆ ವಿನಂತಿಸಿದ ಅವರು ಕ್ಯಾಬ್‍ಗಳಲ್ಲಿ 12 ಜನರ ಬದಲು 20 ಜನರಿಗೆ ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಮಾತನಾಡಿ, ವಿಶ್ವಾಸಾರ್ಹ ಅಧ್ಯಕ್ಷ ರವಿ ಶೆಟ್ಟಿ ಹಾಗೂ ಉತ್ತಮ ಸಂಘಟನೆಯಾಗಿ ಹೆಸರುವಾಸಿಯಾಗಿರುವ ನಿಮ್ಮ ಸಂಸ್ಥೆಯು ಮತ್ತಷ್ಟು ಬೆಳೆಯಲಿ ಎಂದರು.
ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ಮಾಜಿ ತಾ. ಪಂ. ಸದಸ್ಯ ನವೀನ್‍ಚಂದ್ರ ಜೆ. ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.

ಸನ್ಮಾನ: ಈ ಸಂದರ್ಭ ಬಡ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಸುಧಾರಣೆಗಳಿಗಾಗಿ ಅವಿರತ ಶ್ರಮಿಸುತ್ತಿರುವ ಪಡುಬಿದ್ರಿ ಕೆಪಿಎಸ್‍ನ ದೈಹಿಕ ಶಿಕ್ಷಕಿ ಫೆÇ್ಲೀರಿನ್ ಆಳ್ವ, ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ದಾನಿ ಗಣೇಶ್ ಶೆಟ್ಟಿ ಸಾಂತೂರು ಹಾಗೂ 25 ವರ್ಷಗಳಿಂದ ಸಂಘಟನೆಯಲ್ಲಿ ಸಕ್ರಿಯರಾಗಿರುವ ಹಿರಿಯ ಸದಸ್ಯ ಶೈಲೇಶ್ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಕಿ ಫೆÇ್ಲೀರಿನ್ ಆಳ್ವ ಸಮ್ಮಾನಕ್ಕುತ್ತರಿಸಿದರು.

ಸಂಸ್ಥೆಯ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹಿರಿಯ ಸದಸ್ಯ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಸುರೇಶ್ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿವೇತನ ವಿತರಣೆ: ಸದಸ್ಯರ 22 ಮಕ್ಕಳಿಗೆ ಸುಮಾರು 25000ರೂ. ಗಳ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಸಂಘಟನೆಯ ಅಧ್ಯಕ್ಷ ರವಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮಹಮ್ಮದ್ ಕೌಸರ್ ವರದಿ ವಾಚಿಸಿ ವಂದಿಸಿದರು. ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು.

ಕ್ಯಾ: ಪಡುಬಿದ್ರಿ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್ ಮೂಲಕ ಪಡುಬಿದ್ರಿ ಕೆಪಿಎಸ್‍ನ ದೈಹಿಕ ಶಿಕ್ಷಕಿ ಫೆÇ್ಲೀರಿನ್‍ಆಳ್ವ ಅವರನ್ನು ಸಮ್ಮಾನಿಸಲಾಯಿತು.