ಜಿಲ್ಲೆಯಲ್ಲಿ ನೀರಿನ ಅಭಾವ ಸ್ವಯಂಕೃತ ಅಪರಾಧ- ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ

ಪಡುಬಿದ್ರಿ: ಉಡುಪಿ ಜಿಲ್ಲೆಯಾದ್ಯಂತ ಈ ಬಾರಿ ಕಂಡು ಬಂದ ನೀರಿನ ಅಭಾವ ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧವಾಗಿದ್ದು, ಈ ಭೂಮಿ ನನಗಾಗಿ ಅಲ್ಲ- ನಮಗಾಗಿ ಎಂದು ತಿಳಿಯಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೇಳಿದರು.

ಪಡುಬಿದ್ರಿ ಬೀಚ್ ಬಳಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ, ನವದೆಹಲಿ ಸೊಸೈಟಿ ಆಫ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೇಜ್‍ಮೆಂಟ್, ಉಡುಪಿ ಜಿಲ್ಲಾ ಕರಾವಳಿ ಪ್ರವಾಸೋದ್ಯಮ ಸಂಘಟನೆ, ಪರಿಸರ ಸಂರಕ್ಷಣೆ ಇಲಾಖೆ ಉಡುಪಿ, ಮತ್ತು ಪಡುಬಿದ್ರಿ ಗ್ರಾಪಂ ವತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮರಂಭದಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ ವಿಷಯಗಳ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಅವರು ಮಾತನಾಡಿದರು.

ಇತತ್ತೀಚಿನ ದಿನಗಳಲ್ಲಿ ಮಳೆ ನೀರಿನ ಸಂಗ್ರಹ ಆಗುತ್ತಿಲ್ಲ. ಎಲ್ಲೆಲ್ಲೂ ಕಾಂಕ್ರಿಟೀಕರಣ ಕಂಡುಬರುತ್ತಿದೆ. ಕಡ್ಡಾಯ ನೀರಿನ ಹಿಂಗಿಸುವಿಕೆ ಆಗಲೇಬೇಕು. ಮುಂದಿನ ಜನಾಂಗದ ಉಳಿವಿಗೆ ಇದು ತುರ್ತು ಅಗತ್ಯವಾಗಿದೆ. ಮಕ್ಕಳು ಪ್ರಕೃತಿ ಉಳಿಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು ಎಂದವರು ಹೇಳಿದರು.

ಪ್ರಕೃತಿಗೆ ಪೂರಕವಾಗಿ ನಬಮ್ಮ ಬದುಕು ಇರಲಿ.ಹಾಗಾಗಿ ಅದಕ್ಕೆ ಪೂರಕ ಬದುಕು ಸಾಗಿಸೋಣ ಎಂದವರು ಹೇಳಿದರು.

ಸಮಾರಂಭದ ಮುಖ್ಯ ಅತಿಥಿ ಶಶಿಕಾಂತ್ ಪಡುಬಿದ್ರಿ ಮಾತನಾಡಿ, ಶಿಸ್ತುಬದ್ಧ ಜೀವನ ಕ್ರಮದಿಂದ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲು ಖಂಡಿತ ಸಾಧ್ಯವಿದೆ ಎಂದರು.

ಇದೇ ಸಂದರ್ಭ ಉಪವನ ನರ್ಸರಿ ವತಿಯಿಂದ ಮಕ್ಕಳಿಗೆ ಹೂ ಕುಂಡ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಕುಕ್ಕಿಕಟ್ಟೆ ಬಾಲಕ ಬಾಲಕಿ ಆಶ್ರಮದ ಮಕ್ಕಳು ಸಹಕರಿಸಿದರು.

ಶ್ರೀ ಕೃಷ್ಣ ಸೇವಾ ಟ್ರಸ್ಟ್ ಮತ್ತು ಬಾಲ ನಿಕೇತನ ಮಕ್ಕಳಿಂದ ಗಣ್ಯರಿಗೆ ಹೂಕುಂಡ ವಿತರಣೆ ನಡೆಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಸೀಡ್ ಬಾಲ್ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಬಳಿಕ ಪರಿಸರ ಸ್ನೇಹಿ ಜೂಟ್ ಚೀಲ ವಿತರಣೆ ನಡೆಯಿತು.ಈ ಸಂದರ್ಭ ಬೇಕ್ ಸ್ಟುಡಿಯೋದ ರಾಘವೇಂದ್ರರ ವತಿಯಿಂದ ಪರಿಸರ ಸಂಬಂಧೀ ಕೇಕ್‍ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಇದೇ ಸಂದರ್ಭ ಅರಣ್ಯ ಇಲಾಖೆ ವತಿಯಿಂದ ಪಡುಬಿದ್ರಿ ಬೀಚ್‍ನಿಂದ ಬ್ಲೂ ಫ್ಲ್ಯಾಗ್ ಬೀಚ್ ತನಕ 150 ಮರ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಳಿಕ ಸಂಘಟಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಪಡುಬಿದ್ರಿ ಬೀಚ್ ಬಳಿ ಸ್ವಚ್ಛತಾ ಕಾರ್ಯ ನಡೆಸಿದರು

ಸನ್ಮಾನ: ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ಪರಿಸರ ಸೇವೆಗೈದ ಉಡುಪಿ ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ, ಸ್ಕೌಟ್ಸ್ ಆಯುಕ್ತ ಡಾ.ವಿಜಯೇಂದ್ರ ವಸಂತ್, ಕೊಂಕಣ ರೈಲ್ವೇ ಉಪ ಮುಖ್ಯ ಚಿಕಿತ್ಸಾ ಅಧಿಕಾರಿ ಡಾ. ಸ್ಟೀವನ್ ಜಾರ್ಜ್ ಮತ್ತು ಕಾಪು ಬೀಚ್ ಗುತ್ತಿಗೆದಾರ ಯತೀಶ್ ಬೈಕಂಪಾಡಿಯವರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ವಿವಿಧ ಬೀಚ್ ಮತ್ತು ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಪಡುಬಿದ್ರಿ ಕರಾವಳಿ ಸ್ಟಾರ್ ಫ್ರೆಂಡ್ಸ್, ಉಳಿಯಾರಗೋಳಿ ಯಾರ್ಡ್ ಫ್ರೆಂಡ್ಸ್ ಗ್ರೂಪ್, ಸುದೇಶ್ ಶೆಟ್ಟಿ ಮಲ್ಪೆ, ಕ್ಲೀನ್ ಕುಂದಾಪುರ, ಉಪವನ ನರ್ಸರಿ, ಕೋಟೇಶ್ವರ ಯುವ ಮೆರೀಡಿಯನ್‍ನ ಉದಯ ಶೆಟ್ಟ ಮತ್ತು ಸತೀಶ್ ಶೆಟ್ಟಿ, ಚಂದ್ರಕಾಂತ್ ಶೆಣೈ ಕುಂದಾಪುರರವರನ್ನು ಗೌರವಿಸಲಾಯಿತು.

ಪರಿಸರ ಸಂರಕ್ಷಣೆಗಾಗಿ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲಾ ಈಕೋ ಕ್ಲಬ್‍ಗೆ ಸನ್ಮಾನಿಸಲಾಯಿತು.

ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ನವದೆಹಲಿ ಸೀಕಾಮ್‍ನ ನಿರ್ದೇಶಕಿ ಪ್ರಿಯಾಂಕಾ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ ಸಾಯಿರಾಧಾ , ಅಪ್ನಾ ಹಾಲಿಡೇಸ್‍ನ ನಾಗರಾಜ್ ಹೆಬ್ಬಾರ್, ಸಾಗರ್ ವಿದ್ಯಾ ಮಂದಿರ ಶಾಲಾ ಸಂಚಾಲಕ ಸುಕುಮಾರ್ ಶ್ರೀಯಾನ್, ಡಾ. ವಿಜಯೇಂದ್ರ ವಸಂತ್, ಡಿಎಫ್‍ಒ ಭಾಸ್ಕರ್, ಯತೀಶ್ ಬೈಕಂಪಾಡಿ ಮುಖ್ಯ ಅತಿಥಿಗಳಾಗಿದ್ದರು.

ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.