ಜನವರಿ ಎರಡನೇ ವಾರದಲ್ಲಿ ಹೆಜಮಾಡಿ ಬಂದರು ಯೋಜನೆಗೆ ಶಂಕುಸ್ಥಾಪನೆ-ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಭರವಸೆ

ಪಡುಬಿದ್ರಿ: ಹೆಜಮಾಡಿ ಹಾಗೂ ಸುತ್ತಲ ಗ್ರಾಮಗಳ ಮೀನುಗಾರರ ಬಹುದಿನದ ಬೇಡಿಕೆಯಾದ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆಗೆ ಜನವರಿ ಎರಡನೇ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೆಜಮಾಡಿಯ ಮೀನುಗಾರರಿಗೆ ಭರವಸೆ ನೀಡಿದ್ದಾರೆ.

ಭಾನುವಾರ ಪ್ರಸ್ತಾವಿತ ಹೆಜಮಾಡಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಅಧಿಕಾರಿಗಳು, ಮೀನುಗಾರ ಮುಖಂಡರು ಹಾಗೂ ಸ್ಥಳೀಯ ಮೀನುಗಾರರ ಜತೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

12 ಎಕರೆ ಮೀನುಗಾರಿಕೆ ಇಲಾಖೆಯಲ್ಲಿದ್ದು, ಸರ್ಕಾರದಿಂದ ಈಗಾಗಲೇ 9.41 ಎಕರೆ ಹಸ್ತಾಂತರಿಸಲಾಗಿದೆ. 35 ಎಕರೆ ಮಂಜೂರಾಗಬೇಕಾಗಿರುವ ಸರ್ಕಾರಿ ಜಾಗ ಹಾಗೂ ಬ್ರೇಕ್ ವಾಟರ್‍ಗೆ ಮೀಸಲಿರಿಸಿದ 6 ಎಕರೆ ಜಮೀನು ಖಾಸಗಿಯವರಲ್ಲಿದೆ. ಸರ್ಕಾರಿ ಹಾಗು ಖಾಸಗಿ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಜಮಾಡಿ ಬಂದರಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮೀನುಗಾರಿಕೆ, ಬಂದರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಶಾಸಕರು ಹಾಗೂ ಮೀನುಗಾರಿಕಾ ಮುಖಂಡರ ಸಭೆ ವಾರದೊಳಗೆ ನಡೆಸಿ ಅಂತಿಮ ರೂಪ ನೀಡಲಾಗುವುದು. ಕೇಂದ್ರದ ಅನುದಾನವಿದೆ. ಸಚಿವ ಸಂಪುಟದಲ್ಲಿ ವಿಷಯ ಮಂಡಿಸಲಾಗುತ್ತದೆ ಎಂದರು.

ಯೋಜನಾ ವೆಚ್ಚ ಏರಿಕೆ: ಯೋಜನೆ ಕಾರ್ಯಗತ ವಿಳಂಬದಿಂದ ರೂ.138.06 ಕೋಟಿ ಇದ್ದ ಯೋಜನಾ ವೆಚ್ಚ ಪ್ರಸ್ತುತ 167 ಕೋಟಿಗೆ ತಲುಪಿದ್ದು, ಖಾಸಗಿಯವರ ಭೂಸ್ವಾಧಿನತೆಗೆ ರೂ. 3.19 ಕೋಟಿ ಪಾವತಿ ಸೇರಿ 170.19 ಕೋಟಿಗೆ ತಲುಪಿದಂತಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ಮೊದಲ ಯೊಜನಾ ವೆಚ್ಚದಂತೆ 50ರ ಅನುಪಾತದಲ್ಲಿ ಮೊದಲ ಕಂತಾಗಿ ಈಗಾಗಲೇ ರೂ.13.86 ಕೋಟಿ ಮಂಜೂರು ಮಾಡಿದೆ. ಈಗ ಯೋಜನೆ ವೆಚ್ಚ ಏರಿಕೆಯಾದ ಪರಿಣಾಮ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಸಚಿವರೊಂದಿಗೆ ಬಂದರು ಪ್ರದೇಶಕ್ಕೆ ಆಗಮಿಸಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ.ಶಂಕರ್ ಮಾತನಾಡಿ, ರೆಬೆಲ್ ಶಾಸಕರ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ನೀಡುವ ಮುಖ್ಯಮಂತ್ರಿ ಯಡಿಯೂರಪ್ಪನವರು ಹೆಜಮಾಡಿ ಬಂದರು ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವರೆಂಬ ವಿಶ್ವಾಸವಿದೆ. 40 ವರ್ಷಗಳಿಂದ ಇಲ್ಲಿ ಎಲ್ಲಾ ಮುಖಂಡರು ಕೇವಲ ಭರವಸೆ ನೀಡುತ್ತಾ ಬಂದಿದ್ದಾರೆ. ಲಾಲಾಜಿಯವರೇ ಇದು ನಿಮ್ಮ ಅಳಿವು ಉಳಿವಿನ ಪ್ರಶ್ನೆ. ನೀವು ಇದನ್ನು ಮಾಡಲೇಬೇಕು. ನಿಮ್ಮೊಂದಿಗೆ ನಾವು ಇದ್ದೇವೆ, ಸಚಿವರು ಇದ್ದಾರೆ. ನಿಮ್ಮ ರಾಜಕೀಯ ಒಲವು ನಿಲುವು ಏನೇ ಇರಲಿ, ಕೇವಲ ರಸ್ತೆಗೆ ಗಮನ ಕೊಡದಿರಿ. ಮಾಡಿದರೆ ದೊಡ್ಡ ಬೇಟೆ ಹೊಡೀಬೇಕು. ಹುಲಿ ಬೇಟೆನೇ ಮಾಡಬೇಕು. ಇದು ಬಂದರಿದ್ದೇ ಮಾಡಬೇಕು. ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿ. ಬಂದರು ಮಾಡಲಾಗದಿದ್ದಲ್ಲಿ ಶಾಸಕರಾಗಿ ಏತಕ್ಕೆ ಇರಬೇಕು ಎಂದು ಪ್ರಶ್ನಿಸಿದರು.

ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಬಂದರು ನಿರ್ಮಾಣ ಯೋಜನೆ ನಿರ್ಣಾಯಕ ಹಂತಕ್ಕೆ ತಲುಪಿದ್ದೇವೆ. ಹೆಚ್ಚುವರಿಯಾಗಿ ತಗಲುವ ಮೊತ್ತವನ್ನು ಮುಖ್ಯಮಂತ್ರಿಯವರಲ್ಲಿ ಮಾತನಾಡಿ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.

ಪ್ರಸ್ತಾವಿತ ಹೆಜಮಾಡಿ ಬಂದರು ನಿರ್ಮಾಣ ಪ್ರದೇಶಕ್ಕೆ ಭೇಟಿ ನೀಡಿದ ಮೀನುಗಾರಿಕಾ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರಲ್ಲಿ ಚರ್ಚಿಸಿದರು. ಶಾಸಕ ಲಾಲಾಜಿ ಆರ್ ಮೆಂಡನ್, ನಾಡೋಜ ಜಿ.ಶಂಕರ್, ಮೀನುಗಾರಿಕ ಇಲಾಖೆ ನಿರ್ದೇಶಕ ರಾಮಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

ಜನವರಿ ತಿಂಗಳು ಬಂದರು ಶಿಲಾನ್ಯಾಸ ಮಾಡುತ್ತೇನೆಂದ ಸಚಿವರಲ್ಲಿ ಡಿ. 5 ರ ನಂತರ ಸರ್ಕಾರದ ಅಸ್ತಿತ್ವದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸ್ವಾಭಾವಿಕವಾಗಿ ಮನುಷ್ಯ ಆಶಾದಾಯಕ ಮತ್ತು ವಿಶ್ವಾಸವಂತನಿರಬೇಕು. ನಮ್ಮ ಸರ್ಕಾರ ನಿರಂತರ ಮೂರೂವರೆ ವರ್ಷಗಳ ಕಾಲ ಅಧಿಕಾರ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಮೀನುಗಾರಿಕೆÀ ಇಲಾಖೆ ನಿರ್ದೇಶಕ ರಾಮಕೃಷ್ಣ, ಬಂದರು ಇಲಾಖೆ ಕಾರವಾರ ಸುಪರಿಂಡೆಂಟ್ ಇಂಜಿನಿಯರ್ ಟಿ. ರಾಥೋಡ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮಂಚೇಗೌಡ, ಮೀನುಗಾರಿಕಾ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಗಣೇಶ್, ಕೆಎಫ್‍ಡಿಸಿ ನಿರ್ದೇಶಕ ದೊಡ್ಡಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮೀನುಗಾರಿಕಾ ಇಲಾಖೆ ಸಹಾಯಕ ಇಂಜಿನಿಯರ್ ಪಾಶ್ರ್ವನಾಥ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಪಂ ಸದಸ್ಯೆ ರೇಣುಕಾ ಪುತ್ರನ್, ಹೆಜಮಾಡಿ ಬಂದರು ಸಮಿತಿ ಅಧ್ಯಕ್ಷ ಸದಾಶಿವ ಕೋಟ್ಯಾನ್ ಪಲಿಮಾರು, ಕಾರ್ಯದರ್ಶಿ ವಿಜಯ ಬಂಗೇರ, ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಸಹದೇವ ಕರ್ಕೇರ, ಹೆಜಮಾಡಿ ಮೊಗವೀರ ಸಭಾ ಅಧ್ಯಕ್ಷ ರವಿ ಎಚ್.ಕುಂದರ್, ಮಟ್ಟು ಮೊಗವೀರ ಸಭಾ ಅಧ್ಯಕ್ಷ ಧನಂಜಯ ಡಿ ಪುತ್ರನ್, ಮೀನುಗಾರ ಪ್ರಮುಖರಾದ ನಾರಾಯಣ ಕೆ. ಮೆಂಡನ್, ಹರಿಶ್ಚಂದ್ರ ಮೆಂಡನ್, ಸುಜಿತ್ ಸಾಲ್ಯಾನ್, ಅನಿಲ್ ಕುಂದರ್, ಅಶೋಕ್ ವಿ.ಕೆ., ಏಕನಾಥ ಕರ್ಕೇರ, ವಿನೋದ್ ಕೋಟ್ಯಾನ್, ಎನ್.ಡಿ.ಬಂಗೇರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಶರಣ್‍ಕುಮಾರ್ ಮಟ್ಟು ಸ್ವಾಗತಿಸಿದರು. ಹೆಜಮಾಡಿ ಗ್ರಾಪಂ ಸದಸ್ಯ ಗೋವರ್ಧನ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.